ODI World Cup: ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಭಾರತ: ಶುರುವಾಯ್ತು ಹೊಸ ಭಯ!
ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಅಮೋಘ ಪ್ರದರ್ಶನ ನೀಡುತ್ತಿದೆ, ಇದುವರೆಗೂ ಆಡಿರುವ 8 ಪಂದ್ಯಗಳನ್ನು ಗೆದ್ದಿರುವ ಭಾರತ ಸದ್ಯ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಉಳಿದ ಯಾವ ತಂಡಗಳೂ ಕೂಡ ನಂಬರ್ 1 ಸ್ಥಾನಕ್ಕೆ ಬರಲು ಸಾಧ್ಯವಿಲ್ಲದ ಕಾರಣ ಭಾರತ ಮೊದಲ ಸ್ಥಾನದೊಂದಿಗೆ ಸೆಮಿಫೈನಲ್ ಪ್ರವೇಶಿಸಲಿದೆ.
ಭಾರತದ ಸೆಮಿಫೈನಲ್ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದ್ದು, 4ನೇ ಸ್ಥಾನದಲ್ಲಿ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ತಂಡದ ವಿರುದ್ಧ ಆಡಲಿದೆ.

ಈಡನ್ ಗಾರ್ಡನ್ಸ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿತು. ವಿರಾಟ್ ಕೊಹ್ಲಿ ಅಮೋಘ ಶತಕ ಮತ್ತು ಶ್ರೇಯಸ್ ಅವರ ಅರ್ಧಶತಕ, ನಾಯಕ ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಅವರ ಸ್ಫೋಟಕ ಆಟದ ನೆರವಿನಿಂದ ಭಾರತ 326 ರನ್ ಗಳಿಸಿದರೆ, ದಕ್ಷಿಣ ಆಫ್ರಿಕಾ 83 ರನ್ ಗಳಿಸುವುಷ್ಟರಲ್ಲಿ ಆಲೌಟ್ ಆಯಿತು. ರವೀಂದ್ರ ಜಡೇಜಾ 5 ವಿಕೆಟ್ ಪಡೆದು ಮಿಂಚಿದರು.
ಭಾರತ ತಂಡಕ್ಕೆ ಎಚ್ಚರಿಕೆ
ಭಾರತ ತಂಡದ ಉತ್ತಮ ಪ್ರದರ್ಶನದ ಹೊರತಾಗಿಯೂ, ಪಾಕಿಸ್ತಾನದ ಮಾಜಿ ನಾಯಕ ಮಿಸ್ಬಾ-ಉಲ್-ಹಕ್ ಟೀಮ್ ಇಂಡಿಯಾಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ. ಹೌದು, ಏಕದಿನ ವಿಶ್ವಕಪ್ ಇತಿಹಾಸವನ್ನು ನೋಡಿದರೆ ಇದು ನಿಜ ಕೂಡ ಎನಿಸುತ್ತದೆ.
2003, 2015, 2019 ಮತ್ತು ನಡೆಯುತ್ತಿರುವ 2023 ರ ವಿಶ್ವಕಪ್ ಆವೃತ್ತಿಗಳ ನಡುವೆ ಒಂದು ಸಾಮ್ಯತೆ ಇದೆ. ಭಾರತವು 2003 ಮತ್ತು 2023 ಎರಡೂ ವಿಶ್ವಕಪ್‌ಗಳಲ್ಲಿ ಸತತ ಎಂಟು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 2015 ಮತ್ತು 2023ರಲ್ಲಿ ಲೀಗ್ ಹಂತದಲ್ಲಿ ಎಲ್ಲಾ ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು, 2019 ಮತ್ತು 2023 ಎರಡರಲ್ಲೂ ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರು.
ಆದರೂ ಈ ಮೂರು ವಿಶ್ವಕಪ್ ಆವೃತ್ತಿಗಳಲ್ಲಿ ಭಾರತ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ. 2003ರಲ್ಲಿ ಭಾರತ ಫೈನಲ್‌ನಲ್ಲಿ ಸೋಲನುಭವಿಸಿದರೆ, 2015 ಮತ್ತು 2019 ರ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪಂದ್ಯದಲ್ಲಿ ಸೋಲನುಭವಿಸಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ 243 ರನ್‌ಗಳ ಜಯದ ನಂತರ, ಎ ಸ್ಪೋರ್ಟ್ಸ್ ಜೊತೆ ಮಾತನಾಡಿದ ಮಿಸ್ಬಾ, ಇತರ ತಂಡಗಳಿಗೆ ಇನ್ನೂ ಅವಕಾಶವಿದೆ ಎಂದು ಹೇಳಿದರು, ನಾಕೌಟ್ ಪಂದ್ಯಗಳಲ್ಲಿ ಭಾರತ ಹೆಚ್ಚು ಒತ್ತಡಕ್ಕೆ ಒಳಗಾಗುತ್ತದೆ ಎಂದು ಅವರು ಹೇಳಿದರು.
"ಗುಂಪು ಹಂತದಲ್ಲಿ ಭಾರತ ಉತ್ತಮವಾಗಿದೆ, ಆದರೆ ಅವರು ನಾಕೌಟ್ ಹಂತಕ್ಕೆ ಹೋದಾಗ, ತಂಡ ಗೆಲ್ಲುವ ಫೇವರಿಟ್ ಆಗುತ್ತದೆ, ಹೆಚ್ಚಿನ ಒತ್ತಡಕ್ಕೆ ಒಳಗಾಗುತ್ತದೆ ಇದರಿಂದ ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ, ಇನ್ನೂ ಹಲವು ತಂಡಗಳಿಗೆ ವಿಶ್ವಕಪ್ ಗೆಲ್ಲುವ ಅವಕಾಶ ಇದೆ" ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಪಾಕಿಸ್ತಾನದ ಅನುಭವಿ ಬ್ಯಾಟರ್ ಶೋಯೆಬ್ ಮಲಿಕ್ "ನಾನು ಆಸ್ಟ್ರೇಲಿಯಾವನ್ನು ನೋಡುತ್ತೇನೆ, ಯಾರು ಅವರಿಗೆ ಕಠಿಣ ಸಮಯವನ್ನು ನೀಡುತ್ತಾರೆ" ಎಂದರು.
ಈ ವಿಶ್ವಕಪ್‌ನಲ್ಲಿ ಇಲ್ಲಿಯವರೆಗೆ ಉತ್ತಮ ಪ್ರದರ್ಶನ ನೀಡಿರುವ ಭಾರತವು ಅರ್ಧದಷ್ಟು ಯುದ್ಧವನ್ನು ಗೆದ್ದಿದೆ ಎಂದು ಹೇಳಿದರು ಮತ್ತು ಆದ್ದರಿಂದ ಮಾನಸಿಕವಾಗಿ ಆ ಪರಿಸ್ಥಿತಿಯಿಂದ ಹೊರಬರಲು ಮತ್ತು ತಮ್ಮ ಶಕ್ತಿಯನ್ನು ನಂಬುವಂತೆ ಸಲಹೆ ನೀಡಿದರು.












Click it and Unblock the Notifications