ಶಿವಮೊಗ್ಗ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಗೆ ಕಂಗೆಟ್ಟ ಜನತೆ
ಶಿವಮೊಗ್ಗ, ಆಗಸ್ಟ್.14: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ಥವಾಗಿದೆ. ತೀರ್ಥಹಳ್ಳಿಯಲ್ಲಿ ತುಂಗಾನದಿಯ ರಾಮ ಮಂಟಪ, ಭದ್ರಾವತಿ ನಗರದಲ್ಲಿ ಹೊಸ ಸೇತುವೆ ಮುಳುಗಡೆಯಾಗಿವೆ.
72ನೇ ಸ್ವಾತಂತ್ರ್ಯ ದಿನಾಚರಣೆ 2018
ಭದ್ರಾ ಅಣೆಕಟ್ಟೆಯಿಂದ 51 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗಿದ್ದು, ಭದ್ರಾವತಿಯ ಹೊಸ ಸೇತುವೆ ಮೇಲೆ 4 ಅಡಿಯಷ್ಟು ನೀರು ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ನಿನ್ನೆಯಿಂದಲೇ ಸೇತುವೆ ಸಂಚಾರ ಬಂದ್ ಮಾಡಲಾಗಿದ್ದು, ಹಳೆ ಸೇತುವೆ ಮೇಲೆ ಜನರ ಸಂಚಾರ ಹೆಚ್ಚಾಗಿದೆ.

ಸಾಗರದಲ್ಲೂ ನಿರಂತರ ಮಳೆ
ಇನ್ನು ಸಾಗರ ತಾಲೂಕಿನಲ್ಲಿ ಎಡೆಬಿಡದೆ ಮಳೆ ಸುರಿದ ಪರಿಣಾಮ ಕೆಳದಿ ರಸ್ತೆಯಲ್ಲಿ ಮನೋಹರ್ ಎಂಬುವವರ ಮನೆ ಕುಸಿದಿದ್ದು, ಅದೃಷ್ಟವಶಾತ್ ಮನೆಯವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾಗೆಯೇ ಜೋಗ ಜಲಪಾತದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಜಲಪಾತ ನೋಡಲು ಪ್ರವಾಸಿಗರು ತಾ, ಮುಂದು, ನಾ ಮುಂದು ಬರುತ್ತಿದ್ದಾರೆ.
ಜಲಾಶಯದಿಂದ ನದಿಗಳಿಗೆ ನೀರು
ಲಿಂಗನಮಕ್ಕಿ ಜಲಾಶಯಕ್ಕೆ ಒಂದು ಲಕ್ಷ ಕ್ಯೂಸೆಕ್ ಗೂ ಹೆಚ್ಚು ನೀರು ಹರಿದು ಬರುತ್ತಿದ್ದು, ಗರಿಷ್ಟ 1819 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 1816 ಅಡಿಗೂ ಹೆಚ್ಚು ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಡ್ಯಾಂ ಗೇಟು ತೆರೆದು ನೀರನ್ನು ನದಿಗೆ ಬಿಡಲಾಗಿದೆ.

ಡ್ಯಾಂನ 11 ಗೇಟ್ ಗಳ ಪೈಕಿ 9 ಗೇಟ್ ಗಳನ್ನು ತೆರೆದು 30 ಸಾವಿರ ಕ್ಯೂಸೆಕ್ ಗೂ ಹೆಚ್ಚು ನೀರನ್ನು ಶರಾವತಿ ನದಿಗೆ ಬಿಡಲಾಗುತ್ತಿದೆ.
ತುಂಗಾ ಜಲಾಶಯಕ್ಕೆ ಒಳಹರಿವು ಹೆಚ್ಚಾದ ಕಾರಣ ತುಂಗಾ ನದಿ ಪಾತ್ರದ ಜನರಿಗೆ ಪ್ರವಾಹ ಭೀತಿ ಎದುರಾಗಿದೆ. ಡ್ಯಾಂನಿಂದ ನದಿಗೆ ಸುಮಾರು 1 ಲಕ್ಷ ಕೂಸೆಕ್ ನೀರು ಬಿಡುಗಡೆಯಾಗಿದೆ.
ನಗರ ಪ್ರದೇಶ ಜಲಾವೃತ
ಶಿವಮೊಗ್ಗ ನಗರದ ಸೀಗೆಹಟ್ಟಿಯಲ್ಲಿ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಮನೆಗಳು ಮುಳುಗಡೆಯಾಗಿವೆ. ಮಂಡಕ್ಕಿಭಟ್ಟಿ ಪ್ರದೇಶ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದೆ.

ಕುಂಬಾರಗುಂಡಿ, ಮಂಜುನಾಥ ಟಾಕೀಸ್ ಬಳಿ ರಸ್ತೆಗಳ ಮೇಲೆ ನೀರು ಹರಿಯುತ್ತಿದೆ. ಜೆಪಿಎನ್ ಶಾಲೆ, ಮಲ್ಲೇಶ್ವರ ನಗರದ ಫ್ಯಾಮಿಲಿ ಪ್ಲಾನಿಂಗ್ ಆಸ್ಪತ್ರೆ ಜಲಾವೃತವಾಗಿದ್ದು ಜಲಾವೃತಗೊಂಡ ಪ್ರದೇಶಕ್ಕೆ ಶಾಸಕ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.











Click it and Unblock the Notifications