Ind vs SA T20: ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಸೂರ್ಯಕುಮಾರ್ ಯಾದವ್
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯನ್ನು ಗೆದ್ದ ಬಳಿಕ, ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲೂ ಸೂರ್ಯಕುಮಾರ್ ಯಾದವ್ ನಾಯಕತ್ವ ವಹಿಸಿಕೊಂಡಿದ್ದಾರೆ. ಮಳೆಯ ಕಾರಣದಿಂದ ಸರಣಿಯ ಮೊದಲ ಟಿ20 ಪಂದ್ಯ ರದ್ದಾದ ಬಳಿಕ ಗೆಬೆರ್ಹಾದಲ್ಲಿ ಎರಡನೇ ಪಂದ್ಯ ನಡೆಯಿತು.
ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಸೂರ್ಯ ಟಿ20 ಕ್ರಿಕೆಟ್‌ನಲ್ಲಿ 2000 ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್ ಮೈಲಿಗಲ್ಲು ಸಾಧಿಸಲು ಕೇವಲ 15 ರನ್‌ಗಳ ಅಗತ್ಯವಿತ್ತು. ವಿರಾಟ್ ಕೊಹ್ಲಿ 56 ಟಿ20 ಪಂದ್ಯಗಳಲ್ಲಿ 2000 ರನ್ ಗಳಿಸಿದ್ದರೆ, ಸೂರ್ಯಕುಮಾರ್ ಯಾದವ್ ಕೂಡ ಅಷ್ಟೇ ಪಂದ್ಯಗಳಲ್ಲಿ 2000 ರನ್ ಗಳಿಸಿದರು.

ಅರ್ಧಶತಕ ಗಳಿಸಿ ಮಿಂಚಿದ ಸೂರ್ಯ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಇಬ್ಬರೂ ಶೂನ್ಯಕ್ಕೆ ಔಟಾದರು. ನಂತರ ಜೊತೆಯಾದ ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ 49 ರನ್‌ಗಳ ಜೊತೆಯಾಟ ಆಡಿದರು.
ತಿಲಕ್ ವರ್ಮಾ 29 ರನ್‌ಗಳನ್ನು ಗಳಿಸಿ ಔಟಾದರೆ, ನಾಯಕನಂತೆ ಜವಾಬ್ದಾರಿಯುತ ಆಟವಾಡಿದ ಸೂರ್ಯಕುಮಾರ್ ಯಾದವ್ 36 ಎಸೆತಗಳಲ್ಲಿ 5 ಬೌಂಡರಿ 3 ಸಿಕ್ಸರ್ ಸಹಿತ 56 ರನ್ ಗಳಿಸಿದರು. ರಿಂಕು ಸಿಂಗ್ 39 ಎಸೆತಗಳಲ್ಲಿ ಅಜೇಯ 68 ರನ್ ಗಳಿಸಿದರು, 19.3 ಓವರ್ ಗಳಲ್ಲಿ ಭಾರತ 180 ರನ್ ಗಳಿಸಿದ್ದಾಗ ಮಳೆ ಜೋರಾದ ಬಳಿಕ ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ.
ಸೂರ್ಯ ಹೇಳಿದ್ದೇನು?
ಟಾಸ್ ಬಳಿಕ ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್, "ಇಲ್ಲಿರುವುದಕ್ಕೆ ತುಂಬಾ ಸಂತೋಷವಾಗಿದೆ. ನಾವು ಏನು ಮಾಡಬೇಕೆಂದು ಗೊಂದಲದಲ್ಲಿದ್ದೆವು, ಆದರೆ ಈಗ ನಾವು ಮೊದಲು ಬ್ಯಾಟ್ ಮಾಡಲು ತುಂಬಾ ಸಂತೋಷವಾಗಿದ್ದೇವೆ. ಈ ಆಟವನ್ನು ಆಡುವ ಎಲ್ಲರಿಗೂ ಇದು ಒಂದು ಅವಕಾಶ. ವಿಶ್ವಕಪ್‌ಗೆ ಇನ್ನೂ 5-6 ತಿಂಗಳು ಬಾಕಿ ಇದೆ. ಸುಮ್ಮನೆ ಆಟವನ್ನು ಆನಂದಿಸಿ ಎಂಬುದು ತಂಡಕ್ಕೆ ಸಂದೇಶವಾಗಿದೆ" ಎಂದು ಹೇಳಿದ್ದಾರೆ.
ಉಭಯ ತಂಡಗಳ ಆಡುವ ಬಳಗ
ಭಾರತ: ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅರ್ಶ್ದೀಪ್ ಸಿಂಗ್, ಮುಖೇಶ್ ಕುಮಾರ್.
ದಕ್ಷಿಣ ಆಫ್ರಿಕಾ: ಮ್ಯಾಥ್ಯೂ ಬ್ರೀಟ್ಜ್ಕೆ, ರೀಜಾ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್, ಆಂಡಿಲ್ ಫೆಹ್ಲುಕ್ವಾಯೊ, ಜೆರಾಲ್ಡ್ ಕೋಟ್ಜಿ, ಲಿಜಾಡ್ ವಿಲಿಯಮ್ಸ್, ತಬ್ರೈಜ್ ಶಮ್ಸಿ.












Click it and Unblock the Notifications