ಕಾಂಗ್ರೆಸ್ ಸೇರುವ ಸುದ್ದಿಗೆ ಪೂರ್ಣ ವಿರಾಮ ಇಟ್ಟ ಜೆಡಿಎಸ್ ನಾಯಕ!
ಶಿವಮೊಗ್ಗ, ಆಗಸ್ಟ್ 23: ಗುರುವಾರ ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆಯಲಿದೆ. ವಿಧಾನ ಪರಿಷತ್‌ನ ಮಾಜಿ ಸದಸ್ಯ, ಜೆಡಿಎಸ್ ನಾಯಕ ಆಯನೂರು ಮಂಜುನಾಥ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಲಿದ್ದಾರೆ.
ಶಿವಮೊಗ್ಗದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಯನೂರು ಮಂಜುನಾಥ ಕೆಲವು ದಿನಗಳಿಂದ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಹಬ್ಬಿದ್ದ ಸುದ್ದಿಗೆ ಪೂರ್ಣ ವಿರಾಮವನ್ನು ಇಟ್ಟರು. ರಾಜ್ಯದಲ್ಲಿ ಆಪರೇಷನ್ ಹಸ್ತದ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಜೆಡಿಎಸ್ ನಾಯಕರು ಪಕ್ಷ ಸೇರುತ್ತಿದ್ದಾರೆ.

ಭಾನುವಾರ ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಆಯನೂರು ಮಂಜುನಾಥ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಭೇಟಿ ಮಾಡಿದ್ದರು. ಆಗ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಮತ್ತಷ್ಟು ಬಲವಾಗಿ ಹಬ್ಬಿತ್ತು. ಈಗ ಸ್ವತಃ ಆಯನೂರು ಮಂಜುನಾಥ ಈ ಕುರಿತು ಮಾತನಾಡಿದ್ದಾರೆ.
ಆಯನೂರು ಮಂಜುನಾಥ ಹೇಳಿದ್ದೇನು?; ಆಯನೂರು ಮಂಜುನಾಥ ಮಾತನಾಡಿ, "ನಾನು ಕಾಂಗ್ರೆಸ್ ಸೇರುವ ಕುರಿತು ಹಲವು ದಿನಗಳಿಂದ ಸುದ್ದಿಗಳು ಹಬ್ಬಿದೆ. ನಾಳೆ ಈ ಕುರಿತು ಬೆಂಗಳೂರಿನಲ್ಲಿ ಸ್ಪಷ್ಟನೆ ಸಿಗಲಿದೆ. ಅದಕ್ಕೂ ಮೊದಲು ನಮ್ಮೂ ಊರಿನಲ್ಲಿ ಮಾಧ್ಯಮಗಳಿಗೆ ಈ ಕುರಿತು ಮಾಹಿತಿ ನೀಡುತ್ತಿದ್ದೇನೆ" ಎಂದರು.
"ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿಯೇ ನಾನು ಕಾಂಗ್ರೆಸ್ ಸೇರಬೇಕಾಗಿತ್ತು. ಆದರೆ ಆಗ ಸಾಧ್ಯವಾಗಲಿಲ್ಲ, ನಾನು ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದೆ. ಈಗ ಕಾಂಗ್ರೆಸ್ ಸೇರಲು ಸ್ಥಳೀಯ ಶಾಸಕರು, ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿಗಳ ಒಪ್ಪಿಗೆ ಸಿಕ್ಕಿದೆ" ಎಂದು ಹೇಳಿದರು.
"ಗುರುವಾರ ಬೆಂಗಳೂರಿನಲ್ಲಿ ಅಭಿಮಾನಿಗಳ ಜೊತೆ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಲಿದ್ದೇನೆ. ಭಾನುವಾರ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಭೇಟಿಯಾಗಿ ಈ ಕುರಿತು ಚರ್ಚೆಯನ್ನು ನಡೆಸಿದ್ದೆ" ಎಂದು ಆಯನೂರು ಮಂಜುನಾಥ ತಿಳಿಸಿದರು.
ಬಿಜೆಪಿ ತೊರೆದಿದ್ದರು; ಮಂಗಳೂರು, ಉಡುಪಿ, ತುಮಕೂರು, ಕೊಡಗು, ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕು ಒಳಗೊಂಡ ನೈಋತ್ಯ ಪದವೀಧರ ಕ್ಷೇತ್ರದಿಂದ ಆಯನೂರು ಮಂಜುನಾಥ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು.
ಆದರೆ ವಿಧಾನ ಪರಿಷತ್ ಅವಧಿ ಇನ್ನೂ ಉಳಿದಿರುವಾಗಲೇ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪರಿಷತ್ ಸದಸ್ಯತ್ವ, ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಆಯನೂರು ಮಂಜುನಾಥ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರಿದ್ದರು.
ಜೆಡಿಎಸ್ ಪಕ್ಷ ಈ ಬಾರಿಯ ಚುನಾವಣೆಗೆ ಆಯನೂರು ಮಂಜುನಾಥರನ್ನು ಶಿವಮೊಗ್ಗ ನಗರದ ಪಕ್ಷದ ಅಭ್ಯರ್ಥಿಯಾಗಿ ಘೋಷಣೆ ಮಾಡಿತ್ತು. ಚುನಾವಣೆಯಲ್ಲಿ ಅವರು 8,863 ಮತಗಳನ್ನು ಮಾತ್ರ ಪಡೆದು ಹೀನಾಯ ಸೋಲು ಕಂಡಿದ್ದರು.
ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ 96,490 ಮತಗಳನ್ನು ಪಡೆದು ಗೆಲುವು ಕಂಡರು. ಕಾಂಗ್ರೆಸ್‌ನ ಹೆಚ್. ಸಿ. ಯೋಗೇಶ್ 68,816 ಮತಗಳನ್ನು ಪಡೆದು 2ನೇ ಸ್ಥಾನಗಳಿಸಿದರು.
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಶಾಸಕರಾಗಿದ್ದ ಕೆ. ಎಸ್. ಈಶ್ವರಪ್ಪ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದರು. ಆಗ ಆಯನೂರು ಮಂಜುನಾಥ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಆದರೆ ಪಕ್ಷ ಆಯನೂರು ಮಂಜುನಾಥ ಬದಲು ಈಶ್ವರಪ್ಪ ಆಪ್ತರಾದ ಚನ್ನಬಸಪ್ಪ ಅಭ್ಯರ್ಥಿ ಎಂದು ಘೋಷಣೆ ಮಾಡಿತು. ಆಗ ಆಯನೂರು ಮಂಜುನಾಥ ಬಿಜೆಪಿಗೆ ರಾಜೀನಾಮೆ ನೀಡಿ ಜೆಡಿಎಸ್ ಸೇರಿದರು. ಈಗ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುತ್ತಿದ್ದಾರೆ.












Click it and Unblock the Notifications