Rachin Ravindra: ಆರ್‌ಸಿಬಿ ತಂಡಕ್ಕೆ ಬರ್ತಾರ ರಚಿನ್? ಬೆಂಗಳೂರಿನಲ್ಲಿ ಕೊಟ್ರು ದೊಡ್ಡ ಸುಳಿವು
ಏಕದಿನ ವಿಶ್ವಕಪ್ 2023ರಲ್ಲಿ ಅತಿ ಹೆಚ್ಚು ಹೆಸರು ಮಾಡಿದ ಯುವ ಆಟಗಾರ ರಚಿನ್ ರವೀಂದ್ರ, ಕರ್ನಾಟಕದ ಮೂಲವನ್ನು ಹೊಂದಿರುವ ಈ ಆಟಗಾರ ನ್ಯೂಜಿಲೆಂಡ್‌ನ ಭವಿಷ್ಯದ ಕ್ರಿಕೆಟ್ ತಾರೆಯಾಗಿ ಬೆಳೆದಿದ್ದಾರೆ.
ಶ್ರೀಲಂಕಾ ವಿರುದ್ಧದ ಪಂದ್ಯದ ಬಳಿಕ ಈ ಬಾರಿಯ ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ರಚಿನ್ ಮೊದಲ ಸ್ಥಾನದಲ್ಲಿದ್ದಾರೆ. 9 ಪಂದ್ಯಗಳನ್ನು ಆಡಿರುವ ಅವರು 565 ರನ್ ಗಳಿಸಿದ್ದಾರೆ. ಮೂರು ಶತಕ, 2 ಅರ್ಧಶತಕಗಳನ್ನು ಬಾರಿಸಿ ಮಿಂಚಿದ್ದಾರೆ.

ರಚಿನ್ ರವೀಂದ್ರ ಬೌಲಿಂಗ್‌ನಲ್ಲಿ ಕೂಡ ಮಿಂಚುವ ಆಟಗಾರ, ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 2 ವಿಕೆಟ್ ಪಡೆಯುವ ಜೊತೆಗೆ ಅರ್ಧಶತಕ ಗಳಿಸಿ ತಂಡದ ಗೆಲುವಿಗೆ ಸಹಕಾರಿಯಾದರು.
ಆರ್‌ಸಿಬಿ ತಂಡದಲ್ಲಿ ರಚಿನ್?
ಇನ್ನು ರಚಿನ್ ರವೀಂದ್ರ ಭಾರತದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆದಿದ್ದಾರೆ. 2024ರ ಮಿನಿ ಹರಾಜಿನಲ್ಲಿ ರಚಿನ್ ರವೀಂದ್ರ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲು ಹಲವು ತಂಡಗಳು ಪೈಪೋಟಿ ನಡೆಸುವ ಸಾಧ್ಯತೆ ಇದೆ.
ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ರಚಿನ್ ರವೀಂದ್ರ ಐಪಿಎಲ್‌ನಲ್ಲಿ ಆಡುವ ಬಗ್ಗೆ ಮಹತ್ವದ ಸುಳಿವು ನೀಡಿದ್ದಾರೆ. "ಚಿನ್ನಸ್ವಾಮಿ ಸ್ಟೇಡಿಯಂ ಮತ್ತು ಎಲ್ಲಾ ಬೆಂಬಲಕ್ಕಾಗಿ ಪ್ರೇಕ್ಷಕರಿಗೆ ಧನ್ಯವಾದಗಳು. ಇದು ನನ್ನ ಹೃದಯದಲ್ಲಿ ವಿಶೇಷ ಸ್ಥಳವಾಗಿದೆ ಮತ್ತು ಇಲ್ಲಿ ಹೆಚ್ಚಿನ ಕ್ರಿಕೆಟ್ ಆಡಲು ನಾನು ಎದುರು ನೋಡುತ್ತಿದ್ದೇನೆ" ಎಂದು ರಚಿನ್ ರವೀಂದ್ರ ಪಂದ್ಯದ ನಂತರ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದರು.
ಈ ಮೂಲಕ ಬೆಂಗಳೂರು ಮೂಲದ ಫ್ರಾಂಚೈಸಿಯಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರುವ ಆಸೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಜೊತೆ ನಂಟು ಹೊಂದಿರುವ ರಚಿನ್ ರವೀಂದ್ರ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ಅಭಿಮಾನಿಗಳು ಕೂಡ ಒತ್ತಾಯಿಸಿದ್ದಾರೆ.
ಇನ್ನು ಆರ್‌ಸಿಬಿ ತಂಡದಲ್ಲಿ ಈಗಾಗಲೇ ವಿದೇಶಿ ಆಟಗಾರರ ದಂಡೇ ಇದೆ, ಆದರೆ ಭವಿಷ್ಯದ ದೃಷ್ಟಿಯಿಂದ ನೋಡುವುದಾರೆ ಯುವ ಆಟಗಾರ ರಚಿನ್ ರವೀಂದ್ರ ಉತ್ತಮ ಆಯ್ಕೆಯಾಗಿದ್ದಾರೆ.
ಐಪಿಎಲ್ 2024 ಹರಾಜು ಡಿಸೆಂಬರ್ 19 ರಂದು ನಡೆಯಲಿದೆ ಮತ್ತು ಮೊದಲ ಬಾರಿಗೆ ಭಾರತದ ಹೊರಗೆ ನಡೆಯಲಿದೆ. ಬಹು ನಿರೀಕ್ಷಿತ ಹರಾಜು ದುಬೈನಲ್ಲಿ ನಡೆಯಲಿದೆ. ನವೆಂಬರ್ 26ರ ಒಳಗೆ ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು ನೀಡುವಂತೆ ಬಿಸಿಸಿಐ ಐಪಿಎಲ್ ಫ್ರಾಂಚೈಸಿಗಳಿಗೆ ಸೂಚನೆ ನೀಡಿದೆ.












Click it and Unblock the Notifications