ಕುಂದಾಪುರ: ಮುರಿದು ಬಿದ್ದ ವಿದ್ಯುತ್ ತಂತಿ ತಗುಲಿ ದಂಪತಿ ದಾರುಣ ಸಾವು
ಉಡುಪಿ, ಸೆಪ್ಟೆಂಬರ್ 30: ಮುರಿದು ಬಿದ್ದ ವಿದ್ಯುತ್ ತಂತಿ ತಗುಲಿ ದಂಪತಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕುಂದಾಪುರ ತಾಲೂಕಿನ ಹೆಮ್ಮಾಡಿಯಲ್ಲಿ ನಡೆದಿದೆ. ಮಹಾಬಲ ದೇವಾಡಿಗ (55) ಹಾಗೂ ಅವರ ಪತ್ನಿ ಲಕ್ಷ್ಮೀ ದೇವಾಡಿಗ (49) ಮೃತ ದುರ್ದೈವಿಗಳು.
ಮೃತ ಮಹಾಬಲ ದೇವಾಡಿಗ ಸುಳ್ಸೆ ಕರಣಿಕರ ಮನೆಯಲ್ಲಿ ದಿನಗೂಲಿ ಕೆಲಸ ನಿರ್ವಹಿಸುತ್ತಿದ್ದರು, ಶುಕ್ರವಾರ ಮಳೆಯ ಅಬ್ಬರದ ನಡುವೆ ಕೆಲಸಕ್ಕೆ ತೆರಳಿದ್ದರು. ಪತಿ ಸಂಜೆಯಾದರೂ ಮನೆಗೆ ಬಾರದೇ ಇರುವುದನ್ನು ಕಂಡು ಪತ್ನಿ ಲಕ್ಷ್ಮೀ ಹುಡುಕಾಟಕ್ಕೆ ತೆರಳಿದ್ದಾರೆ. ಈ ವೇಳೆ ಕಾಲುದಾರಿಯಲ್ಲಿ ತುಂಡರಿಸಿದ ವಿದ್ಯುತ್ ತಂತಿ ತಗುಲಿ ಪತಿ ಬಿದ್ದಿರುವುದನ್ನು ಲಕ್ಷ್ಮೀ ಗಮನಿಸಿದ್ದಾರೆ.

ತಕ್ಷಣವೇ ಪತಿಯನ್ನು ರಕ್ಷಿಸಲು ಸ್ಥಳೀಯರಲ್ಲಿ ನೆರವಿಗೆ ಬರುವಂತೆ ಕೂಗಿದ್ದಾರೆ. ಆದರೆ ಸ್ಥಳೀಯರು ಬರುವಷ್ಟರಲ್ಲೇ ಮಳೆ ನೀರಿನಿಂದ ಒದ್ದೆಯಾದ ಮರದ ತುಂಡಲ್ಲಿ ಪತಿಯನ್ನು ರಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ವಿದ್ಯುತ್ ಪ್ರವಹಿಸಿ ಲಕ್ಷ್ಮೀ ಪತಿಯ ಸಮೀಪವೇ ಪ್ರಾಣಬಿಟ್ಟಿದ್ದಾರೆ. ಮೃತ ದಂಪತಿ ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯವೇ ಇಂತಹ ದುರಂತಕ್ಕೆ ಕಾರಣ ಎಂದು ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಾಬಲ ದೇವಾಡಿಗ ಅವರು ಸಾವನ್ನಪ್ಪಿದ ಕಾಲು ದಾರಿಯ ಮಧ್ಯೆ ಎರಡು ವಿದ್ಯುತ್ ತಂತಿ ಹಾದು ಹೋಗಿದೆ. ಅನೇಕ ಕಡೆಗಳಲ್ಲಿ ತುಂಡಾದ ತಂತಿಗಳನ್ನು ಮತ್ತೆ ಜೋಡಿಸಲಾಗಿದೆ. ಎರಡು ತಂತಿಯಲ್ಲಿ ಒಂದು ತಂತಿ ತುಂಡಾಗಿ ಬಿದ್ದಿದ್ದು, ಇದೇ ತಂತಿ ತಗುಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮೆಸ್ಕಾಂ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವನ್ನು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್‌ಪಿ ಬೆಳ್ಳಿಯಪ್ಪ, ಕುಂದಾಪುರ ಗ್ರಾಮಾಂತರ ವೃತ್ತ ನಿರೀಕ್ಷಕ ಜಯರಾಮ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications