Udupi: ವ್ಹೀಲ್ ಚೇರ್ನಲ್ಲಿ ಅಯೋಧ್ಯೆಯ ಶ್ರೀರಾಮನ ಕಾಣಲು ಹೊರಟ ಸಾಹಸಿ ಭಕ್ತ
ಉಡುಪಿ, ಡಿಸೆಂಬರ್ 12: ಅಯೋಧ್ಯೆಯಲ್ಲಿ ರಾಮಮಂದಿರ ಕಾಣುವ ಕೋಟ್ಯಾಂತರ ಜನರ ಬಯಕೆ ಈಡೇರುತ್ತಿದೆ. ಮಂದಿರದ ಕನಸು ಕಂಡ ವ್ಯಕ್ತಿಯೊಬ್ಬರು ತನ್ನ ಬಲಹೀನತೆಯನ್ನು ಕೂಡ ಲೆಕ್ಕಿಸದೆ ಅಯೋಧ್ಯೆಯ ಕಡೆ ಹೊರಟಿದ್ದಾರೆ. ಸಿಂಧಗಿ ಮೂಲದವರಾದ ಮಂಜುನಾಥ್ ವ್ಹೀಲ್ ಚೇರ್ನಲ್ಲಿ ಅಯೋಧ್ಯೆ ತೀರ್ಥಯಾತ್ರೆಗೆ ಹೊರಟಿದ್ದಾರೆ.
ಅಯೋಧ್ಯೆಯಲ್ಲಿ ಜನವರಿ22ರಂದು ಶ್ರೀರಾಮಂದಿರದಲ್ಲಿ ರಾಮನ ಪ್ರಾಣ ಪ್ರತಿಷ್ಠೆಯಾಗಲಿದೆ. ಮಂದಿರದಲ್ಲಿ ವಿರಾಜಮಾನನಾಗುವ ರಾಮನ ಕಾಣಲು ದೇಶದ್ಯಾಂತ ಇರುವ ರಾಮ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ದೇಹದ ಬಲಹೀನತೆ ಇದ್ದರೂ ಸಿಂಧಗಿ ಮೂಲದ ಮಂಜುನಾಥ್ ಅವರು ವ್ಹೀಲ್ ಚೇರ್ನಲ್ಲಿ ತೀರ್ಥಯಾತ್ರೆಗೆ ಹೊರಟಿದ್ದಾರೆ.

ಬಲಹೀನಾರದರೂ ಮಂಜುನಾಥ್ ಅವರಿಗೆ ಪ್ರವಾಸ ಮಾಡುವ ಹವ್ಯಾಸ. ತಿರುಗಾಟದಲ್ಲಿ ಆಧ್ಯಾತ್ಮ ಹುಡುಕುವ ಮಂಜುನಾಥ್ ಈಗಾಗಲೇ ಹಲವು ಪುಣ್ಯ ಕ್ಷೇತ್ರಗಳನ್ನು ಸಂದರ್ಶಿಸಿದ್ದಾರೆ. ತಿರುಗಾಟದ ಸಮಯದಲ್ಲೇ ಬಲಹೀನರಾದರೂ ಮಂಜುನಾಥ್ ಛಲ ಬಿಡದೇ ಪ್ರವಾಸ ಮಾಡಿದವರು. ನಿಂತಲ್ಲಿ ನಿಲ್ಲದೇ ಸದಾ ಪಾದರಸದಂತೆ ಚಲಿಸುವ ಮಂಜುನಾಥ್ ಈಗ ಶ್ರೀರಾಮನ ಕಾಣಲು ಅಯೋಧ್ಯೆಯತ್ತ ಹೊರಟಿದ್ದಾರೆ.
ದಿನಾ ಹತ್ತಾರು ಕೀಲೋ ಮೀಟರ್ ವ್ಹೀಲ್ ಚೇರ್‌ಅನ್ನು ಕೈಯಲ್ಲಿ ದೂಡುತ್ತಾ ಸಾಗುವ ಮಂಜುನಾಥ್ ಈ ಹಿಂದೆಯೂ ಅಯೋಧ್ಯೆಗೆ ಪ್ರಯಾಣಿಸಿದ್ದಾರೆ. ಆದರೆ ಆಗ ರಾಮ ಅಯೋಧ್ಯೆಯಲ್ಲಿ ನಿಸ್ತೇಜನಾಗಿದ್ದ. ಈಗ ಭವ್ಯ ಮಂದಿರ ತಲೆ ಎತ್ತಿದ್ದು ಅಯೋಧ್ಯೆ ತಲುಪುವ ತನಕ ಪ್ರಾಣ ಬಿಗಿಹಿಡಿದು ನಿಲ್ಲುವುದಾಗಿ ಮಂಜುನಾಥ್ ಹೇಳಿದ್ದಾರೆ. ಮಂಜುನಾಥ್ ಈಗಾಗಲೇ ಮಥುರ, ಹರಿದ್ವಾರ, ಕಾಶಿ, ತಿರುಪತಿ ಸೇರಿದಂತೆ ದೇಶದ ಎಲ್ಲಾ ಸುಪ್ರಸಿದ್ಧ ಕ್ಷೇತ್ರಗಳಿಗೆ ಭೇಟಿ ಕೊಟ್ಟಿದ್ದಾರೆ.
ಬೈಕ್, ಸೈಕಲ್ಗಳಲ್ಲಿ ದೇಶ ಸಂಚಾರ ನಡೆಸಿರುವ ಇವರು, ಕಾಲಿನ ಬಲ ಕಳೆದುಕೊಂಡ ನಂತರ ವೀಲ್ಹ್ ಚೇರ್ನಲ್ಲಿ ತೀರ್ಥಯಾತ್ರೆ ನಡೆಸುತ್ತಿದ್ದಾರೆ. ಕುಟುಂಬ ಸಂಸಾರ ಎಲ್ಲ ಇದ್ದರೂ, ಮಗನನ್ನು ಕಳೆದುಕೊಂಡಿರುವ ಮಂಜುನಾಥ್, ನೋವು ನುಂಗಿಕೊಂಡು ತನ್ನ ಗುರಿಯತ್ತ ವೇಗ ಹೆಚ್ಚಿಸಿಕೊಂಡಿದ್ದಾರೆ.
ಹತ್ತಲಾಗದ ಬೆಟ್ಟಗಳು, ತಿಳಿಯಲಾಗದ ತಗ್ಗುಗಳು, ನಿರಂತರ ಸವಾಲೊಡ್ಡುತ್ತಿದ್ದರೂ ರಾಮ ಜಪಬಲದೊಂದಿಗೆ ಯಾತ್ರೆ ಮುಂದುವರೆಸಿದ್ದಾರೆ. ಉಡುಪಿಗೆ ಬಂದ ಮಂಜುನಾಥ್ ರಥಬೀದಿಗೆ ಸುತ್ತು ಹಾಕಿ ಶ್ರೀಕೃಷ್ಣ ದರ್ಶನ ಮಾಡಿದರು. ಮುಂದೆ ಅಯೋಧ್ಯೆಗೆ ಪ್ರಯಾಣ ಬೆಳೆಸಿ ರಾಮನ ಭವ್ಯಮಂದಿರಕ್ಕೆ ಶಿರಬಾಗಿ ವಂದಿಸಿ ಜನ್ಮ ಪಾವನವಾಗಿಸೋದಾಗಿ ಮಂಜುನಾಥ್ ಉತ್ಸಾಹದಿಂದ ಹೇಳಿದ್ದಾರೆ.












Click it and Unblock the Notifications