India vs Bangladesh: ಈ ಇಬ್ಬರು ವೇಗಿಗಳ ನಡುವೆ ತಂಡಕ್ಕೆ ಸೇರಲು ಪೈಪೋಟಿ
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ್ದು ಇದೀಗ ಟಿ20 ಸರಣಿಯನ್ನು ಆಡಲು ಸಜ್ಜಾಗಿದೆ. ಯುವ ಆಟಗಾರರು ಸರಣಿಯಲ್ಲಿ ಮಿಂಚಲು ಸಜ್ಜಾಗಿದ್ದು, ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ವಿಶ್ವಾಸದಲ್ಲಿದೆ. ಭಾರತ ತಂಡವನ್ನು ಸೇರಲು ಯುವ ಆಟಗಾರರ ದೊಡ್ಡ ಪಡೆಯೇ ಸಜ್ಜಾಗದ್ದು, ತಂಡದಲ್ಲಿ ಸ್ಥಾನ ಪಡೆಯಲು ಭಾರಿ ಪೈಪೋಟಿ ಏರ್ಪಟ್ಟಿದೆ.
ಐಪಿಎಲ್‌ನಲ್ಲಿ ಮಿಂಚು ಹರಿಸಿದ್ದ ವೇಗಿಗಳಾದ ಮಯಾಂಕ್ ಯಾದವ್ ಮತ್ತು ಹರ್ಷಿತ್ ರಾಣಾ ಟಿ20 ಸರಣಿಗಾಗಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದು, ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯಲು ಪೈಪೋಟಿ ಉಂಟಾಗುವ ಸಾಧ್ಯತೆ ಇದೆ.

ಅರ್ಷದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ತಂಡದಲ್ಲಿ ಅವಕಾಶ ಪಡೆಯುವುದು ಖಚಿತವಾಗಿದೆ, ಇಬ್ಬರು ಸ್ಪಿನ್ನರ್ ಗಳು ತಂಡದಲ್ಲಿ ಇರಲಿದ್ದು, ಇನ್ನೊಬ್ಬ ವೇಗಿಗೆ ಮಾತ್ರ ತಂಡದಲ್ಲಿ ಅವಕಾಶ ಸಿಗಲಿದ್ದು, ಹರ್ಷಿತ್ ರಾಣಾ ಮತ್ತು ಮಯಾಂಕ್ ನಡುವೆ ಯಾರಿಗೆ ಅವಕಾಶ ಸಿಗುತ್ತದೆ ಎನ್ನುವ ಕುತೂಹಲ ಇದೆ.
ಪ್ರತಿಭಾವಂತ ಆಟಗಾರರು
ಮಯಾಂಕ್ ಯಾದವ್ ಮತ್ತು ಹರ್ಷಿತ್ ರಾಣಾ ಇಬ್ಬರೂ ಐಪಿಎಲ್ 2024 ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕವೇ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ವೇಗಿ ಮಯಾಂಕ್ ಯಾದವ್ ಗಾಯಗೊಂಡು ಐಪಿಎಲ್‌ನಿಂದ ಅರ್ಧಕ್ಕೆ ಹೊರಬಿದ್ದರೂ, ಅದಕ್ಕೂ ಮುನ್ನವೇ ತಮ್ಮ ವೇಗದ ಬೌಲಿಂಗ್‌ನಿಂದ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದ್ದರು.
150 ಕಿ.ಮೀ. ಗಿಂತ ಅಧಿಕ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಹೊಸ ದಾಖಲೆಯನ್ನು ಬರೆದಿದ್ದರು. 4 ಪಂದ್ಯಗಳನ್ನು ಮಾತ್ರ ಆಡಿದರು 7 ವಿಕೆಟ್ ಪಡೆದುಕೊಂಡಿದ್ದರು. ಗಾಯಗೊಂಡಿದ್ದ ಅವರು, ಸುದೀರ್ಘ ವಿಶ್ರಾಂತಿ ಬಳಿಕ ಮತ್ತೆ ಮೈದಾನಕ್ಕೆ ಇಳಿಯುತ್ತಿದ್ದಾರೆ. ಮತ್ತೆ ತಮ್ಮ ವೇಗದ ಮೂಲಕ ಎದುರಾಳಿಗಳಲ್ಲಿ ನಡುಕ ಹುಟ್ಟಿಸುವ ಸೂಚನೆ ಕೊಟ್ಟಿದ್ದಾರೆ.
ಕೆಕೆಆರ್ ತಂಡದ ಹರ್ಷಿತ್ ರಾಣಾ ಕೂಡ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಕೆಕೆಆರ್ ಪ್ರಶಸ್ತಿ ಗೆಲ್ಲುವಲ್ಲಿ ರಾಣಾ ಅವರ ಪಾತ್ರ ಮುಖ್ಯವಾಗಿದೆ. 2023ರ ಐಪಿಎಲ್‌ನಲ್ಲಿ 14 ವಿಕೆಟ್ ಪಡೆದಿದ್ದ ಅವರು, 2024ರ ಐಪಿಎಲ್‌ನಲ್ಲಿ 19 ವಿಕೆಟ್ ಪಡೆದು ಮಿಂಚಿದರು. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡಕ್ಕೆ ಆಯ್ಕೆಯಾದರೂ, ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಸಿಗಲಿಲ್ಲ. ಇದೀಗ ಬಾಂಗ್ಲಾದೇಶ ವಿರುದ್ಧ ಆಡುವ ವಿಶ್ವಾಸದಲ್ಲಿದ್ದಾರೆ.
ಟಿ20 ಸರಣಿಗೆ ಭಾರತ ತಂಡ
ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ರಿಯಾನ್ ಪರಾಗ್, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಮಯಾಂಕ್ ಯಾದವ್.












Click it and Unblock the Notifications