Breaking: ಭಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣ; 12 ಆರೋಪಿಗಳು ವಶಕ್ಕೆ
ಶಿವಮೊಗ್ಗ, ಫೆಬ್ರವರಿ 22: ಶಿವಮೊಗ್ಗದ ಭಜರಂಗದಳ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣದಲ್ಲಿ ಈವರೆಗೆ ಒಟ್ಟು 12 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ.
ಸೋಮವಾರ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಒಟ್ಟು 12 ಜನ ಆರೋಪಿಗಳ ಪೈಕಿ ಬೆಂಗಳೂರಿನಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Recommended Video
ಶಿವಮೊಗ್ಗದಲ್ಲಿ ಕೊಲೆ ನಡೆದ 24 ಗಂಟೆಗಳಲ್ಲಿ ಪ್ರಕರಣ ಭೇದಿಸಲಾಗಿದ್ದು, ಹರ್ಷನ ಹತ್ಯೆಯಲ್ಲಿ ಭಾಗಿಯಾಗಿದ್ದ ಎಲ್ಲ 12 ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಸಂಬಂಧ ಸೋಮವಾರ ಶಿವಮೊಗ್ಗದ ಜೆ.ಪಿ. ನಗರ ನಿವಾಸಿ ಸೈಯದ್ ನದೀಮ್(20) ಮತ್ತು ಶಿವಮೊಗ್ಗದ ಬುದ್ಧಾನಗರ ನಿವಾಸಿ ಕಾಸಿಫ್ (30) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಶಿವಮೊಗ್ಗದಿಂದ ಬೆಂಗಳೂರಿಗೆ ರೈಲು ಮೂಲಕ ಪರಾರಿಯಾಗಿದ್ದ ಇತರೆ ಮೂವರು ಆರೋಪಿಗಳನ್ನು ಇಂದು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿನ್ನೆ ಬಂಧಿಸಿದ್ದ ಆರೋಪಿಯು ಹಳೆಯ ವೈಷ್ಯಮದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದ್ದು, ಐದು ಮಂದಿ ಮಚ್ಚು ಲಾಂಗುಗಳಿಂದ ಹರ್ಷನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದನು.
ಆರೋಪಿಗಳು ಹಲವು ದಿನಗಳಿಂದ ಹರ್ಷನ ಚಲನವಲನ ಗಮನಿಸುತ್ತಿದ್ದರು. ಹರ್ಷ ಒಂಟಿಯಾಗಿ ಸಿಕ್ಕಾಗ ಇರಿದು ಕೊಲೆ ಮಾಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಹರ್ಷ ಹತ್ಯೆಗೆ ಹಂತಕ ಪಡೆ ಮೊದಲೇ ಯೋಜನೆ ಮಾಡಿಕೊಂಡಿತ್ತು. ಘಟನೆ ನಡೆದ ಭಾನುವಾರ ಬೆಳಗ್ಗೆಯಿಂದಲೇ ಹರ್ಷನನ್ನು ಓರ್ವ ಹಿಂಬಾಲಿಸುತ್ತಿದ್ದ. ಹರ್ಷ ಚಲನವಲನಗಳ ಮೇಲೆ ಬೆಳಗ್ಗೆಯಿಂದಲೇ ನಿಗಾ ಇಟ್ಟಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ.

ಹರ್ಷನ ಕೊಲೆಗೆ 3 ದಿನಗಳಿಂದ ಸ್ಕೆಚ್ ಹಾಕಿದ್ದ 7 ಆರೋಪಿಗಳು ಹತ್ಯೆಗೈದು ಪರಾರಿಯಾಗಿದ್ದರು. ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದರು. 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ಗಳಾದ ಅಭಯ್ ಪ್ರಕಾಶ್, ಗುರುರಾಜ್ ಮತ್ತು ಸತೀಶ್ ತಂಡದಿಂದ 7 ಆರೋಪಿಗಳ ಬಂಧನವಾಗಿದೆ ಎಂದು ತಿಳಿದುಬಂದಿದೆ.
ಏನಿದು ಘಟನೆ?
ಗೃಹ ಸಚಿವ ಆರಗ ಜ್ಞಾನೇಂದ್ರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಭಾನುವಾರ ರಾತ್ರಿ 9.30ರ ಸಮಯದಲ್ಲಿ ಹತ್ಯೆ ಪ್ರಕರಣ ನಡೆದಿದೆ. ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಹೋಗುವ ರಸ್ತೆ ಪಕ್ಕದ ಬಡಾವಣೆಯಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಕಾರಿನಲ್ಲಿ ಬಂದಿದ್ದ 4ರಿಂದ 6 ಜನರ ಗುಂಪು, ಬಜರಂಗದಳ ಕಾರ್ಯಕರ್ತ ಹರ್ಷ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಹರ್ಷ ರಸ್ತೆಯಲ್ಲೇ ಬಿದ್ದು ಒದ್ದಾಡುತ್ತಿದ್ದನು. ಕೂಡಲೇ ಹರ್ಷನನ್ನು ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

ಬಿಗುವಿನ ವಾತಾವರಣ
ಹರ್ಷ, ಭಜರಂಗದಳ ಸಂಘಟನೆಯಲ್ಲಿ ಕಳೆದ ಐದು ವರ್ಷಗಳಿಂದ ತೊಡಗಿಸಿಕೊಂಡಿದ್ದ. ಆತನ ಹತ್ಯೆ ವಿಚಾರ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಮವಾರ ಹರ್ಷನ ಮೃತದೇಹ ಮೆರವಣಿಗೆ ವೇಳೆ ಮತ್ತೆ ಕಲ್ಲು ತೂರಾಟವಾಗಿದೆ.
ಹತ್ಯೆ ವಿಚಾರ ತಿಳಿಯುತ್ತಿದ್ದ ಹಾಗೆ ಶಿವಮೊಗ್ಗ ನಗರದಲ್ಲಿ ಚಿತ್ರಣ ದಿಢೀರ್ ಬದಲಾಗಿದೆ. ತಕ್ಷಣ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ನಗರದಾದ್ಯಂತ ಅಂಗಡಿ, ಹೊಟೇಲ್‌ಗಳನ್ನು ಬಂದ್ ಮಾಡಿಸಿದ್ದಾರೆ. ನಗರದಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ
ಹತ್ಯೆ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ನಗರದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ಫೆ.23ರ ರಾತ್ರಿ 9 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ಜನರು ಗುಂಪುಗೂಡಲು ಅವಕಾಶವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.












Click it and Unblock the Notifications