Memu Train: ಈ ಮಾರ್ಗಗಳಲ್ಲಿ ಮೆಮು ರೈಲು ಆರಂಭ, ಮಾಹಿತಿ, ವಿವರ ಇಲ್ಲಿದೆ
Memu Train: ರಾಜ್ಯದಲ್ಲಿ ರೈಲ್ವೆ ವಿಭಾಗದಲ್ಲಿ ಅಭಿವೃದ್ಧಿ ಕಾರ್ಯಗಳು ಆಗುತ್ತಲೇ ಇರುತ್ತವೆ. ಇನ್ನು ತುಮಕೂರು ನಗರದ ರೈಲು ನಿಲ್ದಾಣದಿಂದ ಶೀಘ್ರದಲ್ಲೇ ಹೊಸದಾಗಿ ಮೆಮು ರೈಲು ಸಂಚಾರ ಶುರು ಅಗಲಿದೆ ಎಂದು ಕೇಂದ್ರ ಜಲ ಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮಾಹಿತಿ ನೀಡಿದ್ದಾರೆ. ಮಾಹಿತಿ ಇಲ್ಲಿದೆ ತಿಳಿಯಿರಿ.
ರಾಜ್ಯದಲ್ಲಿ ಹೊಸದಾಗಿ ಮೂರು ಮೆಮು ರೈಲು ಆರಂಭ ಆಗಲಿದ್ದು, ಇದರಲ್ಲಿ ಒಂದು ತುಮಕೂರು ನಿಲ್ದಾಣದಿಂದ ಆರಂಭ ಆಗಲಿದೆ. ನಗರದಿಂದ ಬೆಳಗ್ಗೆ 9 ಗಂಟೆಗೆ ಹೊರಟು 10ಕ್ಕೆ ಬೆಂಗಳೂರಿನ ಯಶವಂತಪುರ ನಿಲ್ದಾಣ ತಲುಪಲಿದೆ. ಸಂಜೆ 6 ಗಂಟೆಗೆ ಯಶವಂತಪುರದಿಂದ ಹೊರಟು ಸಂಜೆ 7ಕ್ಕೆ ನಗರಕ್ಕೆ ಆಗಮಿಸಲಿದ್ದು, ಇದರಲ್ಲಿ 1,500 ಜನ ಪ್ರಯಾಣ ಮಾಡಬಹುದು ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರೈಲ್ವೆ ಮಾರ್ಗದ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಬೆಂಗಳೂರು-ತುಮಕೂರು-ಅರಸಿಕೆರೆ ಮಾರ್ಗದಲ್ಲಿ 220 ಕೋಟಿ ರೂಪಾಯಿ ವೆಚ್ಚದಲ್ಲಿ ಆಟೋಮೆಟಿಕ್ ರೈಲ್ವೆ ಸಿಗ್ನಲ್ ಅಳವಡಿಕೆ ಮಾಡುವ ಯೋಜನೆಗೆ ಮಂಜೂರಾತಿ ನೀಡಲಾಗಿದೆ. ಬೆಂಗಳೂರು-ತುಮಕೂರು ಭಾಗದ ಮುಂದಿನ 30 ವರ್ಷಗಳ ಬೆಳವಣಿಗೆ ದೃಷ್ಟಿಯನ್ನಿಟ್ಟುಕೊಂಡು ಯೋಜನೆ ರೂಪಿಸಲಾಗಿದೆ. ಇದರಿಂದ ರೈಲುಗಳ ಸಂಚಾರ ಸುಲಭ ಆಗುತ್ತದೆ ಎಂದು ಹೇಳಿದರು.
ಅಮೃತ್ ಭಾರತ್ ಯೋಜನೆಯಡಿ ರಾಜ್ಯದ 61 ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ತುಮಕೂರಿನ ರೈಲು ನಿಲ್ದಾಣದ ಅಭಿವೃದ್ಧಿಗೆ 118 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಈಗಾಗಲೇ ಗುಬ್ಬಿ ನಿಲ್ದಾಣದ ಆಧುನೀಕರಣಕ್ಕೆ 7.50 ಕೋಟಿ ರೂಪಾಯಿ, ಹಾಸನದ ಶ್ರವಣಬೆಳಗೊಳ ನಿಲ್ದಾಣಕ್ಕೆ 9 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದರು.
ತುಮಕೂರಿನಲ್ಲೂ ನಿಲುಗಡೆ: ವಂದೇ ಭಾರತ್ ರೈಲು ತುಮಕೂರು ರೈಲ್ವೆ ನಿಲ್ದಾಣದಲ್ಲೂ ನಿಲುಗಡೆಗೆ ಆದೇಶ ನೀಡಲಾಗಿದೆ ಎಂದು ಕೇಂದ್ರ ಜಲಶಕ್ತಿ ಮತ್ತು ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಅವರು ತಿಳಿಸಿದರು.
ತುಮಕೂರಿನಲ್ಲಿ ನೂತನ ಕಚೇರಿ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು ನಗರದ ರೈಲ್ವೆ ನಿಲ್ದಾಣಕ್ಕೆ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹೆಸರು ಹಾಗೂ ಕ್ಯಾತಸಂದ್ರ ರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗಾ ರೈಲ್ವೆ ನಿಲ್ದಾಣ ಎಂದು ನಾಮಕರಣ ಮಾಡುವಂತೆ ಸಂಘ ಸಂಸ್ಥೆಗಳ ಮನವಿ ಬಂದಿವೆ. ಈ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂದರು.
ಶ್ರವಣಬೆಳಗೊಳ ಮತ್ತು ಗುಬ್ಬಿ ರೈಲ್ವೆ ನಿಲ್ದಾಣಗಳನ್ನು ಅಮೃತ್ ಭಾರತ್ ಯೋಜನೆಯಡಿ ಮೇಲ್ದರ್ಜೆಗೇರಿಸಲು ತಲಾ 7 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ತುಮಕೂರಿನಿಂದ ಅರಸೀಕೆರೆವರೆಗೂ 220 ಕೋಟಿ ರೂಪಾಯಿ ವೆಚ್ಚದಲ್ಲಿ ಆಟೋಮೆಟಿಕ್ ಸಿಗ್ನಲ್ ಅಳವಡಿಸಲು ಮಂಜೂರಾತಿ ಮಾಡಲಾಗಿದೆ. ತುಮಕೂರು-ರಾಯದುರ್ಗ ರೈಲ್ವೆ ಯೋಜನೆಯನ್ನು 2026ರ ಡಿಸೆಂಬರ್ ವೇಳೆಗೆ ಲೋಕಾರ್ಪಣೆ ಮಾಡಲಾಗುವುದು ಎಂದರು.












Click it and Unblock the Notifications