ಶಿವಮೊಗ್ಗ ತುಂಗಾ ಡ್ಯಾಂ ಭರ್ತಿ, ಕಣ್ಮನ ಸೆಳೆಯುತ್ತಿದೆ ಧುಮ್ಮಿಕ್ಕುವ ನೀರು
ಶಿವಮೊಗ್ಗ, ಜುಲೈ 16: ಮಲೆನಾಡಿನಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಶಿವಮೊಗ್ಗ ಸಮೀಪದ ತುಂಗಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ತೀರ್ಥಹಳ್ಳಿಯಲ್ಲಿ ನದಿಯ ನಡುವೆ ಇರುವ ರಾಮಮಂಟಪ ಮುಳುಗಿದೆ. ಶಿವಮೊಗ್ಗ ನಗರದಲ್ಲಿ ಕೋರ್ಪಲಯ್ಯನ ಛತ್ರದ ಬಳಿಯಿರುವ ಮಂಟಪ ಸಂಪೂರ್ಣವಾಗಿ ನದಿಯಲ್ಲಿ ಮುಳುಗಡೆಯಾಗಿದೆ.
ಗಾಜನೂರಿನಲ್ಲಿರುವ ತುಂಗಾ ಜಲಾಶಯದಿಂದ 61,757 ಕ್ಯೂಸೆಕ್ ನೀರನ್ನು ತುಂಗಾ ನದಿಗೆ ಹರಿಸಲಾಗುತ್ತಿದೆ. ಶೃಂಗೇರಿ, ತೀರ್ಥಹಳ್ಳಿ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ತುಂಗಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ತುಂಗಾ ಜಲಾಶಯಕ್ಕೆ ಭಾರೀ ನೀರು ಹರಿದು ಬರುತ್ತಿದೆ. 21 ಗೇಟ್‌ಗಳ ಮೂಲಕ ನದಿಗೆ ನೀರು ಬಿಡಲಾಗುತ್ತಿದೆ.

ತುಂಗಾ ಡ್ಯಾಂನಿಂದ ಬಿಟ್ಟ ನೀರು ಶಿವಮೊಗ್ಗ ನಗರದ ಮೂಲಕ ಕೂಡಲಿ ತಲುಪಿ ಅಲ್ಲಿ ಭದ್ರಾನದಿಯೂ ಸೇರಿಕೊಂಡು ಬಳ್ಳಾರಿಯಲ್ಲಿರುವ ತುಂಗಾಭದ್ರಾ ಜಲಾಶಯ ತಲುಪುತ್ತದೆ. ಗಾಜನೂರಿನಲ್ಲಿರುವ ತುಂಗಾ ಡ್ಯಾಂ 588.24 ಮೀಟರ್ ಎತ್ತರ ಹೊಂದಿದೆ. ಜಲಾಶಯದಲ್ಲಿ 3.24 ಟಿಎಂಸಿ ಅಡಿ ನೀರನ್ನು ಸಂಗ್ರಹಿಸಬಹುದು.
ತೀರ್ಥಹಳ್ಳಿ, ಶೃಂಗೇರಿ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ತುಂಗಾ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನಷ್ಟೇ ನೀರನ್ನು ಡ್ಯಾಂನಿಂದ ಹೊರಬಿಡಲಾಗುತ್ತಿದೆ. ನದಿಗೆ ಧುಮ್ಮಿಕ್ಕುತ್ತಿರುವ ನೀರು ಜಲವೈಭವ ಸೃಷ್ಟಿಸಿದ್ದು, ಕಣ್ಮನ ಸೆಳೆಯುತ್ತಿದೆ.
ಪೊಲೀಸರ ನಿಯೋಜನೆ: ಗಾಜನೂರು ಡ್ಯಾಂನಿಂದ ನದಿಗೆ ನೀರು ಬಿಟ್ಟಿರುವುದರಿಂದ ಶಿವಮೊಗ್ಗ ನಗರದಲ್ಲಿ ತುಂಗಾ ನದಿ ನೀರಿನಲ್ಲಿ ಮಂಟಪ ಮುಳುಗಡೆಯಾಗಿದೆ. ಶಿವಮೊಗ್ಗ ನಗರದ ನಡುವೆ ಹರಿಯುವ ನದಿಯ ನೀರಿನಲ್ಲಿ ಕೋರ್ಪಲಯ್ಯನ ಛತ್ರದ ಬಳಿಯಿರುವ ಮಂಟಪ ಸಂಪೂರ್ಣವಾಗಿ ಮುಳುಗಿದೆ.
ಮೈದುಂಬಿ ಹರಿಯುತ್ತಿರುವ ತುಂಗಾ ನದಿ ನೋಡಲು ನೂರಾರು ಜನರು ಆಗಮಿಸುತ್ತಿದ್ದಾರೆ. ಆದ್ದರಿಂದ ನದಿ ಪಾತ್ರದಲ್ಲಿ ಹೆಚ್ಚು ಜನರು ಓಡಾಡದಂತೆ ಪೊಲೀಸರು ಮುನ್ನೆಚ್ಚರಿಕೆ ನೀಡಿದ್ದಾರೆ. ಪೊಲೀಸ್ ಇಲಾಖೆ ನದಿ ಪಾತ್ರದಲ್ಲಿ ಪೊಲೀಸರ ಬೀಟ್ ವ್ಯವಸ್ಥೆಯನ್ನು ಮಾಡಿದ್ದಾರೆ.
ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ ತುಂಬಿದ ತುಂಗೆ ವಿಹಂಗಮ ದೃಶ್ಯವನ್ನು ವೀಕ್ಷಣೆ ಮಾಡಿದರು. ಕೋರ್ಪಲಯ್ಯನ ಛತ್ರದ ಬಳಿ ಪೊಲೀಸ್ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದುಕೊಂಡರು. ಜನರು ಮೊಬೈಲ್‌ನಲ್ಲಿ ತುಂಗಾ ನದಿ ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.
ಮಳೆ ಅವಾಂತರಗಳು: ಮಲೆನಾಡಲ್ಲಿ ಸುರಿದ ಮಳೆ ಅವಾಂತರಗಳನ್ನು ಉಂಟು ಮಾಡಿದೆ. ಕಲ್ಲುಹಳ್ಳ ಸೇತುವೆ ತಡೆಗೋಡೆ ಕುಸಿತವಾಗಿದ್ದು, ಭಾರೀ ಅನಾಹುತ ತಪ್ಪಿದೆ. ಹೊಸನಗರ ಸಮೀಪ ಇರುವ ಕಲ್ಲುಹಳ್ಳ ಸೇತುವೆ ರಾಣೆಬೆನ್ನೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿ 766cಗೆ ಸೇರಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುಮಾರು 5 ಕೋಟಿ ಅನುದಾನದಲ್ಲಿ ಸೇತುವೆ ನಿರ್ಮಾಣ ಮಾಡಿತ್ತು.
ಹೊಸನಗರ ತಾಲೂಕಿನ ಯಡೂರು ಗ್ರಾಮದಲ್ಲಿ ಮಳೆಗೆ ಮನೆ ಹಾನಿ ಮನೆ ಮೇಲೆ ಮರಬಿದ್ದು ಮನೆಯ ಮೇಲ್ಛಾವಣಿಗೆ ಹಾನಿಯಾಗಿದೆ. ಮಳೆಯ ನೀರು ಮನೆಗೆ ನುಗ್ಗಿದ್ದು, ಮನೆಯಲ್ಲಿರುವ ಗೃಹೋಪಯೋಗಿ ವಸ್ತುಗಳು ನೀರು ಪಾಲಾಗಿವೆ.
ಭಾರೀ ಮಳೆ ಹಿನ್ನಲೆಯಲ್ಲಿ ಮಾಲತಿ ನದಿ ಉಕ್ಕಿ ಹರಿಯುತ್ತಿದೆ. ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ಇದರಿಂದಾಗಿ ಗುಡ್ಡಕೇರಿಯಿಂದ ಹೊನ್ನೆತಾಳು ಮಾರ್ಗವಾಗಿ ಬಿದರಗೋಡು ಸಂಪರ್ಕಿಸುವ ರಸ್ತೆ ಸಂಚಾರ ಸ್ಥಗಿತಗೊಂಡಿದೆ.












Click it and Unblock the Notifications