WTC Points Table: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿ; ಫೈನಲ್ ತಲುಪಲು ಭಾರತಕ್ಕೆ ಇನ್ನೂ ಇದೆ ಅವಕಾಶ
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ 4ನೇ ಪಂದ್ಯದಲ್ಲಿ ಭಾರತ ಸೋಲನುಭವಿಸಿದೆ. 5ನೇ ದಿನ ಭಾರತಕ್ಕೆ ಗೆಲುವಿಗೆ 340 ರನ್‌ಗಳ ಅಗತ್ಯವಿತ್ತು. ದಿನಪೂರ್ತಿ ಬ್ಯಾಟಿಂಗ್ ಮಾಡಿ ಡ್ರಾ ಮಾಡಿಕೊಳ್ಳುವ ಉದ್ದೇಶದಿಂದಲೇ ಭಾರತ ಎರಡನೇ ಇನ್ನಿಂಗ್ಸ್ ಆರಂಭಿಸಿತ್ತು. ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಎಚ್ಚರಿಕೆಯಿಂದಲೇ ಬ್ಯಾಟಿಂಗ್ ಆರಂಭಿಸಿದರು.
16 ಓವರ್ ವರೆಗೂ ವಿಕೆಟ್ ಬೀಳದಂತೆ ಈ ಜೋಡಿ ನೋಡಿಕೊಂಡಿತು. ಆದರೆ 17ನೇ ಓವರ್ ನ ಮೊದಲನೇ ಎಸೆತದಲ್ಲೇ ರೋಹಿತ್ ಶರ್ಮಾರನ್ನು ಔಟ್ ಮಾಡುವ ಮೂಲಕ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಮೊದಲ ಯಶಸ್ಸು ಪಡೆದರು. ಬಳಿಕ ಬಂದ ಕೆಎಲ್ ರಾಹುಲ್ ಕೂಡ 5 ಎಸೆತಗಳಲ್ಲಿ ಯಾವುದೇ ರನ್ ಗಳಿಸದೇ ವಿಕೆಟ್ ಒಪ್ಪಿಸಿದರು.

ವಿರಾಟ್ ಕೊಹ್ಲಿ 29 ಎಸೆತಗಳಲ್ಲಿ 5 ರನ್ ಗಳಿಸಿದ್ದಾಗ ಮಿಚೆಲ್ ಸ್ಟಾರ್ಕ್ ಅವರ ಬೌಲಿಂಗ್‌ನಲ್ಲಿ ಔಟಾದರು. ಬಳಿಕ ಬಂದ ರಿಷಬ್ ಪಂತ್ ಯಶಸ್ವಿ ಜೈಸ್ವಾಲ್ ಜೊತೆಗೂಡಿ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಪಂದ್ಯ ಡ್ರಾನಲ್ಲಿ ಅಂತ್ಯವಾಗುತ್ತದೆ ಎಂದೇ ನಿರೀಕ್ಷಿಸಿದ್ದಾಗ ಬೌಲಿಂಗ್‌ಗೆ ಬಂದ ಟ್ರಾವಿಸ್ ಹೆಡ್ ಪಂತ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಪಂತ್ ಔಟಾಗುತ್ತಿದ್ದಂತೆ ಭಾರತ ತಂಡದ ಪತನ ಶುರುವಾಯಿತು. ಪಂತ್ ಬಳಿಕ ಬಂದ ಯಾವ ಆಟಗಾರರೂ ಎರಡಂಕಿ ದಾಟಲಿಲ್ಲ, ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. 121 ರನ್‌ಗಳಿಗೆ 4 ವಿಕೆಟ್ ಕಳೆದುಕೋಂಡಿದ್ದ ಭಾರತ ಅಂತಿಮವಾಗಿ 155 ರನ್‌ಗಳಿಗೆ ಆಲೌಟ್ ಆಯಿತು.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿ ಹೇಗಿದೆ?
ಭಾರತದ ವಿರುದ್ಧ ನಾಲ್ಕನೇ ಟೆಸ್ಟ್ ಗೆದ್ದ ಆಸ್ಟ್ರೇಲಿಯಾ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದ್ದಲ್ಲದೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಮತ್ತಷ್ಟು ಹತ್ತಿರವಾಗಿದೆ. ಆಸ್ಟ್ರೇಲಿಯಾ ಇನ್ನೊಂದು ಪಂದ್ಯ ಗೆದ್ದರೆ ಫೈನಲ್ ಸ್ಥಾನ ಖಚಿತವಾಗಲಿದೆ. ಈಗಾಗಲೇ ದಕ್ಷಿಣ ಆಫ್ರಿಕಾ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದು ಈಗ ಇನ್ನೊಂದು ಸ್ಥಾನಕ್ಕಾಗಿ ಆಸ್ಟ್ರೇಲಿಯಾ ಮತ್ತು ಭಾರತದ ನಡುವೆ ಪೈಪೋಟಿ ಶುರುವಾಗಿದೆ.
ಮೆಲ್ಬೋರ್ನ್ ಟೆಸ್ಟ್ ಸೋತರೂ ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪುವ ಅವಕಾಶವಿದೆ. ಸಿಡ್ನಿಯಲ್ಲಿ ನಡೆಯಲಿರುವ ಕೊನೆಯ ಟೆಸ್ಟ್ ಪಂದ್ಯ ಗೆದ್ದರೆ ಭಾರತದ ಆಸೆ ಜೀವಂತವಾಗಿರಲಿದೆ. ಆದರೆ ಜನವರಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ ಗೆಲ್ಲಬೇಕಿದೆ.
ಒಂದು ವೇಳೆ ಸಿಡ್ನಿಯಲ್ಲಿ ನಡೆಯಲಿರುವ ಕೊನೆಯ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಗೆದ್ದರೆ ಭಾರತದ ಫೈನಲ್ ಕನಸು ಭಗ್ನವಾಗಲಿದೆ. ಸುಲಭವಾಗಿ ಫೈನಲ್ ತಲುಪುವ ಅವಕಾಶ ಹೊಂದಿದ್ದ ಭಾರತ ಕಳೆದ 7 ಟೆಸ್ಟ್ ಪಂದ್ಯಗಳಲ್ಲಿ ಅದನ್ನು ತಾನಾಗೆ ಕೈಚೆಲ್ಲಿದೆ. ಕಳೆದ 7 ಟೆಸ್ಟ್ ಪಂದ್ಯಗಳಲ್ಲಿ 1 ಪಂದ್ಯದಲ್ಲಿ ಮಾತ್ರ ಭಾರತ ಗೆಲುವು ಸಾಧಿಸಿದ್ದು, 5 ಪಂದ್ಯಗಳಲ್ಲಿ ಸೋಲನುಭವಿಸಿದೆ ಒಂದೇ ಒಂದು ಟೆಸ್ಟ್ ಮಾತ್ರ ಡ್ರಾನಲ್ಲಿ ಅಂತ್ಯವಾಗಿದೆ.












Click it and Unblock the Notifications