ಪಾವಗಡ: ಏಷ್ಯಾದ ಅತೀ ದೊಡ್ಡ ಸೋಲಾರ್ ಪಾರ್ಕ್ ಜಲಾವೃತ; ಜಿಲ್ಲಾಧಿಕಾರಿ ಕೊಟ್ಟ ಭರವಸೆ ಏನು?
ಪಾವಗಡ, ಅಕ್ಟೋಬರ್, 23: ತಾಲೂಕಿನಲ್ಲಿ ಸತತವಾಗಿ ಮಳೆ ಸುರಿದ ಕಾರಣ ಕ್ಯಾತಗಾನ ಚೆರ್ಲು ಬಳಿಯ ಸೋಲಾರ್ ಪಾರ್ಕ್ ಮುಳುಗಡೆ ಆಗಿತ್ತು. ಏಷ್ಯಾದಲ್ಲಿಯೇ ಅತೀ ದೊಡ್ಡ ಸೌರ ವಿದ್ಯುತ್ ಘಟಕ ಮಳೆ ನೀರಿನಿಂದ ಮುಳುಗಡೆ ಆಗಿದ್ದ ಪ್ರದೇಶಕ್ಕೆ ಜಿಲ್ಲಾಧಿಕಾರಿ ವೈ . ಎಸ್.ಪಾಟೀಲ್ ಭೇಟಿ ನೀಡಿ ಪಾರ್ಕ್ ಪರಿಶೀಲಿಸಿ ರೈತರೊಂದಿಗೆ ಮಾತುಕತೆ ನಡೆಸಿದ್ದಾರೆ. ಯುವಕನೋರ್ವ ವಿದ್ಯುತ್ ಹರಿಯುವ ಸೋಲಾರ್ ಪಾರ್ಕ್ ಸ್ಥಳದಲ್ಲಿ ಈಜಾಡಿದ್ದು, ಇದರಿಂದ ಅಧಿಕಾರಿಗಳಿಗೆ ಜನರು ತರಾಟೆ ತೆಗೆದುಕೊಂಡಿದ್ದರು. ಬಳಿಕ ಎಚ್ಚೆತ್ತ ಅಧಿಕಾರಿಗಳು ಸೋಲಾರ್ ಪಾರ್ಕ್ ಸುತ್ತ ತಂತಿ ಬೇಲಿಯನ್ನು ಹಾಕುವ ವ್ಯವಸ್ಥೆಯನ್ನು ಮಾಡಿದ್ದಾರೆ.
ಒಂದು ತಿಂಗಳಿನಿಂದ ತಾಲೂಕಿನಾದ್ಯಂತ ಧಾರಾಕಾರ ಮಳೆಯಾದ ಹಿನ್ನೆಲೆಯಲ್ಲಿ ಕ್ಯಾತಗಾನಕೆರೆ ತುಂಬಿ ಹರಿದಿತ್ತು. ಕೆರೆಯ ನೀರು 4ನೇ ಬ್ಲಾಕ್‌ಗೆ ನುಗ್ಗಿರುವ ಹಿನ್ನೆಲೆಯಲ್ಲಿ 30 ಹೆಕ್ಟೇರ್ ಸೋಲಾರ್ ಪಾರ್ಕ್ ಪ್ರದೇಶ ಜಲಾವೃತವಾಗಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿತ್ತು. ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಎಸ್‌ಪಿ ರಾಹುಲ್ ಕುಮಾರ್ ಶಹಪುರವಾಡ್, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಘಟನಾ ಸ್ಥಳ ಪರಿಶೀಲಿಸಿ ನಂತರ ಸುತ್ತಲಿನ ಗ್ರಾಮಗಳ ಸಾರ್ವಜನಿಕರೊಂದಿಗೆ ಸಭೆ ನಡೆಸಿದ್ದರು. ಕ್ಯಾತಗಾನ ಕೆರೆಯ ಹಿನ್ನೀರು ಹೊರಬಿಟ್ಟರೆ ಕೆರೆ ಕೆಳಗಿನ ರೈತರ ಕೃಷಿ ಬೆಳೆಗಳು ಹಾಗೂ ಜಮೀನುಗಳು ಮುಳುಗುವ ಆತಂಕ ಹೆಚ್ಚಾಗಿದೆ. ಇದರಿಂದ ಕೆರೆಯ ತೂಬು ತೆಗೆಯಲು ರೈತರು ಕೂಡ ಒಪ್ಪಿರಲಿಲ್ಲ.

ಜಿಲ್ಲಾಧಿಕಾರಿ ಮನವಿಗೆ ರೈತರ ಸ್ಪಂದನೆ
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಕೆರೆಯ ಕೆಳಗಿನ ರೈತರ ಹಾಗೂ ಗ್ರಾಮಸ್ಥರ ಜೊತೆ ಸಭೆ ನಡೆಸಿದ್ದು, ಕೆರೆಯ ತೂಬು ತೆರೆದು ನೀರು ಹೊರಬಿಡಲಾಗುವುದು. ನಂತರ ಆಗುವ ನಷ್ಟವನ್ನು ಕಂಪನಿಯಿಂದ ಪರಿಹಾರ ರೂಪದಲ್ಲಿ ನೀಡಲಾಗುವುದು ಎಂದು ರೈತರಿಗೆ ತಿಳಿಸಿದ್ದರು. ಜಿಲ್ಲಾಧಿಕಾರಿಗಳ ಸೂಚನೆಗೆ ರೈತರು ಒಪ್ಪಿಗೆ ಸೂಚಿಸಿದ್ದು, ಗುರುವಾರ ಬೆಳಗ್ಗೆ ಕೆರೆಯ ತೂಬು ಎತ್ತಿ ನೀರನ್ನು ಹೊರಬಿಡಲಾಗಿದೆ. ಇದರಿಂದ ಸುಮಾರು 200 ಹೆಕ್ಟೇರ್ ಫಸಲು ನಷ್ಟ ಆಗಲಿದ್ದು, ರೈತರಿಗೆ ಸೂಕ್ತ ಪರಿಹಾರವೂ ಸಿಗಲಿದೆ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ್ದರು.
ಈ ಸಂದರ್ಭದಲ್ಲಿ ಮಧುಗಿರಿ ಎಸಿ ಸೋಮಪ್ಪ ಕಡಕೋಳ, ತಹಶೀಲ್ದಾರ್ ವರದರಾಜು ಹಾಗೂ ಕಂದಾಯ ಇಲಾಖೆಯ ಹಲವು ಅಧಿಕಾರಿಗಳು ಸೇರಿದಂತೆ ಸೋಲಾರ್ ಕಂಪನಿಯ ಸಿಬ್ಬಂದಿ, ಪೊಲೀಸರು ಮತ್ತು ಸುತ್ತಮುತ್ತಲಿನ ಗ್ರಾಮಗಳ ರೈತರು ಉಪಸ್ಥಿತರಿದ್ದರು.

ಪಾವಗಡ ಬಳಿಯಿರುವ ಸೋಲಾರ್ ಪಾರ್ಕ್
ತುಮಕೂರು ಜಿಲ್ಲೆಯಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ. ಇದರಿಂದ ಪಾವಗಡದ ಸೋಲಾರ್ ಪಾರ್ಕ್ ಮುಳುಗಡೆಯಾಗಿದೆ. ಇದು ಏಷ್ಯಾದ ಅತೀ ದೊಡ್ಡ ಸೌರ ಘಟಕ ಅನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಲಾವೃತವಾಗಿರುವ ಸೋಲಾರ್ ಪಾರ್ಕ್‌ನಲ್ಲಿ ಯುವಕನೋರ್ವ ಈಜು ಹೊಡೆದಿದ್ದಾನೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ತಿರುಮಣಿ ಗ್ರಾಮದಲ್ಲಿ ಈ ಸೋಲಾರ್ ಪಾರ್ಕ್ ಇದ್ದು, ಸುಮಾರು 12,500 ಎಕರೆ ವಿಸ್ತೀರ್ಣದಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ.

ಪ್ಯಾನೆಲ್‌ಗಳ ಸುತ್ತ ಪ್ರವಹಿಸುತ್ತಿದ್ದ ವಿದ್ಯುತ್
ವಳ್ಳೂರು ಮತ್ತು ಕ್ಯಾತಗಾನ ಕೆರೆ ಗ್ರಾಮಗಳ ಮದ್ಯೆ ಸೋಲಾರ್ ಘಟಕ ಮುಳುಗಡೆ ಆಗಿತ್ತು. ಮುಳುಗಡೆ ಆಗಿರುವ ಸೋಲಾರ್ ಪ್ಯಾನೆಲ್‌ಗಳ ಸುತ್ತಲೂ ವಿದ್ಯುತ್ ಪ್ರವಹಿಸುತ್ತಿದೆ. ಆದರೆ ಸಿಬ್ಬಂದಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಘಟಕದಲ್ಲಿ ಯುವಕ ಈಜಾಡಿದ್ದಾನೆ. ಈ ವೇಳೆ ಅವಘಡ ಸಂಭಸಿದ್ದರೆ ಯಾರು ಹೊಣೆ? ಎನ್ನುವುದು ಸಾರ್ವಜನಿಕರ ಪ್ರಶ್ನೆ ಆಗಿದೆ. ಸಾರ್ವಜನಿಕ ವಲಯದಲ್ಲಿ ಸೌರ ಪಾರ್ಕ್ ಅಧಿಕಾರಿಗಳ ವೈಫಲ್ಯದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

2,050 ಮೆಗಾವಾಟ್ ಸೌರ ವಿದ್ಯುತ್ ಉತ್ಪಾದನೆ
ಇದು ಏಷ್ಯಾದ ಅತಿ ದೊಡ್ಡ ಸೋಲಾರ್ ಪಾರ್ಕ್ ಎಂದು ಪ್ರಖ್ಯಾತಿ ಪಡೆದಿದ್ದು, ಈ ಪಾರ್ಕ್ 2,050 ಮೆಗಾವಾಟ್ ಸೌರ ವಿದ್ಯುತ್ ಅನ್ನು ಉತ್ಪಾದನೆ ಮಾಡುತ್ತದೆ. ತುಮಕೂರು ಜಿಲ್ಲೆಯಲ್ಲಿ ಸತತವಾಗಿ ಮಳೆ ಸುರಿಯುತ್ತಲೇ ಇದ್ದು, ಇಲ್ಲಿನ ರೈತರು ಕಂಗಾಲಾಗಿದ್ದಾರೆ. ಇದರ ನಡುವೆಯೇ ಪಾವಗಡದ ಬಳಿ ಇರುವ ಸೋಲಾರ್ ಪಾರ್ಕ್ ಮುಳುಗಡೆ ಆಗಿ ಜನರನ್ನು ಮತ್ತಷ್ಟು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಯುವಕನೋರ್ವ ಸೋಲಾರ್ ಪಾರ್ಕ್ ಬಳಿ ಸಂಗ್ರಹವಾಗಿದ್ದ ನೀರಿನಲ್ಲಿ ಈಜಾಡಿರುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಸೋಲಾರ್ ಪಾರ್ಕ್ ಬಳಿ ವಿದ್ಯುತ್ ಹರಿಯುತ್ತಲೇ ಇದೆ. ಇದರಿಂದ ಅನಾಹುತಗಳು ಸಂಭವಸಿದರೆ ಯಾರು ಹೊಣೆ? ಎಂದು ಪ್ರಶ್ನಿಸುವ ಮೂಲಕ ಸೋಲಾರ್ ಪಾರ್ಕ್ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ. ಇದಕ್ಕೆ ಸೂಕ್ತ ವ್ಯವಸ್ಥೆ ಮಾಡಿ ಯಾರು ಒಳಗೆ ಬರದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಾರ್ವಜನಿಕರು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.












Click it and Unblock the Notifications