Udupi Elections: ಬಿಜೆಪಿಗೆ ಸೋಲುಣಿಸುತ್ತಾ ಧರ್ಮ ದಂಗಲ್! ಕೃಷ್ಣನೂರು ಉಡುಪಿ ವಿಧಾನಸಭಾ ಕ್ಷೇತ್ರ ಪರಿಚಯ
ಉಡುಪಿ, ಮಾರ್ಚ್ 24: ಕೃಷ್ಣನೂರು ಎಂದೇ ಪ್ರಸಿದ್ಧಿ ಪಡೆದಿರುವ ಉಡುಪಿ ಜಿಲ್ಲೆ ಕರ್ನಾಟಕ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು. ಪ್ರಕೃತಿ ಸೌಂದರ್ಯ, ಪ್ರವಾಸೋದ್ಯಮ, ಧಾರ್ಮಿಕ ಹಾಗೂ ಸಮಾಜಿಕ ವಿಚಾರಗಳಿಂದ ಉಡುಪಿ ಜಿಲ್ಲೆ ಕರ್ನಾಟಕದಲ್ಲಿ ತನ್ನದೇ ಆದ ಅಗ್ರಸ್ಥಾನ ಪಡೆದುಕೊಂಡಿದೆ. ಕೃಷ್ಣನೂರು ಎಂದೇ ಖ್ಯಾತಿ ಪಡೆದಿರುವ ಉಡುಪಿ ಜಿಲ್ಲೆಯ ಅಷ್ಟ ಮಠಗಳು ದೇಶ-ವಿದೇಶದಲ್ಲೂ ಖ್ಯಾತಿ ಪಡೆದಿದೆ.
ಉಡುಪಿ ಶ್ರೀ ಕೃಷ್ಣ ಮಠ, ಮಲ್ಪೆ ಸಮುದ್ರ, ಮಲ್ಪೆ ಬಂದರು, ಕಾಪು ದ್ವೀಪ ಸ್ಥಂಭ, ಮಣಿಪಾಲ, ಕತ್ತಲೆ ಬಸದಿ ಬಾರ್ಕೂರು, ಸೂರಾಲು ಅರಮನೆ, ಕಾರ್ಕಳದ ಗೊಮ್ಮಟೇಶ್ವರ, ಚತುರ್ಮುಖ ಬಸದಿ, ಅನಂತಶಯನ ದೇವಸ್ಥಾನ, ಸೈಂಟ್ ಮೇರೀಸ್ ದ್ವೀಪ, ಮೂಡುಬಿದಿರೆಯ ಸಾವಿರಕಂಬದ ಬಸದಿ, ಮರವಂತೆ ಬೀಚ್, ನೂರಾರು ದೇವಾಲಯಗಳು ಹೀಗೆ ಉಡುಪಿ ಜಿಲ್ಲೆಗೆ ಒಮ್ಮೆಲೆ ಕಾಲಿಟ್ಟರೆ ಮರಳಿ ಬರಲು ಮನಸಾಗದಷ್ಟು ಪ್ರವಾಸಿ ತಾಣಗಳನ್ನು ಈ ಜಿಲ್ಲೆ ಹೊಂದಿದೆ.

ಉಡುಪಿಜನರ ಮುಖ್ಯ ಕಸಬು ವ್ಯವಸಾಯವಾದರೂ ಇತರ ಕ್ಷೇತ್ರಗಳಲ್ಲೂ ಜಿಲ್ಲೆಯು ಅಭಿವೃದ್ಧಿ ಹೊಂದುತ್ತಿದೆ. ಮತ್ಸ್ಯೊದ್ಯಮ ಅಂದರೆ ಮೀನು ಹಿಡಿಯುವುದು ಕೂಡ ಕೆಲವರ ಮುಖ್ಯ ಕಸಬು ಆಗಿದೆ. ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಉತ್ತಮ ರಸ್ತೆ ಸಂಪರ್ಕವಿರುವಿದರಿಂದ ಕೈಗಾರಿಕೋದ್ಯಮದಲ್ಲೂ ಜಿಲ್ಲೆ ಅಭಿವೃದ್ಧಿ ಹೊಂದುತ್ತಿದೆ.
ಇನ್ನು ಉಡುಪಿ ಜಿಲ್ಲೆಯಲ್ಲಿ ಉಡುಪಿ, ಕುಂದಾಪುರ, ಬೈಂದೂರು, ಕಾರ್ಕಳ, ಕಾಪು ಒಟ್ಟು ಐದು ವಿಧಾನಸಭಾ ಕ್ಷೇತ್ರಗಳಿದ್ದು. ಉಡುಪಿ ವಿಧಾನಸಭಾ ಕ್ಷೇತ್ರದ ರಾಜಕೀಯ ವಿಶ್ಲೇಷಣೆ ಇಲ್ಲಿದೆ. ಸದ್ಯ ಬಿಜೆಪಿ ಭದ್ರಕೋಟೆಯಾಗಿರುವ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಬಿಜೆಪಿ ಮುಖಂಡರು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಉಡುಪಿ ರಾಜಕೀಯ ಇತಿಹಾಸ
1972ರಿಂದ ಉಡುಪಿ ರಾಜಕೀಯ ಕ್ಷೇತ್ರ ರಂಗು ಪಡೆದಿದ್ದು, ವಿ.ಎಸ್ ಆಚಾರ್ಯ ಹಾಗೂ ಮನೋರಮಾ ಮಧ್ವರಾಜ್ ನಡುವೆ ಭಾರೀ ಜಿದ್ದಾಜಿದ್ದಿಯ ಸ್ಪರ್ಧೆ ಪ್ರತಿ ಬಾರಿ ರಾಜಕೀಯ ಚಿತ್ರಣವನ್ನು ಬದಲಾಯಿಸುತ್ತಿತ್ತು. 1994 ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಯು.ಆರ್.ಸಭಾಪತಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಕ್ಕೆ ಸೋಲುಣಿಸಿ ಗೆಲುವು ಸಾಧಿಸಿದ್ದರು. ಬಳಿಕ ನಡೆದ ರಾಜಕೀಯ ಬೆಳವಣಿಗೆಗಳು ಗಮನಾರ್ಹ, ಕ್ಷೇತ್ರದಲ್ಲಿ ಕಾಂಗ್ರೆಸ್ ಹಿಡಿತ ಕಳೆದುಕೊಳ್ಳುತ್ತಿದಂತೆ ಮನೋರಮಾ ಮಧ್ವರಾಜ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಹೀಗಾಗಿ ಬಿಜೆಪಿ ಮತ್ತಷ್ಟು ಬಲಿಷ್ಠಗೊಂಡಿತು. ಹೀಗಾಗಿ 2004ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಘುಪತಿ ಭಟ್ ಗೆಲುವು ಸಾಧಿಸಿ ಕ್ಷೇತ್ರವನ್ನು ಬಿಜೆಪಿ ತೆಕ್ಕೆಗೆ ತಂದರು.
ಬಿಜೆಪಿಗೆ ಸೋಲು ತಂದಿದ್ದ ಲೈಂಗಿಕ ಹಗರಣ ಆರೋಪ
ಮನೋರಮಾ ಮಧ್ವರಾಜ್ ಬಿಜೆಪಿಯಲ್ಲಿದ್ದರೂ ಪುತ್ರ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್‌ನಲ್ಲೇ ಉಳಿದುಕೊಂಡು ಉಡುಪಿ ಭಾಗದಲ್ಲಿ ಪಕ್ಷ ಸಂಘಟಿಸಿ, ಕಾಂಗ್ರೆಸ್‌ನ ಪ್ರಮುಖ ಮುಖಂಡರಾಗಿ ಹೊರ ಹೊಮ್ಮಿದರು. ಈ ಮೂಲಕ ಕಾಂಗ್ರೆಸ್‌ನಿಂದ ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡರು.

ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ಅಭ್ಯರ್ಥಿಯಾಗಿದ್ದ ರಘುಪತಿ ಭಟ್ ವಿರುದ್ಧ ಲೈಂಗಿಕ ಹಗರಣ ಆರೋಪದಿಂದ ಪಕ್ಷಕ್ಕೆ ಮುಜುಗರವಾಗಿತ್ತು. ಹೀಗಾಗಿ 2013ರ ವಿಧಾನಸಭಾ ಚುನಾವಣೆಯಲ್ಲಿ ಬಿ.ಸುಧಾಕರ್ ಶೆಟ್ಟಿ ಬಿಜೆಪಿ ಅಭ್ಯರ್ಥಿಯಾಗಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ ಮನೋರಮಾ ಮಧ್ವರಾಜ್ ಮತ್ತೆ ಕಾಂಗ್ರೆಸ್‌ಗೆ ಬಂದಿದ್ದು, 2013ರ ವಿಧಾನಸಭಾ ಚುನಾವಣೆಯಲ್ಲಿ ಬಿ.ಸುಧಾಕರ್ ವಿರುದ್ಧ ಪ್ರಮೋದ್ ಮಧ್ವರಾಜ್ ಭರ್ಜರಿ ಗೆಲುವು ಸಾಧಿಸಿದರು.
2018ರ ಚುನಾವಣೆಯಲ್ಲಿ ಮತ್ತೆ ಉಡುಪಿ ರಾಜಕೀಯ ಚಿತ್ರ ಬದಲಾಗಿದ್ದು, ದೇಶದಲ್ಲಿ ಅದಾಗಲೇ ನರೇಂದ್ರ ಮೋದಿ ಪ್ರಧಾನ ಮಂತ್ರಿ ಸ್ಥಾನ ಅಲಂಕರಿಸಿದ್ದರು. ಹೀಗಾಗಿ ಕರಾವಳಿಯಲ್ಲಿ ಮೋದಿ ಹಾಗೂ ಬಿಜೆಪಿ ಅಲೆ ಜೋರಾಗಿತ್ತು. ಹೀಗಾಗಿ ಬಿಜೆಪಿ ಅಭ್ಯರ್ಥಿ ರಘುಪತಿ ಭಟ್ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಮತ್ತೆ ಸೋಲು ಕಂಡರು. ಚುನಾವಣೆ ಸೋಲಿನ ಬಳಿಕ ಎಲ್ಲಾ ರಾಜಕೀಯ ಲೆಕ್ಕಾಚಾರಗಳನ್ನು ಮಾಡಿ ಪ್ರಮೋದ್ ಮಧ್ವರಾಜ್ ಕೆಲ ಸಮಯದ ಬಳಿಕ ಬಿಜೆಪಿಗೆ ಸೇರ್ಪಡೆಯಾದರು. ಹೀಗಾಗಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಭದ್ರವಾಗಿದೆ.

ಉಡುಪಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು
ಮುಂದಿನ ಚುನಾವಣೆಗೆ ಬಿಜೆಪಿ ಟಿಕೆಟ್ ಪಡೆಯಲು ಅನೇಕ ಆಕಾಂಕ್ಷಿಗಳ ಹೆಸರು ಕೇಳಿ ಬರುತ್ತಿದೆ. ಹಾಲಿ ಶಾಸಕ ರಘುಪತಿ ಭಟ್ ಪ್ರಮುಖ ಹೆಸರಾಗಿದ್ದು, ಗೆಲ್ಲಬಹುದು ಎನ್ನುವ ಉಡುಪಿ ಕ್ಷೇತ್ರದ ಟಿಕೆಟ್‌ಗಾಗಿ ಅನೇಕರು ಕಣ್ಣಿಟ್ಟಿದ್ದಾರೆ. ವಿಶ್ವ ಹಿಂದೂ ಪರಿಷತ್ ಮುಖಂಡ ಬೈಕಾಡಿ ಸುಪ್ರಸಾದ್ ಶೆಟ್ಟಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನ ಗಣೇಶ್, ಮಾಜಿ ಜಿಲ್ಲಾಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಸೇರಿದಂತೆ ಇನ್ನೂ ಕೆಲವರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಉಡುಪಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು
ಇನ್ನು ಕಾಂಗ್ರೆಸ್‌ನಿಂದ ಅಶೋಕ್ ಕುಮಾರ್ ಕೊಡವೂರು ಉಡುಪಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗುವ ಸಾಧ್ಯತೆಯಿದ್ದು, ಉಡುಪಿ ಹಾಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಕೃಷ್ಣ ಮೂರ್ತಿ ಆಚಾರ್ಯ ಟಿಕೆಟ್‌ಗಾಗಿ ಕೆಪಿಸಿಸಿಗೆ ಅರ್ಜಿ ಅಲ್ಲಿಸಿದ್ದಾರೆ.
ಉಡುಪಿ ಕ್ಷೇತ್ರದ ಮತದಾರರ ವಿವರ
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,90,785 ಮತಗಳಿದ್ದು, ಮೊಗವೀರ ಹಾಗೂ ಬಿಲ್ಲವ ಮತಗಳು ಅತ್ಯಧಿಕವಾಗಿದೆ. 42,000 ಮೊಗವೀರ ಮತಗಳು, 40,000 ಬಿಲ್ಲವ ಮತಗಳು, 30,785 ಬಂಟ್ಸ್ ಮತಗಳು, 18,000 ಬ್ರಾಹ್ಮಣ ಮತಗಳು ಹಾಗೂ ಇಪ್ಪತ್ತೂ ಸಾವಿರಕ್ಕೂ ಅಧಿಕ ಅಲ್ಪ ಸಂಖ್ಯಾತರ ಮತಗಳಿದ್ದು, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಮತಗಳು ಕೂಡ ಇಲ್ಲಿ ಮುಖ್ಯವಾಗಿದೆ.
2018 ಉಡುಪಿ ವಿಧಾನಸಭಾ ಚುನಾವಣಾ ಫಲಿತಾಂಶ
2018ರ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಬಿಜೆಪಿಯಿಂದ ರಘುಪತಿ ಭಟ್, ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ವಿರುದ್ಧ ಕಣಕ್ಕಳಿದಿದ್ದರು. ಜಿದ್ದಾಜಿದ್ದಿಯ ಪೈಪೋಟಿಯಲ್ಲಿ ರಘುಪತಿ ಭಟ್ 84,946 ಮತಗಳನ್ನು ಪಡೆದು 12,044 ಮತಗಳ ಅಂತರದಲ್ಲಿ ಪ್ರಮೋದ್ ಮಧ್ವರಾಜ್ ಅವರನ್ನು ಸೋಲಿಸಿದರು.
ಚುನಾವಣೆ ಪೂರ್ವ ಸಮೀಕ್ಷೆಯ ಫಲಿತಾಂಶವೇನು?
ಲೋಕ್ ಪೋಲ್ (Lok Poll) ಸಂಸ್ಥೆ ಕೈಗೊಂಡ ಚುನಾವಣೆ ಪೂರ್ವ ಸಮೀಕ್ಷೆಯ ಪ್ರಕಾರ, ಉಡುಪಿಯಲ್ಲಿ ಬಿಜೆಪಿಗೆ ಸುಲಭವಾಗಿ ಗೆಲುವು ಧಕ್ಕುವ ಸಾಧ್ಯತೆ ಕಡಿಮೆ ಎಂದು ತಿಳಿದು ಬರುತ್ತದೆ. ಸಮೀಕ್ಷೆ ಪ್ರಕಾರ ಬಿಜೆಪಿಗೆ ಇಲ್ಲಿ ಶೇ.48 ರಷ್ಟು ಮತಗಳು ಲಭಿಸಿದರೆ, ಕ್ಷೇತ್ರದ ಶೇಕಡಾ 46 ರಷ್ಟು ಮತಗಳು ಕಾಂಗ್ರೆಸ್ ನಾಯಕರ ಪಾಲಾಗಲಿವೆ. ಇತರೆ ಎರಡು ಪಕ್ಷಗಳಿಗೆ ತಲಾ ಶೇಕಡಾ 3ರಷ್ಟು ಮತಗಳು ಬರಲಿವೆ ಎಂದು ವಿವರಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ನಡೆದ ಹಿಜಾಬ್ ವಿವಾದ, ಹಿಂದೂ ಕಾರ್ಯಕರ್ತರ ಸಾವು ಪ್ರಕರಣ, ಧರ್ಮ ದಂಗಲ್ ಹೆಸರಿನಲ್ಲಿ ನಡೆದ ಬೆಳವಣಿಗೆಳಿಂದ ಬಿಜೆಪಿ ಮತಗಳ ಮೇಲೆ ಪೆಟ್ಟು ಬೀಳುವ ಸಾಧ್ಯತೆ ಇದೆ.
| 2018 | ಕೆ ರಘುಪತಿ ಭಟ್ ಬಿಜೆಪಿ | 84,946 | ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ | 72,902 |
| 2013 | ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ | 86,868 | ಬಿ ಸುಧಾಕರ್ ಶೆಟ್ಟಿ ಬಿಜೆಪಿ | 47,344 |
| 2008 | ಕೆ.ರಘುಪತಿ ಭಟ್ ಬಿಜೆಪಿ | 58,920 | ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ | 56,441 |












Click it and Unblock the Notifications