ಹರ್ಷ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ಘೋಷಿದ ಅರವಿಂದ ಲಿಂಬಾವಳಿ
ಶಿವಮೊಗ್ಗ, ಫೆಬ್ರವರಿ 20; ಭಾನುವಾರ ರಾತ್ರಿ ಶಿವಮೊಗ್ಗ ನಗರದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆಯಾಗಿದೆ. ಸೋಮವಾರ ಸಂಜೆ ಅಂತ್ಯಕ್ರಿಯೆ ನಡೆದಿದ್ದು, ಶಿವಮೊಗ್ಗ ನಗರ ಬೂದಿ ಮುಚ್ಚಿದ ಕೆಂಡದಂತಿದೆ. ನಗರದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಬಿಜೆಪಿ ನಾಯಕ ಮತ್ತು ಮಾಜಿ ಸಚಿವ ಅರವಿಂದ ಲಿಂಬಾವಳಿ ಹತ್ಯೆಯಾದ ಹರ್ಷ ಕುಟುಂಬಕ್ಕೆ ಒಂದು ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮೂಲಕ ಅವರು ಮಾಹಿತಿ ನೀಡಿದ್ದಾರೆ.
"ನಿನ್ನೆ ನಡೆದ ಆಘಾತಕಾರಿ ಘಟನೆಯಲ್ಲಿ ತಮ್ಮ ಮಗನನ್ನು ಕಳೆದುಕೊಂಡ ಹರ್ಷ ಕುಟುಂಬಸ್ಥರಿಗೆ ನಾನು ವೈಯಕ್ತಿಕವಾಗಿ ಒಂದು ಲಕ್ಷ ರೂಪಾಯಿ ಪರಿಹಾರ ನೀಡುತ್ತೇನೆ ಮತ್ತು ಎಲ್ಲಾ ನೋವು ಮತ್ತು ದುಃಖಗಳಲ್ಲಿ ಅವರ ಕುಟುಂಬದ ಜೊತೆಗಿರುತ್ತೇನೆ" ಎಂದು ಹೇಳಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, "ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 3 ಆರೋಪಿಗಳನ್ನು ಬಂಧಿಸಲಾಗಿದೆ. ಹತ್ಯೆ ಪ್ರಕರಣದಲ್ಲಿ ಐವರು ಭಾಗಿಯಾಗಿರುವ ಮಾಹಿತಿ ಇದೆ" ಎಂದು ಸೋಮವಾರ ಬೆಂಗಳೂರಿನಲ್ಲಿ ಹೇಳಿದ್ದಾರೆ.
ನಿನ್ನೆ ನಡೆದ ಆಘಾತಕಾರಿ ಘಟನೆಯಲ್ಲಿ ತಮ್ಮ ಮಗನನ್ನು ಕಳೆದುಕೊಂಡ ಹರ್ಷ ಕುಟುಂಬಸ್ಥರಿಗೆ ನಾನು ವೈಯಕ್ತಿಕವಾಗಿ ಒಂದು ಲಕ್ಷ ರೂಪಾಯಿ ಪರಿಹಾರ ನೀಡುತ್ತೇನೆ ಮತ್ತು ಎಲ್ಲಾ ನೋವು ಮತ್ತು ದುಃಖಗಳಲ್ಲಿ ಅವರ ಕುಟುಂಬದ ಜೊತೆಗಿರುತ್ತೇನೆ. pic.twitter.com/1oPcP7q0md
— Aravind Limbavali (@ArvindLBJP) February 21, 2022
ಮುಖ್ಯಮಂತ್ರಿಗಳ ಭೇಟಿ; ಸೋಮವಾರ ಬೆಂಗಳೂರಿನಲ್ಲಿ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದರು. ಹರ್ಷ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದರು.
ಮಾಧ್ಯಮಗಳ ಜೊತೆ ಮಾತನಾಡಿದ್ದ ಅವರು, "ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಮಾಡಿರುವುದು ಹೇಯ ಕೃತ್ಯವಾಗಿದೆ. ತಿಂಗಳೊಳಗೆ ಎಲ್ಲಾ ಆರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿದರು.
"ಎಸ್‌ಡಿಪಿಐ, ಪಿಎಫ್‌ಐ ಹಾಗೂ ಸಿಎಫ್‌ಐ ಸಂಘಟನೆಗಳಿಂದ ಎರಡು ವರ್ಷಗಳಿಂದ ಮೃತ ಹರ್ಷನಿಗೆ ಜೀವ ಬೆದರಿಕೆ ಇದ್ದರೂ ಸಹ ಸರ್ಕಾರ ರಕ್ಷಣೆ ನೀಡದಿರುವುದು ನಾಚಿಗೇಡಿನ ಸಂಗತಿಯಾಗಿದೆ" ಎಂದರು.
ಎನ್‌ಐಎ ತನಿಖೆಗೆ ಆಗ್ರಹ; ಸೋಮವಾರ ಸಂಜೆ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಿವಮೊಗ್ಗ ನಗರ ಶಾಸಕ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ, "ಮೆರವಣಿಗೆ ನಡೆಯುವ ಸಂದರ್ಭದಲ್ಲಿ ಮುಸ್ಲಿಂ ಪ್ರದೇಶಗಳಲ್ಲಿ ಮೆರವಣಿಗೆ ಮೇಲೆ ಕಲ್ಲು ಬಿತ್ತು. ಆದಾದ ಬಳಿಕ ಈ ಕಡೆಯಿಂದಲೂ ಕಲ್ಲು ಹೊಡೆದರು" ಎಂದರು.
"ಇದು ಕುತಂತ್ರ ರಾಜಕಾರಣ. ಇದಕ್ಕೆ ಶಿವಮೊಗ್ಗ ನಗರದ ಯುವಕನನ್ನು ನಾವು ಕಳೆದುಕೊಂಡಿದ್ದೇವೆ. ಗಲಭೆ ಆಗಿದೆ. ಆಸ್ತಿ-ಪಾಸ್ತಿ ಕೂಡಾ ನಷ್ಟವಾಗಿದೆ. ಕೇವಲ ಮುಸ್ಲಿಂಮರ ಆಸ್ತಿ-ಪಾಸ್ತಿ ನಷ್ಟವಾಗಿಲ್ಲ. ಹಿಂದೂಗಳ ಆಸ್ತಿ-ಪಾಸ್ತಿಯೂ ನಷ್ಟವಾಗಿದೆ" ಎಂದು ಹೇಳಿದರು.
"ಇದಕ್ಕೆ ನಾನು ಹೇಳುತ್ತಿರುವುದು ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆದಾಗ ಯಾವ ಯಾವ ಸಂಘಟನೆಗಳು, ರಾಷ್ಟ್ರದ್ರೋಹಿ ಶಕ್ತಿಗಳು ಇದರಲ್ಲಿ ಇವೆ ಎಂಬುದು ಹೊರಗಡೆ ಬರುತ್ತದೆ" ಎಂದು ಈಶ್ವರಪ್ಪ ಒತ್ತಾಯಿಸಿದರು.
"ತನಿಖೆ ಮಹತ್ವದ ಪಾತ್ರ ವಹಿಸುತ್ತದೆ. ಯಾರು ಷಡ್ಯಂತ್ರ ಮಾಡಿದ್ದಾರೆ ಎಂಬುದು ಹೊರಗೆ ಬರಲಿ. ಇದು ವ್ಯವಸ್ಥಿತವಾಗಿ ನಡೆದ ಷಡ್ಯಂತ್ರ. ಆದ್ದರಿಂದ ರಾಷ್ಟ್ರೀಯ ತನಿಖಾ ದಳದಿಂದಲೇ ತನಿಖೆಯಾಗಬೇಕು" ಎಂದು ಈಶ್ವರಪ್ಪ ಹೇಳಿದರು.
"ನಗರದಲ್ಲಿ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಪಾರ್ಥಿವ ಶರೀರದ ಮೆರವಣಿಗೆಗೆ ಹಿಂದೂ ಸಂಘಟನೆಗಳ ಒತ್ತಾಯದ ಹಿನ್ನಲೆಯಲ್ಲಿ ಅನುಮತಿ ನೀಡಿದರು. ಪರಿಸ್ಥಿತಿ ನಮ್ಮ ಹತೋಟಿಯಲ್ಲಿ ಇರುತ್ತದೆ ಎಂಬುದು ಪೊಲೀಸರ ನಂಬಿಕೆಯಾಗಿತ್ತು" ಎಂದರು.
ಶಿವಮೊಗ್ಗ ನಗರದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಪರಿಸ್ಥಿತಿ ವಿಶ್ಲೇಷಿಸಲು ಮತ್ತು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಸೂಚನೆ ಕೊಡಲಾಗಿದೆ. ಪೊಲೀಸರು ಸೂಕ್ತ ಬಂದೋಬಸ್ತ್ ಕ್ರಮಗಳನ್ನು ಕೈಗೊಂಡಿದ್ದಾರೆ.
ಭದ್ರತೆಗೆ ಸ್ಥಳೀಯ ಪೊಲೀಸರ ಜೊತೆಗೆ ಬೆಂಗಳೂರಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. 212 ಪೊಲೀಸರು ಬೆಂಗಳೂರಿನಿಂದ ಆಗಮಿಸಿದ್ದಾರೆ. ಎಡಿಜಿಪಿ ಎಸ್. ಮುರುಗನ್ ಸಹ ನಗರದಲ್ಲಿದ್ದಾರೆ.












Click it and Unblock the Notifications