ತುಮಕೂರು ಜಿಲ್ಲೆಯ ತೋವಿನಕೆರೆ ಗ್ರಾಮದಲ್ಲಿ ಹುಳು ಬಿದ್ದಿರುವ ಕಳಪೆ ಗುಣಮಟ್ಟದ ಅಕ್ಕಿ ವಿತರಣೆ: ರೊಚ್ಚಿಗೆದ್ದ ಜನ
ತುಮಕೂರು, ಜನವರಿ 24: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆಯಡಿಯಲ್ಲಿ ಉಚಿತ ಪಡಿತರ ವಿತರಣೆ ಮಾಡುತ್ತಿದೆ. ಆದರೆ, ಕೆಲವೆಡೆ ಹುಳು ಬಿದ್ದಿರುವ ಕಳಪೆ ಗುಣಮಟ್ಟದ ಅಕ್ಕಿಯನ್ನು ನೀಡಲಾಗುತ್ತಿದೆ ಎನ್ನುವ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಇದೀಗ ಇಂತಹದ್ದೇ ಘಟನೆಯೊಂದು ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೂಕಿನ ತೋವಿಕನ ಗ್ರಾಮದಲ್ಲಿ ನಡೆದಿದೆ.
ಘನಘೋರ ಘಟನೆ: ಹೌದು.. ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯಡಿಯಲ್ಲಿ ಉಚಿತ ಪಡಿತರ ನೀಡಲಾಗುತ್ತಿದೆ. ಆದರೆ, ಕೆಲವು ಭಾಗಗಳಲ್ಲಿ ಯಾರೂ ಹೇಳುವವರು, ಕೇಳುವವರು ಇಲ್ಲ ಅಂತಾ ಹೇಳಿ ಹುಳು ಬಿದ್ದಿರುವಂತಹ ರಾಗಿ, ಅಕ್ಕಿ ವಿತರಣೆ ಮಾಡುತ್ತಿರುವ ಘಟನೆಗಳು ಬೆಳಕಿದೆ ಬಂದಿವೆ. ಇದೀಗ ಇಂತಹದ್ದೇ ಘನಘೋರ ಘಟನೆಯೊಂದು ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಇದಕ್ಕೆ ಭಾರೀ ಆಕ್ರೋಶಗಳು ಭುಗಿಲೆದ್ದಿವೆ.

ಹುಳುಗಳು ಗೂಡು ಕಟ್ಟಿರುವ ಅಕ್ಕಿ ವಿತರಣೆ: ಪಡಿತರ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಇದೇ ಕಾರಣಕ್ಕೆ ಜನರು ಕಳಪೆ ಗುಣಮಟ್ಟದ ಪಡಿತರ ಕೊಟ್ಟರೂ ಸಹ ಪ್ರಶ್ನೆ ಮಾಡದೇ, ತೆಗೆದುಕೊಂಡು ಹೋಗುತ್ತಾರೆ ಎನ್ನುವ ಮನಸ್ಥಿತಿ ನ್ಯಾಯಬೆಲೆ ಅಂಗಡಿ ಮಾಲಿಕರದ್ದಾಗಿದೆ. ಆದರೆ, ಇದೀಗ ಹುಳುಗಳು ಗೂಡು ಕಟ್ಟಿರುವ ಹಾಗೂ ನೆಲದ ಬಿದ್ದ ನೂರಾರು ಜನರು ತುಳಿದುಕೊಂಡು ಓಡಾಡಿರುವ ಕಳಪೆ ಗುಣಮಟ್ಟದ ಅಕ್ಕಿಯನ್ನು ವಿತರಣೆ ಮಾಡಿರುವ ಘಟನೆ ತೋವಿಕನ ಗ್ರಾಮದಲ್ಲಿ ನಡೆದಿದೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ತೋವಿನಕೆರೆ ಕೃಷಿ ಪತ್ತಿನ ಸಹಕಾರ ಸಂಘದ ಸರ್ಕಾರಿ ನ್ಯಾಯ ಬೆಲೆ ಅಂಗಡಿಯಲ್ಲಿ ಗುರುವಾರದಿಂದ ಉಪಯೋಗಕ್ಕೆ ಬಾರದ ಕಲ್ಮಶ ತುಂಬಿರುವ ಅಕ್ಕಿಯನ್ನು ವಿತರಣೆ ಮಾಡಲಾಗಿದೆ. ಇದರಿಂದ ಆಕ್ರೋಶಗೊಂಡ ಫನಾನುಭವಿಗಳು ಕಳಪೆ ಗುಣಮಟ್ಟದ ಅಕ್ಕಿಯನ್ನು ಮತ್ತೆ ಹಿಂತಿರುಗಿಸುತ್ತಿದ್ದಾರೆ.
ನ್ಯಾಯ ಬೆಲೆ ಅಂಗಡಿಗೆ ಒಂದು ಲಾಟ್ 68 ಮೂಟೆ ಅಕ್ಕಿ ಬಂದಿದ್ದು, ಅದರಲ್ಲಿ 20ಕ್ಕೂ ಹೆಚ್ಚು ಚೀಲಗಳಲ್ಲಿ ಕಳಪೆ ಗುಣಮಟ್ಟದ ಅಕ್ಕಿ ಸರಬರಾಜು ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಸರಿಯಾಗಿ ಕೊಟ್ಟಿದ್ದಾರೆ ಎಂದು ತಿಳಿದುಕೊಂಡು ಜನರು ಗುಣಮಟ್ಟ ಪರಿಶೀಲಿಸದರೆ, ಅಕ್ಕಿ ತೆಗೆದುಕೊಂಡು ಹೋಗಿದ್ದರು. ಆದರೆ, ಮನೆಗೆ ಹೋದಮೇಲೆ ಪರಿಶೀಲಿಸಿದಾಗ ಅದರಲ್ಲಿ ಬರೀ ಹುಳುಗಳ ಹಿಂಡು ಪತ್ತೆ ಆಗಿದ್ದು, ಆ ಅಕ್ಕಿಯನ್ನು ಹಿಂದಿರುಗಿಸಿದ ಘಟನೆ ನಡೆದಿದೆ. ಅಲ್ಲದೆ, ನಂತರ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.
ಕಳಪೆ ಅಕ್ಕಿ ವಿತರಣೆ: ಶುಕ್ರವಾರ ಬೆಳಗ್ಗೆ ಈ ವಿಷಯ ತಿಳಿದ ತಕ್ಷಣ ಕೊರಟಗೆರೆಯ ಆಹಾರ ಇಲಾಖೆಯ ಉಪ ತಹಶಿಲ್ದಾರ್ ಗಿರಿ ಸುತ್ತೆ ಮತ್ತು ಶ್ರೀನಿವಾಸು ಅಗಮಿಸಿ ಕಳಪೆ ಅಕ್ಕಿಯನ್ನು ಸೀಜ್ ಮಾಡಿಕೊಂಡು ವಾಪಸು ತೆಗೆದುಕೊಂಡು ಹೋಗಿದ್ದಾರೆ. ಪ್ರತಿ ಬಾರಿ ಬರುವ ಅಕ್ಕಿಯ ಚೀಲಗಳನ್ನು ತುಂಬಿ ಯಂತ್ರದ ಮೂಲಕ ಹೊಲಿಗೆ ಹಾಕಿರುತ್ತಾರೆ. ಆದರೆ, ಈ ಬಾರಿ ಬಂದಿದ್ದ ಚೀಲಗಳಲ್ಲಿ ಕಲ್ಮಶದ ಜೊತೆ ಅಕ್ಕಿ ಬೆರಕೆ ಮಾಡಿ ಕೈಯಿಂದ ಮೂಟೆಯನ್ನು ಹೊಲಿದಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ಆಕ್ರೋಶ: ಇಂತಹ ಘಟನೆಗಳು ನಡೆದಿರುವುದು ಮೊದಲೇನಲ್ಲ. ಈ ಹಿಂದೆಯೂ ಸಹ ಇಂತಹ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಳಿಕ ಎಚ್ಚೆತ್ತ ಅಧಿಕಾರಿಗಳು ಸ್ಥಳೀಯ ನ್ಯಾಯಬೆಲೆ ಅಂಗಡಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡ ಘಟನೆಗಳು ನಡೆದಿವೆ. ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದು ಎಂದರೆ, ಸರ್ಕಾರ ಖುದ್ದಾಗಿ ಇಂತಹ ಘಟನೆಗಳಲ್ಲಿ ಭಾಗಿ ಆದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಜನರು ಆಗ್ರಹಿಸುತ್ತಲೇ ಬಂದಿದ್ದಾರೆ.












Click it and Unblock the Notifications