Virat Kohli: ಬೆಂಗಳೂರಿಗೆ ಬಾ ನೋಡ್ಕೊತಿನಿ! ಕೊಟ್ಟ ಮಾತಿನಂತೆ ಖಲೀಲ್ ಅಹ್ಮದ್‌ಗೆ ಬಾರಿಸಿದ ವಿರಾಟ್ ಕೊಹ್ಲಿ
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ 2 ರನ್‌ಗಳ ಗೆಲುವು ಸಾಧಿಸಿದೆ. ಈ ಗೆಲುವಿನ ಮೂಲಕ ಆರ್ ಸಿಬಿ ಪ್ಲೇಆಫ್ ಸ್ಥಾನ ಬಹುತೇಕ ಖಚಿತವಾಗಿದ್ದು, ಇನ್ನೊಂದು ಗೆಲುವು ಪಡೆದರೂ ಅಧಿಕೃತವಾಗಿ ಪ್ಲೇಆಫ್‌ಗೆ ಎಂಟ್ರಿ ಕೊಡಲಿದೆ.
ಶನಿವಾರ ಸಿಎಸ್‌ಕೆ ವಿರುದ್ಧ ಪಂದ್ಯದಲ್ಲಿ ಆರ್ ಸಿಬಿ ಸಾಕಷ್ಟು ತಪ್ಪುಗಳನ್ನು ಮಾಡಿದರೂ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ವಿರಾಟ್ ಕೊಹ್ಲಿ, ಜೇಕಬ್ ಬೆಥೆಲ್, ರೊಮಾರಿಯೋ ಶೆಫರ್ಡ್ ಅವರ ಬ್ಯಾಟಿಂಗ್ ನೆರವಿನಿಂದ ಆರ್ ಸಿಬಿ ಬೃಹತ್ ಮೊತ್ತ ಕಲೆಹಾಕಿತು. ಅದರಲ್ಲೂ ವಿರಾಟ್ ಕೊಹ್ಲಿ ಆರಂಭದಲ್ಲಿ ಅಕ್ಷರಶಃ ಅಬ್ಬರಿಸಿದರು. ಸಾಮಾನ್ಯವಾಗಿ ಆರಂಭದಲ್ಲಿ ನಿಧಾನವಾಗಿ ಆಡುವ ಅವರು ಸಿಎಸ್‌ಕೆ ವಿರುದ್ದ ಮಾತ್ರ ಮೊದಲ ಎಸೆತದಿಂದಲೇ ಸ್ಫೋಟಕ ಬ್ಯಾಟಿಂಗ್ ಆಡಲು ಮುಂದಾದರು.

9 ಎಸೆತಗಳಲ್ಲೇ 28 ರನ್ ಗಳಿಸುವ ಮೂಲಕ ಆರ್ ಸಿಬಿಗೆ ಭರ್ಜರಿ ಆರಂಭ ಒದಗಿಸಿದರು. ಅಷ್ಟಕ್ಕೆ ಸುಮ್ಮನಾಗದ ಕೊಹ್ಲಿ 33 ಎಸೆತಗಳಲ್ಲಿ 5 ಬೌಂಡರಿ 5 ಸಿಕ್ಸರ್ ಸಹಿತ 62 ರನ್ ಗಳಿಸಿದರು. ಅದರಲ್ಲೂ ಸಿಎಸ್‌ಕೆ ಪ್ರಮುಖ ವೇಗಿ ಖಲೀಲ್ ಅಹ್ಮದ್‌ಗೆ ಒಂದೇ ಓವರ್ ನಲ್ಲಿ ಎರಡು ಸಿಕ್ಸರ್ ಬಾರಿಸಿದರು.
ಚೆನ್ನೈನಲ್ಲಿ ವಾರ್ನಿಂಗ್ ಕೊಟ್ಟಿದ್ದ ಕೊಹ್ಲಿ
ನಿಮಗೆ ನೆನಪಿದ್ದರೆ ಆರ್ ಸಿಬಿ ಚೆನ್ನೈನಲ್ಲಿ ಸಿಎಸ್‌ಕೆ ವಿರುದ್ಧ ಆಡುವಾಗ ವಿರಾಟ್ ಕೊಹ್ಲಿ ಮತ್ತು ಖಲೀಲ್ ಅಹ್ಮದ್ ನಡುವೆ ಮಾತಿನ ಚಕಮಕಿಯಾಗಿತ್ತು. ಖಲೀಲ್ ವರ್ತನೆಯಿಂದ ಕೊಹ್ಲಿ ಅಸಮಾಧಾನಗೊಂಡಿದ್ದರು. ಪಂದ್ಯದ ಬಳಿಕ ಕೂಡ ಖಲೀಲ್ ಕೊಹ್ಲಿ ಬಳಿ ಮಾತನಾಡುವಾಗಲೂ ಕೊಹ್ಲಿ ಸಿಟ್ಟಾಗಿದ್ದರು. ಇಬ್ಬರನ್ನೂ ಸಮಾಧಾನ ಮಾಡಲು ಇತರ ಆಟಗಾರರು ಪ್ರಯತ್ನಿಸಿದರೂ ಕೊಹ್ಲಿ ಶಾಂತವಾಗಿರಲಿಲ್ಲ. ಅಂದೇ ಬೆಂಗಳೂರಿಗೆ ಬಾ ನೋಡ್ಕೋತಿನಿ ಎನ್ನುವಂತೆ ಸನ್ನೆ ಮಾಡಿದ್ದರು.
ಅದರಂತೆ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಖಲೀಲ್ ಅಹ್ಮದ್‌ಗೆ ಕೊಹ್ಲಿ ತರಾಟೆಗೆ ತೆಗೆದುಕೊಂಡರು. ಸಿಎಸ್‌ಕೆ ತಂಡದ ಯಶಸ್ವಿ ಬೌಲರ್ ಆಗಿದ್ದ ಖಲೀಲ್ ಅಹ್ಮದ್ ಆರ್ ಸಿಬಿ ವಿರುದ್ಧ ದುಬಾರಿ ಬೌಲರ್ ಆದರು. ಕೇವಲ 3 ಓವರ್ ಗಳಲ್ಲಿ ಬರೋಬ್ಬರಿ 65 ರನ್ ಬಿಟ್ಟುಕೊಟ್ಟರು. ಮೊದಲ ಎರಡು ಓವರ್ ನಲ್ಲೇ ಬರೋಬ್ಬರಿ 32 ರನ್ ಬಿಟ್ಟುಕೊಟ್ಟರೆ, 19ನೇ ಓವರ್ ನಲ್ಲಿ 33 ರನ್ ಬಿಟ್ಟುಕೊಟ್ಟರು.
ಕೊಹ್ಲಿ ಕ್ಯಾಚ್ ಹಿಡಿದು ಚೆಂಡನ್ನು ನೆಲಕ್ಕೆ ಹೊಡೆದು ಅಸಹನೆ ತೋರಿಸಿದ್ದ ಖಲೀಲ್ ಅಹ್ಮದ್‌ಗೆ ರೊಮಾರಿಯೋ ಶೆಫರ್ಡ್ ಪಾಠ ಕಲಿಸಿದರು. ಒಂದೇ ಓವರ್ ನಲ್ಲಿ 33 ರನ್ ಬಾರಿಸುವ ಮೂಲಕ ಸಿಎಸ್‌ಕೆ ವಿರುದ್ಧ ಅಬ್ಬರಿಸಿದರು. ಇದೇ ಕಾರಣಕ್ಕೆ ಕೊಹ್ಲಿ ಅಭಿಮಾನಿಗಳು ಹೇಳೋದು ಕರ್ಮ ಬಿಟ್ರು ಕೊಹ್ಲಿ ನಿಮ್ಮನ್ನ ಬಿಡಲ್ಲ ಅಂತ. ಕೊಹ್ಲಿನೇ ಹೇಳೋ ಹಾಗೆ ನೀವೇನಾದ್ರು ಕೊಟ್ರೆ ಅದುನ್ನ ವಾಪಸ್ ತಗೊಳಕು ರೆಡಿ ಇರ್ಬೇಕು, ಇಲ್ಲ ಕೊಡೋಕೆ ಹೋಗ್ಬಾರ್ದು. ಏನೇ ಆದ್ರೂ ಸಿಎಸ್‌ಕೆ ವಿರುದ್ಧ ಆರ್ ಸಿಬಿ ಈ ಆವೃತ್ತಿಯಲ್ಲಿ ಎರಡೂ ಪಂದ್ಯ ಗೆದ್ದಿರುವುದು ಅಭಿಮಾನಿಗಳಿಗೆ ಭಾರಿ ಖುಷಿ ಕೊಟ್ಟಿದೆ.












Click it and Unblock the Notifications