Team India: ಜಿಂಬಾಬ್ವೆ ವಿರುದ್ಧದ ಸರಣಿಗೆ ಭಾರತ ತಂಡದಲ್ಲಿ ಮತ್ತೆ ಬದಲಾವಣೆ
ಜುಲೈ 6ರಿಂದ ಆರಂಭವಾಗಲಿರುವ 5 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡದಲ್ಲಿ ಮತ್ತೆ ಮೂರು ಬದಲಾವಣೆಗಳನ್ನು ಮಾಡಲಾಗಿದೆ. ಟಿ20 ವಿಶ್ವಕಪ್ ಗೆದ್ದಿರುವ ತಂಡದ ಭಾಗವಾಗಿದ್ದ ಸಂಜು ಸ್ಯಾಮ್ಸನ್, ಶಿವಂ ದುಬೆ ಮತ್ತು ಯಶಸ್ವಿ ಜೈಸ್ವಾಲ್ ಅವರನ್ನು ಜಿಂಬಾಬ್ವೆ ವಿರುದ್ಧದ ಸರಣಿಗೆ ಕೈಬಿಡಲಾಗಿದೆ.
ಮೂವರ ಬದಲಾಗಿ ಸಾಯಿ ಸುದರ್ಶನ್, ಜಿತೇಶ್ ಶರ್ಮಾ ಮತ್ತು ಹರ್ಷಿತ್ ರಾಣಾ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಐಪಿಎಲ್‌ನಲ್ಲಿ ಈ ಮೂವರು ಸಾಕಷ್ಟು ಮಿಂಚು ಹರಿಸಿದ್ದರು, ಈಗ ಭಾರತ ತಂಡದ ಪರ ಆಡಲು ಸಜ್ಜಾಗಿದ್ದಾರೆ.

ಮೂವರನ್ನು ಕೈಬಿಡಲು ಕಾರಣವೇನು?
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸಂಜು ಸ್ಯಾಮ್ಸನ್, ಶಿವಂ ದುಬೆ ಮತ್ತು ಯಶಸ್ವಿ ಜೈಸ್ವಾಲ್ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಆಡಬೇಕಿತ್ತು. ಅದರೆ ಬೆರಿಲ್ ಚಂಡಮಾರುತದಿಂದ ವಿಶ್ವಕಪ್ ಗೆದ್ದಿರುವ ಭಾರತ ತಂಡದ ಆಟಗಾರರು ಇನ್ನೂ ಬಾರ್ಬಡೋಸ್‌ನಲ್ಲಿ ಸಿಲುಕಿದ್ದು, ಭಾರತಕ್ಕೆ ಬರುವುದು ತಡವಾಗಲಿದೆ.
ತಡವಾಗ ಬಂದರೂ ಅವರು ಸಾಕಷ್ಟು ಬಳಲಿರುವ ಕಾರಣ, ಮತ್ತೆ ಜಿಂಬಾಬ್ವೆಗೆ ಪ್ರಯಾಣ ಮಾಡುವುದು ಕಷ್ಟವಾಗುತ್ತದೆ ಎನ್ನುವ ಕಾರಣಕ್ಕೆ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಹೊಸ ಆಟಗಾರರಿಗೆ ಅವಕಾಶ ನೀಡಲಾಗಿದೆ.
ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಶುಭಮನ್ ಗಿಲ್ ಭಾರತ ತಂಡದ ನಾಯಕತ್ವ ವಹಿಸಿಕೊಂಡಿದ್ದು, ಯುವ ಆಟಗಾರರ ತಂಡ ಜಿಂಬಾಬ್ವೆಗೆ ಸವಾಲೊಡ್ಡಲು ಸಜ್ಜಾಗುತ್ತಿದೆ.
ರೋಹಿತ್, ಕೊಹ್ಲಿ, ಜಡೇಜಾ ಸ್ಥಾನಕ್ಕೆ ಹುಡುಕಾಟ
ಟಿ20 ವಿಶ್ವಕಪ್ ಗೆದ್ದ ಬಳಿಕ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಅವರ ಸ್ಥಾನಕ್ಕೆ ಯಾರು ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಬಿಸಿಸಿಐಗೆ ಇದು ಉತ್ತಮ ಸಮಯವಾಗಿದೆ. ಅದಕ್ಕೆ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಆಟಗಾರರಿಗೆ ಭಾರತ ತಂಡದಲ್ಲಿ ಅವಕಾಶ ನೀಡಲಾಗಿದೆ. ಜುಲೈ 6ರಂದು ಮೊದಲ ಟಿ20 ಪಂದ್ಯ ನಡೆಯಲಿದ್ದು, ಎಲ್ಲಾ 5 ಪಂದ್ಯಗಳು ಹರಾರೆಯಲ್ಲಿ ನಡೆಯಲಿವೆ.
ಜಿಂಬಾಬ್ವೆ ವಿರುದ್ಧ ಸರಣಿಗೆ ಭಾರತ ತಂಡ
ಶುಭಮನ್ ಗಿಲ್ (ನಾಯಕ), ರುತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್, ಮುಖೇಶ್ ಕುಮಾರ್, ತುಷಾರ್ ದೇಶಪಾಂಡೆ, ಸಾಯಿ ಸುದರ್ಶನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್) , ಹರ್ಷಿತ್ ರಾಣಾ.












Click it and Unblock the Notifications