Ind vs NZ: ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಅಭ್ಯಾಸ ಆರಂಭಿಸಿದ ಭಾರತ; ರೋಹಿತ್ ಶರ್ಮಾಗೆ ಗಾಯ?
ಚಾಂಪಿಯನ್ಸ್ ಟ್ರೋಫಿ 2025ರ ಆವೃತ್ತಿಯಲ್ಲಿ ಮೊದಲ ಎರಡೂ ಪಂದ್ಯಗಳನ್ನು ಗೆದ್ದು ಈಗಾಗಲೇ ಸೆಮಿಫೈನಲ್ ತಲುಪಿರುವ ಭಾರತ ಮುಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಪಾಕಿಸ್ತಾನದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದ ಭಾರತ ಬಳಿಕ ಮೂರು ದಿನಗಳ ವಿಶ್ರಾಂತಿ ಪಡೆದಿದ್ದ ಭಾರತ ತಂಡದ ಆಟಗಾರರು, ಗುರುವಾರ ಅಭ್ಯಾಸ ಆರಂಭಿಸಿದ್ದಾರೆ.
ಭಾರತ ಮತ್ತು ನ್ಯೂಜಿಲೆಂಡ್ ಸೆಮಿಫೈನಲ್ ತಲುಪಿದ್ದರೂ ಕೊನೆಯ ಪಂದ್ಯ ಔಪಚಾರಿಕವಾಗಿರಲಿದ್ದು, ಎ ಗುಂಪಿನ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಯಾರಿಗೆ ಎನ್ನುವುದನ್ನು ಈ ಪಂದ್ಯ ನಿರ್ಣಯಿಸಲಿದೆ. ಮಾರ್ಚ್ 2ರಂದು ಭಾರತ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದ್ದು ಅಗ್ರಸ್ಥಾನದಲ್ಲಿ ಸೆಮಿಫೈನಲ್ ತಲುಪುವ ವಿಶ್ವಾಸದಲ್ಲಿದೆ.

ಭಾರತ ಮತ್ತು ನ್ಯೂಜಿಲೆಂಡ್ ಆಡಿದ ಮೊದಲ ಎರಡೂ ಪಂದ್ಯಗಳನ್ನು ಗೆದ್ದಿದ್ದು ಅಗ್ರಸ್ಥಾನಕ್ಕಾಗಿ ಕೊನೆಯ ಪಂದ್ಯದಲ್ಲಿ ಸೆಣೆಸಲಿವೆ. ಈಗಾಗಲೇ ಸೆಮಿಫೈನಲ್ ತಲುಪಿರುವ ಭಾರತ, ನಿರಾಳವಾಗಿದ್ದು ದುಬೈನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ ಮತ್ತು ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದು, ನಾಯಕ ರೋಹಿತ್ ಶರ್ಮಾ ಅಭ್ಯಾಸದಲ್ಲಿ ಕಾಣಿಸಿಕೊಂಡಿಲ್ಲ. ಕೆಎಲ್ ರಾಹುಲ್ ಕೂಡ ಅಭ್ಯಾಸದಲ್ಲಿ ಭಾಗವಹಿಸಿದ್ದರು.
ಫೆಬ್ರವರಿ 23ರಂದು ನಡೆದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದರು. ಬಳಿಕ ಬ್ಯಾಟಿಂಗ್‌ಗೆ ಬಂದಾಗಲೂ ರನ್ ಓಡಲು ಕಷ್ಟಪಡುತ್ತಿದ್ದರು. ಆದರೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಇನ್ನೂ ಮೂರು ದಿನ ಸಮಯ ಇದ್ದು ಅವರು ಸಂಪೂರ್ಣವಾಗಿ ಫಿಟ್ ಆಗುವ ವಿಶ್ವಾಸದಲ್ಲಿದ್ದಾರೆ.
ಮಾರ್ಚ್ 2 ರಂದು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಲಿದ್ದು, ನ್ಯೂಜಿಲೆಂಡ್ ಪಾಕಿಸ್ತಾನದಿಂದ ದುಬೈಗೆ ಆಗಮಿಸಲಿದೆ. ಐಸಿಸಿ ಪಂದ್ಯಾವಳಿಯಲ್ಲಿ ನ್ಯೂಜಿಲೆಂಡ್ ಯಾವಾಗಲೂ ಭಾರತವನ್ನು ಇನ್ನಿಲ್ಲದಂತೆ ಕಾಡಿದ ಇತಿಹಾಸ ಹೊಂದಿದ್ದು, 2023ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡ ಅದನ್ನು ಬ್ರೇಕ್ ಮಾಡಿ ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿತ್ತು, ಈ ಬಾರಿ ಕೂಡ ನ್ಯೂಜಿಲೆಂಡ್ ವಿರುದ್ಧ ಗೆಲ್ಲುವ ಉತ್ಸಾಹದಲ್ಲಿದೆ.
ಮೊಹಮ್ಮದ್ ಶಮಿಗೆ ವಿಶ್ರಾಂತಿ ಸಾಧ್ಯತೆ
ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಶಮಿ ಸಂಪೂರ್ಣವಾಗಿ ಫಿಟ್ ಆದಂತೆ ಕಂಡು ಬರಲಿಲ್ಲ. ಆರಂಭದಲ್ಲಿ ಲಯ ಕಂಡುಕೊಳ್ಳುವಲ್ಲಿ ಅವರು ವಿಫಲವಾಗಿದ್ದರು, ಕಾಲು ನೋವಿನಿಂದ ಕೆಲ ಸಮಯ ಮೈದನಾದಿಂದ ಕೂಡ ಹೊರಗುಳಿದಿದ್ದರು. ಶಮಿ ಅವರು ಸೆಮಿಫೈನಲ್‌ಗೆ ಮುಖ್ಯವಾಗಿರುವ ಕಾರಣ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ. ಶಮಿಗೆ ವಿಶ್ರಾಂತಿ ನೀಡಿದರೆ ಅರ್ಷದೀಪ್ ಸಿಂಗ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯಲಿದ್ದಾರೆ.
ವಿರಾಟ್ ಕೊಹ್ಲಿ ಪಾಕಿಸ್ತಾನದ ವಿರುದ್ಧ ಶತಕ ಬಾರಿಸಿರುವುದು ಭಾರತದ ಬ್ಯಾಟಿಂಗ್ ಬಲವನ್ನು ಮತ್ತಷ್ಟು ಹೆಚ್ಚಿಸಿದೆ. ರೋಹಿತ್ ಶರ್ಮಾ, ಶುಭಮನ್ ಗಿಲ್, ಕೆಎಲ್ ರಾಹುಲ್ ಈಗಾಗಲೇ ಫಾರ್ಮ್ ಕಂಡುಕೊಂಡಿದ್ದು, ನ್ಯೂಜಿಲೆಂಡ್ ವಿರುದ್ಧ ಕೂಡ ಉತ್ತಮ ಪ್ರದರ್ಶನ ಮುಂದುವರೆಸುವ ವಿಶ್ವಾಸದಲ್ಲಿದೆ ಟೀಂ ಇಂಡಿಯಾ.












Click it and Unblock the Notifications