Makar Sankranti 2023: ರಾಸುಗಳಿಗ ಚರ್ವಗಂಟು ರೋಗ ಬೀತಿ: ರಾಮನಗರದಲ್ಲಿ ಸರಳ ಸಂಕ್ರಾಂತಿ ಹಬ್ಬ ಆಚರಣೆ
ರಾಮನಗರ, ಜನವರಿ, 16: ಜಾನಪದ ಕಲೆಗಳ ತವರೂರು, ಜನಪದರ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ರಾಮನಗರದಲ್ಲಿ ಸರಳವಾಗಿ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡಲಾಯಿತು. ರಾಸುಗಳಲ್ಲಿನ ಚರ್ಮಗಂಟು ರೋಗ ಬೀತಿಯಿಂದ ಸುಗ್ಗಿಯ ಹಬ್ಬವನ್ನು ಸರಳವಾಗಿ ಆಚರಣೆ ಮಾಡಲಾಯಿತು.
ಈಗಾಗಲೇ ಜಿಲ್ಲೆಯಲ್ಲಿ ದನಗಳ ಜಾತ್ರೆ, ಸಂತೆ ಹಾಗೂ ಒಂದು ಕಡೆಯಿಂದ ಮತ್ತೊಂದು ಕಡೆಗೆ ಜಾನುವಾರು ಸಾಗಾಟ ಮಾಡುವುದನ್ನು ಇದೇ ತಿಂಗಳ ಜನವರಿ 19ರ ವರೆಗೆ ನಿಷೇಧಿಸಿ ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರ ಆದೇಶ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳಿಂದ ರಾಸುಗಳು ಬಾರದ ಹಿನ್ನೆಲೆಯಲ್ಲಿ ಜಾನಪದ ಲೋಕದಲ್ಲಿ ಕೆಲವೇ ರಾಸುಗಳನ್ನು ಕಿಚ್ಚು ಹಾಯಿಸುವ ಮೂಲಕ ಸಾಂಪ್ರದಾಯಿಕ ಸಂಕ್ರಾಂತಿ ಆಚರಣೆ ಮಾಡಲಾಯಿತು. ಅನ್ನದಾತನ ಸುಗ್ಗಿ ಹಬ್ಬವಾದ ಸಂಕ್ರಾಂತಿಯನ್ನು ದವಸ ಧಾನ್ಯಗಳಾದ ರಾಗಿ, ಕಡಲೆಕಾಯಿ, ಗೆಣಸು ಹಾಗೂ ಅವರೆಕಾಯಿ ರಾಶಿ ಮಾಡಿ ಅದಕ್ಕೆ ಗ್ರಾಮೀಣ ಸೊಗಡಿನ ರಾಶಿ ಪೂಜೆ ನೆರವೇರಿಸುವ ಮೂಲಕ ಸಂಪ್ರದಾಯಿಕ ಸಂಕ್ರಾಂತಿ ಆಚರಿಸಲಾಯಿತು.
ಅಲ್ಲದೇ ರಾಶಿ ಪೂಜೆಯ ಸುತ್ತಲೂ ರೈತರು ವ್ಯವಸಾಯದಲ್ಲಿ ಬಳಸುವ ನೇಗಿಲು, ಕುಂಟೆ, ಕೂರಿಗೆ ಸೇರಿದಂತೆ ವಿವಿಧ ಪರಿಕರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಈ ಮೂಲಕ ಜಾನಪದ ಲೋಕಕ್ಕೆ ಬರುವ ಮಂದಿಗೆ ರೈತರ ಪರಿಕರಗಳನ್ನು ಪರಿಚಯಿಸುವ ಸಣ್ಣ ಪ್ರಯತ್ನವನ್ನು ಕೂಡ ಮಾಡಲಾಗಿತ್ತು.

ರಾಮನಗರದಲ್ಲಿ ಸರಳ ಹಬ್ಬ ಆಚರಣೆ
ಬೆರಳೆಣಿಕೆಯಷ್ಟು ರಾಸುಗಳಿಗೆ ಪೂಜೆ ಸಲ್ಲಿಸಿ ಬೆಂಕಿಯ ಮೇಲೆ ಅವುಗಳನ್ನು ಓಡಿಸುವ ಮೂಲಕ ಕಿಚ್ಚಾಯಿಸುವುದನ್ನು ಸರಳವಾಗಿ ಆಚರಣೆ ಮಾಡಲಾಯಿತು. ಇಲ್ಲಿಗೆ ಬಂದಿದ್ದ ನೂರಾರು ಪ್ರವಾಸಿಗರು ಬಹಳ ಉತ್ಸಾಹಕರಾಗಿ ಸುಗ್ಗಿಯ ಹಬ್ಬವನ್ನ ವೀಕ್ಷಣೆ ಮಾಡಿದ್ದು ವಿಶೇಷವಾಗಿತ್ತು. ಜಾನಪದ ಲೋಕದ ಸುಗ್ಗಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡ ಪ್ರವಾಸಿಗರು ರಾಶಿ ಪೂಜೆ ನಂತರ ನಡೆದ ರಾಸುಗಳ ಕಿಚ್ಚು ಹಾಯಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಪ್ಪಾಳೆ, ಶಿಳ್ಳೆ ಹೊಡೆದು ಆನಂದಸಿದರು. ಹಾಗೂ ಸಾಂಪ್ರದಾಯಿಕವಾಗಿ ಬೇಯಿಸಿದ ಕಡ್ಲೆಕಾಯಿ, ಅವರೆಕಾಯಿ ಪ್ರಸಾದ ಸವಿದು ಆನಂದಿಸಿದರು.

ರಾಶಿ ಪೂಜೆ ಮಾಡುವ ಮೂಲಕ ಹಬ್ಬಕ್ಕೆ ಚಾಲನೆ
ಜಾನಪದ ಲೋಕದ ಸಂಕ್ರಾಂತಿ ಸುಗ್ಗಿ ಹಬ್ಬಕ್ಕೆ ರಾಶಿ ಪೂಜೆ ಮಾಡುವ ಮೂಲಕ ಜಾನಪದ ಲೋಕದ ಅಧ್ಯಕ್ಷ ಹಿ.ಶಿ.ರಾಮಚಂದ್ರೇಗೌಡ ಅವರು ಚಾಲನೆ ನೀಡಿದರು. ಇನ್ನು ಸುಗ್ಗಿ ಹಬ್ಬದಲ್ಲಿ ಜಾನಪದ ಲೋಕದ ಮ್ಯಾನೇಜಿಂಗ್ ಟ್ರಸ್ಟಿ ಅದಿತ್ಯನಂಜರಾಜ್, ಲೋಕದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

ಸುಗ್ಗಿ ಹಬ್ಬ ಆಚರಣೆಯ ಉದ್ದೇಶವೇನು?
ರಾಶಿ ಪೂಜೆ ಸಲ್ಲಿಸಿ ಸಂಕ್ರಾಂತಿ ಆಚರಣೆ ಬಗ್ಗೆ ಮಾತನಾಡಿದ ಜಾನಪದ ಲೋಕದ ಅಧ್ಯಕ್ಷ ಹಿ.ಶಿ.ರಾಮಚಂದ್ರೇಗೌಡ, ವರ್ಷದ ಮೊದಲ ಸುಗ್ಗಿ ಹಬ್ಬ ಶುದ್ಧತೆಯ ಸಂಕೇತವಾಗಿದೆ. ಮಕರ ಸಂಕ್ರಮಣ ಕಾಲದಲ್ಲಿ ಕೆಟ್ಟದನ್ನು ಬಿಟ್ಟು ಹೊಸತನ್ನು ಅಳವಡಿಸಿಕೊಳ್ಳಲು ಪ್ರಶಸ್ತವಾಗಿದೆ. ಹಾಗಾಗಿ ಗ್ರಾಮೀಣ ಬದುಕಿನಲ್ಲಿ ಸಂಕ್ರಾಂತಿ ಹಬ್ಬಕ್ಕೆ ಮಹತ್ವ ಇದೆ. ರೈತರು ತಾವು ಬೆಳೆದ ಫಸಲನ್ನು ರಾಶಿ ಹಾಕಿ ಪೂಜೆ ಸಲ್ಲಿಸಿ ಬೆಳೆಯ ಸ್ವಲ್ಪ ಭಾಗವನ್ನು ದಾನ ಮಾಡುವುದು ಸಂಪ್ರದಾಯವಿದೆ ಎಂದರು.

ರಾಸುಗಳನ್ನ ಬೆಂಕಿಯಲ್ಲಿ ಹಾಯಿಸುವುದೇಕೆ?
ಇನ್ನು ನಮ್ಮ ಪೂರ್ವಿಕರ ಬದುಕಿನಲ್ಲಿ ರಾಸುಗಳು ಅವಿಭಾಜ್ಯ ಅಂಗವಾಗಿವೆ. ಹಾಗಾಗಿ ಸಂಕ್ರಾಂತಿ ಹಬ್ಬದಂದು ರಾಸುಗಳ ಮೈ ತೊಳೆದು ಬಣ್ಣಗಳಿಂದ ಸಿಂಗಾರ ಮಾಡಿ, ಅವುಗಳಿಗೆ ರೋಗ ರುಜಿನಗಳಿಂದ ಮುಕ್ತಿ ಸಿಗಲಿ ಎಂಬ ಉದ್ದೇಶ ಹಾಗೂ ಬೆಂಕಿಯಲ್ಲಿ ಹಾದು ಹೋದಾಗ ಹಸುವಿನ ಮೈಮೇಲಿನ ಕೀಟಾಣುಗಳು ಹಬೆಗೆ ನಾಶವಾಗುತ್ತವೆ ಎಂಬ ವೈಜ್ಞಾನಿಕ ಉದ್ದೇಶ ಅಡಗಿದೆ ಎಂದು ತಿಳಿಸಿದರು.












Click it and Unblock the Notifications