ಬ್ಯಾಂಕ್, ಎಟಿಎಂ ದರೋಡೆ ಪ್ರಕರಣಗಳು, ಅಗತ್ಯ ಸುರಕ್ಷತಾ ಕ್ರಮಕ್ಕೆ ಡಿಸಿ ಸೂಚನೆ
ಶಿವಮೊಗ್ಗ, ಏಪ್ರಿಲ್ 17: ಕರ್ನಾಟಕದಲ್ಲಿ ಸೈಬರ್ ವಂಚನೆಗಳ ಪ್ರಕರಣಗಳು ಮಾತ್ರ ಹೆಚ್ಚಾಗುತ್ತಿಲ್ಲ. ವಿವಿಧ ಕಡೆ ಬ್ಯಾಂಕುಗಳು, ಎಟಿಎಂ, ಎಟಿಎಂಗೆ ಹಣ ತುಂಬುವ ವಾಹನಗಳ ದರೋಡೆ ಪ್ರಕರಣಗಳು ನಡೆಯುತ್ತಿವೆ. ಆದ್ದರಿಂದ ಸರ್ಕಾರ ಪೊಲೀಸರು ಮತ್ತು ಜಿಲ್ಲಾಡಳಿತಕ್ಕೆ ಬ್ಯಾಂಕುಗಳ ಜೊತೆ ಸಭೆ ನಡೆಸಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದೆ. ಬ್ಯಾಂಕುಗಳಲ್ಲಿ ಇರುವ ಸುರಕ್ಷತಾ ಕ್ರಮಗಳ ಕುರಿತು ಪರಿಶೀಲನೆಯನ್ನು ನಡೆಸಲಾಗುತ್ತಿದೆ.
ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಜಿಲ್ಲಾಡಳಿತ ಕಛೇರಿಯಲ್ಲಿ ಜಿಲ್ಲೆಯ ಬ್ಯಾಂಕುಗಳ ಅಧಿಕಾರಿಗಳೊಂದಿಗೆ ಜಿಲ್ಲಾ ಮಟ್ಟದ ಸುರಕ್ಷತಾ ಸಮಿತಿ (ಡಿಎಲ್‌ಎಸ್‌ಸಿ) ಸಭೆಯನ್ನು ನಡೆಸಿದರು. ಬ್ಯಾಂಕುಗಳಲ್ಲಿ ಇರುವ ಸುರಕ್ಷತಾ ಕ್ರಮಗಳ ಕುರಿತು ಹಲವು ವಿಚಾರಗಳನ್ನು ಚರ್ಚಿಸಿದರು.

ಡಿಸಿ ಗುರುದತ್ತ ಹೆಗಡೆ ಮಾತನಾಡಿ, "ಜಿಲ್ಲೆಯ ಎಲ್ಲಾ ಬ್ಯಾಂಕುಗಳಲ್ಲಿ ಸಿಸಿಟಿವಿ, ಎಚ್ಚರಿಕೆ ಗಂಟೆಗಳ ಅಳವಡಿಕೆ, ಭದ್ರತಾ ಸಿಬ್ಬಂದಿ ನಿಯೋಜನೆ, ಪೊಲೀಸ್ ಗಸ್ತು ಸೇರಿದಂತೆ ಅಗತ್ಯವಾದ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು" ಎಂದು ಸೂಚನೆಯನ್ನು ನೀಡಿದರು.
ಎಷ್ಟು ಬ್ಯಾಂಕುಗಳು?; ಶಿವಮೊಗ್ಗ ಜಿಲ್ಲೆಯಲ್ಲಿ 358 ಬ್ಯಾಂಕುಗಳು, 435 ಎಟಿಎಂಗಳು, 5 ಕರೆನ್ಸಿ ಚೆಸ್ಟ್‌ಗಳು ಇವೆ. ಆರ್‌ಬಿಐ ಮಾರ್ಗಸೂಚಿಯನ್ವಯ ಬ್ಯಾಂಕುಗಳಲ್ಲಿ ಹಾಗೂ ಕರೆನ್ಸಿ ಚೆಸ್ಟ್‌ಗಳಲ್ಲಿ ಸಿಸಿಟಿವಿ, ಸೈರನ್, ಬೆಂಕಿ ನಂದಿಸುವ ಸಾಧನಗಳನ್ನು ಅಳವಡಿಸಬೇಕು ಹಾಗೂ ಅವುಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎಂದು ಖಾತ್ರಿ ಪಡಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ.
ಎಚ್ಚರಿಕೆ ಗಂಟೆ ಮತ್ತು ಇತರೆ ಸುರಕ್ಷತಾ ಕ್ರಮಗಳೊಂದಿಗೆ ಸ್ಟ್ರಾಂಗ್ ರೂಂ ನಿರ್ವಹಣೆ ಮಾಡಬೇಕು. ಕರೆನ್ಸಿ ಚೆಸ್ಟ್‌ಗಳಿಂದ ಹಣ ವರ್ಗಾವಣೆ ವೇಳೆ ಅಗತ್ಯ ಸುರಕ್ಷತಾ ಕ್ರಮಗಳಾದ ಪೊಲೀಸ್ ನಿಯೋಜನೆ ಸೇರಿದಂತೆ ಇತರೆ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಹತ್ತಿರದ ಪೊಲೀಸ್ ಠಾಣೆಯೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಎಟಿಎಂಗಳಲ್ಲಿ ಸಿಸಿಟಿವಿ ಅಳವಡಿಕೆ, ಸೈರನ್ ಮತ್ತು ಬೆಂಕಿ ನಂದಿಸುವ ಸಾಧನಗಳನ್ನು ಅಳವಡಿಸಿ, ಅವು ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ನಿರ್ದಿಷ್ಟಪಡಿಸಿದ ರೀತಿಯಲ್ಲಿ ಎಟಿಎಂ ರೂಂ ಗಳು ಇರಬೇಕು. ಅಧಿಕೃತ ವ್ಯಕ್ತಿಗಳ ಎದುರು ನಗದು ಲೋಡ್ ಮತ್ತು ಅನ್‌ಲೋಡ್ ಮಾಡಬೇಕು. ಹತ್ತಿರದ ಪೊಲೀಸ್ ಠಾಣೆಗೆ ಬ್ಯಾಂಕುಗಳ ಜವಾಬ್ದಾರಿಯುತ ವ್ಯಕ್ತಿಗಳ ಸಂಪರ್ಕದ ವಿವರವನ್ನು ನೀಡಿರಬೇಕು. ಗ್ರಾಹಕರು ವಂಚನೆಗೊಳಗಾಗದಂತೆ ಮಾಹಿತಿ ನೀಡುವಂತಹ ಫಲಕಗಳನ್ನು ಎಟಿಎಂ ಒಳಗೆ ಹಾಕಿರಬೇಕು ಎಂದರು.
ಬ್ಯಾಂಕುಗಳ ಭದ್ರತಾ ಸಿಬ್ಬಂದಿಗಳು ಮತ್ತು ನಗದು ಬೆಂಗಾವಲು ಕರ್ತವ್ಯನಿರತ ಸಿಬ್ಬಂದಿಗಳ ಗನ್ ಪರವಾನಗಿ ನವೀಕರಣ ಖಾತ್ರಿಪಡಿಸಿಕೊಳ್ಳಬೇಕು. ಭದ್ರತಾ ಸಿಬ್ಬಂದಿಗಳಿಗೆ ಸಮರ್ಪಕ ತರಬೇತಿ ನೀಡಿರಬೇಕು. ನಗದು ವರ್ಗಾವಣೆ ವೇಳೆ ಭದ್ರತಾ ಸಿಬ್ಬಂದಿ ಕೊರತೆ ಇದ್ದಲ್ಲಿ ಪೊಲೀಸ್ ಇಲಾಖೆಯ ಸಹಾಯ ಪಡೆಯಬೇಕು ಎಂದ ಅವರು ಗನ್ ಪರವಾನಗಿ ನವೀಕರಣಕ್ಕೆ ಸಂಬಂಧಿಸಿದಂತೆ ಏನಾದರೂ ಸಮಸ್ಯೆಗಳಿದ್ದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಸಂಪರ್ಕಿಸಬೇಕು ಎಂದು ಸೂಚಿಸಿದರು.
ಸೈಬರ್ ವಿಭಾಗದ ಡಿವೈಎಸ್‌ಪಿ ಕೃಷ್ಣಮೂರ್ತಿ ಮಾತನಾಡಿ, "ಸೈಬರ್ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಅನುಕೂಲ ಮಾಡಿಕೊಡಲು ಬ್ಯಾಂಕುಗಳಲ್ಲಿ ಸಂತ್ರಸ್ತರ ಕೆವೈಸಿ ಮತ್ತು ಬ್ಯಾಂಕ್ ಸ್ಟೇಟ್‌ಮೆಂಟ್ ಅನ್ನು ಕೇಳಲಾಗುತ್ತದೆ. ಆ ವೇಳೆ ಬ್ಯಾಂಕುಗಳಿಂದ ತಕ್ಷಣಕ್ಕೆ ಸಹಕಾರ ಸಿಗದೆ ವಿಳಂಬವಾಗುತ್ತಿರುವುದಕ್ಕೆ ಅನೇಕ ವೇಳೆ ಸಂತ್ರಸ್ತರನ್ನು ನಷ್ಟದಿಂದ ರಕ್ಷಿಸುವುದು ಕಷ್ಟವಾಗುತ್ತಿದೆ. ಆದ್ದರಿಂದ ಬ್ಯಾಂಕುಗಳು ತ್ವರಿತವಾಗಿ ಸಹಕರಿಸಬೇಕು ಹಾಗೂ ಕೋರ್ಟ್ ಆದೇಶವಾದ ಪ್ರಕರಣಗಳಲ್ಲಿ ತಕ್ಷಣಕ್ಕೆ ಕ್ರಮ ವಹಿಸಬೇಕೆಂದು" ಎಂದರು.
ಜಿಲಾಧಿಕಾರಿಗಳು, ಸೈಬರ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ಅನುಕೂಲವಾಗುವ ದೃಷ್ಟಿಯಿಂದ ಬ್ಯಾಂಕುಗಳು ವಿಳಂಬ ವಹಿಸದೇ ಸಹಕರಿಸಬೇಕು ಹಾಗೂ ಸೈಬರ್ ಪೊಲೀಸ್ ಠಾಣೆಯವರು ಬ್ಯಾಂಕ್‌ವಾರು ಮುಖ್ಯ ಕಚೇರಿಗಳ ಇಮೇಲ್ ಐಡಿಯನ್ನು ಸಂಗ್ರಹಿಸಿ ಅಲ್ಲಿ ವ್ಯವಹರಿಸಿದಲ್ಲಿ ಶೀಘ್ರವಾಗಿ ಕೆಲಸ ಮಾಡಬಹುದು ಎಂದು ಹೇಳಿದರು.












Click it and Unblock the Notifications