ಸೂರ್ಯಗ್ರಹಣ; ಸಿಗಂದೂರು ಸೇರಿ ಶಿವಮೊಗ್ಗದ ದೇವಸ್ಥಾನಗಳಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧ
ಶಿವಮೊಗ್ಗ, ಅಕ್ಟೋಬರ್, 24; ಸೂರ್ಯಗ್ರಹಣದ ಹಿನ್ನೆಲೆ ರಾಜ್ಯದಾದ್ಯಂತ ಅಕ್ಟೋಬರ್ 25ರಂದು ಜಿಲ್ಲೆಯ ಬಹುತೇಕ ದೇವಸ್ಥಾನಗಳನ್ನು ಬಂದ್ ಮಾಡಲಾಗುತ್ತಿದೆ. ಹಾಗೆಯೇ ಅಕ್ಟೋಬರ್ 25ರಂದು ಸಿಗಂದೂರಿನ ಶ್ರೀ ಚೌಡೇಶ್ವರಿ ಕ್ಷೇತ್ರದಲ್ಲಿ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಸಿಗಂದೂರಿಗೆ ಭಕ್ತರ ಪ್ರವೇಶವಿಲ್ಲ
ಅಕ್ಟೋಬರ್ 25ರಂದು ಸೂರ್ಯಗ್ರಹಣ ಇದ್ದು, ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಹಾದು ಹೋಗಲಿದ್ದಾನೆ. ಈ ವೇಳೆ ಸೂರ್ಯನ ಬೆಳಕು ಭೂಮಿ ಮೇಲೆ ಬೀಳುವುದನ್ನು ಚಂದ್ರ ತಡೆಯಲಿದ್ದಾನೆ. ಸೂರ್ಯಗ್ರಹಣದ ಹಿನ್ನೆಲೆ ಅಕ್ಟೋಬರ್ 25ರಂದು ಸಿಗಂದೂರಿನ ಶ್ರೀ ಚೌಡೇಶ್ವರಿ ಕ್ಷೇತ್ರದಲ್ಲಿ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. 'ಗ್ರಹಣದ ಪ್ರಯುಕ್ತ ಬೆಳಗ್ಗೆ 9 ಗಂಟೆಯಿಂದ ಸಂಜೆಯವರೆಗೆ ಸಾರ್ವಜನಿಕರಿಗೆ ಯಾವುದೆ ಪೂಜೆ ಮತ್ತು ದರ್ಶನಕ್ಕೆ ಅವಕಾಶ ಇರುವುದಿಲ್ಲ' ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಗ್ರಹಣದ ಬಳಿಕ ವಿಶೇಷ ಪೂಜೆ
ಶಿವಮೊಗ್ಗದ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿಯೂ ಗ್ರಹಣದ ಸಂದರ್ಭಲ್ಲಿ ದೇವರ ದರ್ಶನ, ಪೂಜೆಗೆ ಅವಕಾಶವಿಲ್ಲ. ಈ ಬಗ್ಗೆ ಮಾತನಾಡಿದ ದೇವಸ್ಥಾನದ ಅರ್ಚಕ ರಾಮ ಪ್ರಸಾದ್ ಅವರು, 'ಗ್ರಹಣದ ಸಮಯದಲ್ಲಿ ದೇವಸ್ಥಾನದ ಬಾಗಿಲನ್ನು ಮುಚ್ಚಲಾಗುತ್ತದೆ. ಗ್ರಹಣ ಮುಗಿದ ಮೇಲೆ ದೇವಸ್ಥಾನದ ಆವರಣವನ್ನು ಶುಚಿಗೊಳಿಸಲಾಗುತ್ತದೆ. ಪುಣ್ಯಾಹ ಮಾಡಿ ಬಾಗಿಲು ತೆಗೆದು ಅಂಜನೇಯನಿಗೆ ಪೂಜೆ ಸಲ್ಲಿಸಲಾಗುತ್ತದೆ' ಎಂದು ತಿಳಿಸಿದರು.

ದೇವರ ದರ್ಶನಕ್ಕೆ ಭಕ್ತರಿಗೆ ನಿರ್ಬಂಧ
ದೀಪಾವಳಿ ಹಬ್ಬದ ಸಂದರ್ಭ ಮೂರು ದಿನವೂ ಎಲ್ಲಾ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯುತ್ತಿತ್ತು. ಆದರೆ ಈ ಬಾರಿ ಸೂರ್ಯ ಗ್ರಹಣದ ಹಿನ್ನೆಲೆ ಎಲ್ಲಾ ದೇಗುಲಗಳಲ್ಲಿಯು ದೇವರ ಪೂಜೆ, ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ. ಗ್ರಹಣ ಮುಗಿದ ಬಳಿಕ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. 'ಸೂರ್ಯ ಗ್ರಹಣಕ್ಕೆ ಕೆಲವರು ಹೆದರಿ ಮನೆಯಿಂದ ಹೊರಗೆ ಬರುವುದಿಲ್ಲ. ಇನ್ನು ಕೆಲವರು ದೇವಸ್ಥಾನಗಳಿಗೆ ಬಂದು ಜಪ, ವಿಷ್ಣು ಸಹಸ್ರನಾಮ ಪಾರಾಯಣ ಮಾಡುತ್ತಾರೆ. ಕೆಲವರು ಗ್ರಹಣ ಕಾಲದ ಬಳಿಕ ಸ್ನಾನ ಮುಗಿಸಿ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ' ಎಂದು ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದ ಅರ್ಚಕ ರಾಮಪ್ರಸಾದ್ ತಿಳಿಸಿದರು.












Click it and Unblock the Notifications