ಕಂದಕಕ್ಕೆ ಬಸ್ ಉರುಳಿ ಭೀಕರ ಅಪಘಾತ: 32 ಮಂದಿ ದುರ್ಮರಣ
ಶ್ರೀನಗರ, ಜುಲೈ 1: ಜಮ್ಮು ಮತ್ತು ಕಾಶ್ಮೀರದ ಕಿಶ್ತ್‌ವಾರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 32 ಮಂದಿ ದುರ್ಮರಣ ಹೊಂದಿದ್ದಾರೆ. 13ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಸ್, ಕಿಶ್ತ್‌ವಾರ್ ಬಳಿಯ ಆಳವಾದ ಕಂದಕಕ್ಕೆ ಉರುಳಿ ಈ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಸಾವಿಗೀಡಾದವರ ಸಂಖ್ಯೆ ಇನ್ನೂ ಹೆಚ್ಚಲಿದೆ ಎಂದು ಹೇಳಲಾಗಿದೆ. ಜೆಕೆ17-6787 ಸಂಖ್ಯೆಯ ಖಾಸಗಿ ಮಿನಿಬಸ್ ಕೇಶ್ವಾನ್ ಎಂಬಲ್ಲಿಂದ ಕಿಶ್ತ್‌ವಾರ್‌ಗೆ ತೆರಳುತ್ತಿತ್ತು. ಶ್ರಿಗ್ವಾರಿ ಬಳಿ ಕಿರಿದಾದ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಉರುಳಿದೆ. ಈ ಬಸ್ ಪ್ರಯಾಣಿಕರಿಂದ ತುಂಬಿ ತುಳುಕುತ್ತಿತ್ತು ಎನ್ನಲಾಗಿದೆ. ಬಸ್‌ನಲ್ಲಿ ಸುಮಾರು 45 ಪ್ರಯಾಣಿಕರಿದ್ದು, ಇದು ಬಸ್‌ನ ಸಾಮರ್ಥ್ಯಕ್ಕಿಂತಲೂ ಅಧಿಕವಾಗಿತ್ತು.

ಸೋಮವಾರ ಬೆಳಿಗ್ಗೆ 7.30ರ ವೇಳೆಗೆ ಈ ದುರಂತ ಸಂಭವಿಸಿದೆ. ಭಾರಿ ಆಳವಾದ ಕಂದಕದೊಳಗೆ ಬಸ್ ಉರುಳಿರುವುದರಿಂದ ರಕ್ಷಣಾ ಕಾರ್ಯಾಚರಣೆ ಕ್ಲಿಷ್ಟಕರವಾಗಿ. ಪೊಲೀಸರು ಹಾಗೂ ಆಡಳಿತ ವರ್ಗದೊಂದಿಗೆ ರಕ್ಷಣಾ ಕಾರ್ಯಕ್ಕೆ ಸ್ಥಳೀಯರು ಕೈಜೋಡಿಸಿದ್ದಾರೆ.
ಸುಮಾರು 20 ಪ್ರಯಾಣಿಕರ ಮೃತದೇಹವನ್ನು ಕಂದಕದಿಂದ ಹೊರಕ್ಕೆ ತೆಗೆಯಲಾಗಿದೆ. ಗಾಯಗೊಂಡ ಐವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಮೇಲೆಕ್ಕೆತ್ತಿ ವೈದ್ಯಕೀಯ ಚಿಕಿತ್ಸೆಗೆ ಕರೆದೊಯ್ಯಲು ಹೆಲಿಕಾಪ್ಟರ್ ಸೌಲಭ್ಯ ಒದಗಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.











Click it and Unblock the Notifications