India vs New Zealand: ಎರಡು ಪಂದ್ಯ ಸೋತ ಬಳಿಕ ಬುದ್ದಿ ಬಂತಾ? ಆಟಗಾರರಿಗೆ ಕಠಿಣ ನಿಯಮ ಜಾರಿ
ತವರಿನಲ್ಲಿ ನಾವೇ ನಂಬರ್ 1 ಎಂದು ಬೀಗುತ್ತಿದ್ದ ಟೀಂ ಇಂಡಿಯಾಗೆ ಗರ್ವಭಂಗವಾಗಿದೆ. ಶ್ರೀಲಂಕಾ ವಿರುದ್ಧ ಸರಣಿ ಸೋತ ಬಳಿಕ ಭಾರತಕ್ಕೆ ಕಾಲಿಟ್ಟ ನ್ಯೂಜಿಲೆಂಡ್ ಸತತ ಎರಡು ಪಂದ್ಯಗಳನ್ನು ಗೆದ್ದು ರೋಹಿತ್ ಶರ್ಮಾ ಪಡೆಗೆ ಶಾಕ್ ಕೊಟ್ಟಿದೆ. 2012ರ ಬಳಿಕ ಭಾರತ ಮೊದಲ ಬಾರಿಗೆ ತವರಿನಲ್ಲಿ ಸರಣಿ ಸೋಲು ಕಂಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಲು ಭಾರತದ ಹಾದಿ ಕಠಿಣವಾಗಿದ್ದು ಈ ಸೈಕಲ್‌ನಲ್ಲಿ ಉಳಿದಿರುವ 6 ಪಂದ್ಯಗಳಲ್ಲಿ 5 ಪಂದ್ಯಗಳಲ್ಲಿ ಗೆಲ್ಲಬೇಕಿದೆ. ಎರಡು ಪಂದ್ಯ ಸೋತ ಬಳಿಕ ಬಿಸಿಸಿಐ ಬುದ್ದಿ ಕಲಿತಿದೆ.
ನವೆಂಬರ್ 1ರಿಂದ ಮೂರನೇ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಮುಂಬೈನಲ್ಲಿ ಈ ಪಂದ್ಯ ನಡೆಯಲಿದೆ. ಮುಂಬೈ ಟೆಸ್ಟ್‌ಗೆ ಮುನ್ನ ಭಾರತ ತಂಡದ ಎಲ್ಲಾ ಆಟಗಾರರು ಕಡ್ಡಾಯವಾಗಿ ತರಬೇತಿಗೆ ಹಾಜರಾಗಬೇಕು ಎಂದು ನಿರ್ದೇಶನ ನೀಡಲಾಗಿದೆ. ಎರಡನೇ ಟೆಸ್ಟ್ ಸೋಲಿನ ಬಳಿಕ ಭಾರತ ತಂಡದ ಆಟಗಾರರು ಎರಡು ದಿನಗಳು ವಿಶ್ರಾಂತಿ ಪಡೆಯಲಿದ್ದು, ಬಳಿಕ ತರಬೇತಿಗೆ ಮರಳಲಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಬಳಿಕ ಭಾರತ ಆಸ್ಟ್ರೇಲಿಯಾಗೆ ಪ್ರಯಾಣ ಮಾಡಲಿದ್ದು ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯನ್ನು ಆಡಲಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿ ಸೋಲು ಭಾರತದ ಆತಂಕವನ್ನು ಹೆಚ್ಚಿಸಿದೆ. ಮುಂಬೈನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಗೆದ್ದು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ವಿಶ್ವಾಸದಲ್ಲಿದೆ ಟೀಂ ಇಂಡಿಯಾ.
ಎರಡು ದಿನ ಕಡ್ಡಾಯ ತರಬೇತಿ
ಸರಣಿ ಸೋಲಿನ ನಂತರ ತಂಡದ ಮ್ಯಾನೇಜ್‌ಮೆಂಟ್ ಆಟಗಾರರಿಗೆ ಖಡಕ್ ಸೂಚನೆ ಕೊಟ್ಟಿದೆ. ಮುಂಬೈ ಟೆಸ್ಟ್‌ಗೆ ಎರಡು ದಿನಗಳ ಮೊದಲು ಕಡ್ಡಾಯ ತರಬೇತಿಗೆ ಹಾಜರಾಗುವಂತೆ ಕೇಳಿದೆ. ಎಲ್ಲಾ ಆಟಗಾರರು ಅಕ್ಟೋಬರ್ 30 ಮತ್ತು 31ರಂದು ಎರಡು ದಿನಗಳ ಕಾಲ ಅಭ್ಯಾಸಕ್ಕೆ ಹಾಜರಾಗಬೇಕು. ಇದು ಕಡ್ಡಾಯವಾಗಿದ್ದೂ ಯಾರೊಬ್ಬರೂ ಕೂಡ ಇದರಿಂದ ಹೊರಗುಳಿಯುವಂತಿಲ್ಲ ಎಂದು ಹೇಳಿದೆ.
ಈ ಮೊದಲು, ಟೆಸ್ಟ್ ಪಂದ್ಯದ ಆರಂಭಕ್ಕೆ ಕೇವಲ ಒಂದು ದಿನದ ಮೊದಲು ಆಟಗಾರರಿಗೆ ತರಬೇತಿಯ ಪಡೆಯುವುದು ಆಯ್ಕೆಯಾಗಿತ್ತು. ಇದರಿಂದಾಗಿ ಆಟಗಾರರು ತಾಜಾತನವನ್ನು ಉಳಿಸಿಕೊಳ್ಳಬಹುದು. ಆದರೆ ಅವಮಾನಕರ ಸರಣಿ ಸೋಲಿನ ನಂತರ, ನಿಯಮ ಬದಲಾಗಿದೆ. ಹಿರಿಯ ಆಟಗಾರರು ಈ ಮೊದಲು ಐಚ್ಚಿಕ ತರಬೇತಿ ಅವಧಿಯಲ್ಲಿ ಗೈರಾಗುತ್ತಿದ್ದರು, ಈಗ ಅವರಿಗೂ ತರಬೇತಿಯಲ್ಲಿ ಭಾಗವಹಿಸಲು ಕೇಳಲಾಗಿದೆ.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಬಳಿಕ ಭಾರತ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಲಿದೆ. ನವೆಂಬರ್ 22 ರಿಂದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೊದಲ ಪಂದ್ಯ ಆರಂಭವಾಗಲಿದೆ. ಪರ್ತ್‌ನಲ್ಲಿ ಮೊದಲ ಟೆಸ್ಟ್ ನಡೆಯಲಿದ್ದು, ಈ ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ ರೋಹಿತ್ ಪಡೆ.












Click it and Unblock the Notifications