ಮಾರ್ಚ್ 1 ರಿಂದ 31ರ ತನಕ ಆಗುಂಬೆ ಘಾಟ್ ವಾಹನಗಳಿಗೆ ಬಂದ್
ಶಿವಮೊಗ್ಗ, ಫೆಬ್ರವರಿ 24 : ಆಗುಂಬೆ ಘಾಟ್‌ನಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಶಿವಮೊಗ್ಗ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಮಾರ್ಚ್ 1 ರಿಂದ 31ರ ತನಕ ವಾಹನ ಸಂಚಾರ ಬಂದ್ ಆಗಲಿದೆ.
ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ. ಆಗುಂಬೆ ಘಾಟ್ ರಸ್ತೆಯಲ್ಲಿ ಗುಡ್ಡ ಕುಸಿದಿರುವ ಪ್ರದೇಶದಲ್ಲಿ ಶಾಶ್ವತವಾಗಿ ದುರಸ್ತಿ ಕಾರ್ಯ ಕೈಗೊಳ್ಳಬೇಕಾಗಿರುವ ಕಾರಣ ವಾಹನ ಸಂಚಾರ ನಿಷೇಧಿಸಲಾಗಿದೆ.
ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧ ಮಾರ್ಚ್ 1 ರಿಂದ 31 ಅಥವ ಕಾಮಗಾರಿ ಮುಗಿಯುವ ತನಕ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ವಾಹನಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿದ್ದು, ಬದಲಿ ಮಾರ್ಗಗಳನ್ನು ಸೂಚಿಸಲಾಗಿದೆ.
ಮಳೆಗಾಲದ ಸಂದರ್ಭದಲ್ಲಿ ಶಿವಮೊಗ್ಗ-ಮಂಗಳೂರು ಸಂಪರ್ಕ ಕಲ್ಪಿಸುವ ಆಗುಂಬೆ ಘಾಟ್ ರಸ್ತೆಯ 7ನೇ ತಿರುವಿನಲ್ಲಿ ಭೂ ಕುಸಿತ ಉಂಟಾಗಿತ್ತು. ಹೀಗೆ ಕುಸಿತ ಉಂಟಾದ ಪ್ರದೇಶಗಳಲ್ಲಿ ಶಾಶ್ವತ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ, ಕಾಮಗಾರಿಗೆ ಅಡಚಣೆ ಆಗಬಾರದು ಎಂಬ ಕಾರಣಕ್ಕೆ ವಾಹನ ಸಂಚಾರ ನಿಷೇಧಿಸಲಾಗಿದೆ...

ಯಾವ ಕಾಮಗಾರಿಗಳು
2018ರ ಜುಲೈ 10 ಮತ್ತು 13ರಂದು ಸುರಿದ ಭಾರಿ ಮಳೆಯಿಂದಾಗಿ ಆಗುಂಬೆ ಘಾಟ್ ರಸ್ತೆಯ 7 ಮತ್ತು 14ನೇ ತಿರುವಿನಲ್ಲಿ ಹಾಗೂ ಆನೆಬಂಡೆ ಬಳಿ ಗುಡ್ಡ ಕುಸಿತ ಉಂಟಾಗಿತ್ತು. ಈ ಭಾಗದಲ್ಲಿ ಶಾಶ್ವರ ದುರಸ್ಥಿ ಕಾರ್ಯವನ್ನು ಶಿವಮೊಗ್ಗ ಜಿಲ್ಲಾಡಳಿತ ಕೈಗೊಳ್ಳಲಿದೆ. ಆದ್ದರಿಂದ, ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ.

ಭಾರಿ ವಾಹನ ಸಂಚಾರ ನಿಷೇಧಿಸಲಾಗಿತ್ತು
2018ರ ಜುಲೈ ತಿಂಗಳಿನಲ್ಲಿ ಭೂ ಕುಸಿತದಿಂದ ರಸ್ತೆಗೆ ಹಾನಿಯಾದ ಬಳಿಕ ಮಳೆ ನೀರು ರಸ್ತೆಯ ಮೇಲೆ ಹರಿಯುವುದನ್ನು ತಪ್ಪಿಸಲು ರಸ್ತೆಯ 2 ಬದಿ ವ್ಯವಸ್ಥೆ ಮಾಡಲಾಗಿತ್ತು. ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿತ್ತು.

ಪರ್ಯಾಯ ಮಾರ್ಗ
ಆಗುಂಬೆ ಘಾಟ್ ಶಿವಮೊಗ್ಗ-ಮಂಗಳೂರು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ. ಮಾರ್ಚ್ 1 ರಿಂದ 31ರ ತನಕ ವಾಹನ ಸಂಚಾರ ನಿಷೇಧಿಸಿರುವ ಹಿನ್ನಲೆಯಲ್ಲಿ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ.
ಲಘು ವಾಹನಗಳಾದ ಬಸ್, ಜೀಪು, ವ್ಯಾನ್, ಮಿನಿ ವ್ಯಾನ್, ದ್ವಿಚಕ್ರ ವಾಹನಗಳು ತೀರ್ಥಹಳ್ಳಿ-ಕೊಪ್ಪ-ಶೃಂಗೇರಿ-ಮಳಾಘಾಟ್-ಕಾರ್ಕಳ-ಉಡುಪಿ (ರಾಷ್ಟ್ರೀಯ ಹೆದ್ದಾರಿ 169)ರ ಮೂಲಕ ಸಂಚಾರ ನಡೆಸಬೇಕು.

ಭಾರಿ ವಾಹನಗಳಿಗೆ ಮಾರ್ಗ
ಭಾರಿ ವಾಹನಗಳಾದ ರಾಜಹಂಸ, ಐರಾವತ ಮತ್ತು ಖಾಸಗಿ ಲಕ್ಷುರಿ ಬಸ್‌ಗಳು, ಬುಲೆಟ್ ಟ್ಯಾಂಕರ್, ಶಿಪ್ ಕಾರ್ಗೋ ಕಂಟೈನರ್ಸ್ ಮತ್ತು ಲಾಂಗ್ ಚಾಸೀಸ್ ವಾಹನಗಳು ತೀರ್ಥಹಳ್ಳಿ-ಮಾಸ್ತಿಕಟ್ಟೆ-ಹೊಸಂಗಡಿ-ಸಿದ್ದಾಪುರ-ಕುಂದಾಪುರ-ಉಡುಪಿ (ರಾಜ್ಯ ಹೆದ್ದಾರಿ 52)ರ ಮೂಲಕ ಸಂಚಾರ ನಡೆಸಬೇಕಿದೆ.












Click it and Unblock the Notifications