ಕಾಂಗ್ರೆಸ್ ಗ್ಯಾರಂಟಿ ಯಶಸ್ಸು ಕಂಡ ವಿಪಕ್ಷದಿಂದ ಸರ್ಕಾರ ಉರುಳಿಸುವ ತಂತ್ರ-ಎಚ್.ಸಿ ಬಾಲಕೃಷ್ಣ
ರಾಮನಗರ, ಆಗಸ್ಟ್ 02: ಕಾಂಗ್ರೆಸ್ ಪಕ್ಷದಲ್ಲಿ ಮುಖಂಡರ ನಡುವೆ ಅಸಮಾಧಾನ ಆರಂಭವಾಗಿದೆ ಎನ್ನುವುದರ ಬಗ್ಗೆ ಮಾಗಡಿ ಶಾಸಕ ಎಚ್.ಸಿ ಬಾಲಕೃಷ್ಣ ಮಾತನಾಡಿದ್ದು, ಲೋಕಸಭಾ ಚುನಾವಣಾ ಸಂಬಂಧ ದೆಹಲಿಗೆ ಮಂತ್ರಿಗಳು ಹೋಗಿದ್ದಾರೆ. ಚುನಾವಣೆಯ ಜವಾಬ್ದಾರಿ ನೀಡಲು ದೆಹಲಿಗೆ ಕರೆಸಿಕೊಂಡಿದ್ದಾರೆ ಎಂದರು.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದಿಂದ ಜನ ತತ್ತರಿಸಿ ಹೋಗಿದ್ದರು. ಕಾಂಗ್ರೆಸ್ ಪಕ್ಷ ಸಾಮಾನ್ಯ ಜನರಿಗಾಗಿ ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಗ್ಯಾರಂಟಿಗಳ ಒತ್ತಡ ಜಾಸ್ತಿ ಆಗಿದೆ. ಹಣ ಸೋರಿಕೆ ತಡೆಗಟ್ಟುವುದು, ಸಂಪನ್ಮೂಲ ಕ್ರೋಢೀಕರಣ ಮಾಡುವುದು ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. 6 ತಿಂಗಳ ನಂತರ ಎಲ್ಲವೂ ಸರಿಹೋಗುತ್ತದೆ ಎಂದು ಹೇಳಿದರು.

ಸಚಿವರು ಶಾಸಕರಿಗೆ ಸ್ಪಂದಿಸುತ್ತಿಲ್ಲ ಎಂಬ ವಿಚಾರವಾಗಿ ಮಾತನಾಡಿದ ಅವರು, ಎಲ್ಲಾ ಪಕ್ಷದಲ್ಲೂ ಇದು ಇರುತ್ತದೆ.
ನಮ್ಮ ಸ್ನೇಹಿತರೇ ನಮ್ಮ ಮೇಲೆ ಅಸಮಾಧಾನ ಮಾಡಿಕೊಳ್ಳುತ್ತಾರೆ. ಕಾರ್ಯದೊತ್ತಡ ಹಿನ್ನಲೆಯಲ್ಲಿ ಶಾಸಕರಿಗೆ ಸಚಿವರು ಸ್ಪಂದಿಸಲು ಆಗುವುದಿಲ್ಲ. ಅಸಮಾಧಾನ ಎಲ್ಲರ ಮೇಲೂ ಇರುತ್ತದೆ. ಅದನ್ನು ಬೇರೆ ರೀತಿಯಲ್ಲಿ ಬಿಂಬಿಸುವುದು ಬೇಡ ಎಂದರು.

ಟ್ರಾನ್ಸ್‌ಫರ್ ವಿಚಾರ, ಸಣ್ಣ ಪುಟ್ಟ ಕೆಲಸಗಳು ಆಗಿಲ್ಲ ಎಂದು ಅಸಮಾಧಾನ ಇರುತ್ತದೆ. ಇದನ್ನೆಲ್ಲಾ ಸರಿಪಡಿಸುವ ಕೆಲಸ ಸಿಎಂ ಹಾಗೂ ಡಿಸಿಎಂ ಮಾಡುತ್ತಾರೆ. ಪತ್ರ ಬರೆದಿರುವುದು ಬೋಗಸ್, ಯಾರು ಸಹ ಪತ್ರಗಳನ್ನು ಬರೆದಿಲ್ಲ. ಪತ್ರವನ್ನು ಕಟ್ ಅಂಡ್ ಪೇಸ್ಟ್ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಸರ್ಕಾರ ಬೀಳಿಸುವ ಕೆಲಸ ನಡೆಯುತ್ತಿದೆ ಎನ್ನುವ ವಿಚಾರದ ಬಗ್ಗೆ ಮಾತನಾಡಿದ ಶಾಸಕ ಬಾಲಕೃಷ್ಣ, ಕಾಂಗ್ರೆಸ್‌ನ 5 ಗ್ಯಾಂರಂಟಿಗಳು ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬಿದ್ದಿದೆ. ಸ್ವಾತಂತ್ರ್ಯ ಬಂದ ನಂತರವೂ ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ ಸಿಕ್ಕಿಲ್ಲ ಎಂಬ ಆರೋಪ ಇತ್ತು. ಈಗ ಎಲ್ಲಾ ಪುಣ್ಯಕ್ಷೇತ್ರಗಳು ಹೆಣ್ಣು ಮಕ್ಕಳಿಂದ ಕೂಡಿದೆ. ಇದೆಲ್ಲವನ್ನೂ ನೋಡಿದಾಗ ವಿರೋಧ ಪಕ್ಷದವರಿಗೆ ತಲೆ ಕೆಡುತ್ತದೆ. ಇದರಿಂದ ವಿಚಲಿತರಾಗಿ ಸರ್ಕಾರ ಉಳಿಸುವ ತಂತ್ರ ಮಾಡ್ತಿದ್ದಾರೆ. ಇದೆಲ್ಲಾ ಅವರ ಕನಸು ಎಂದರು.
ಯಾರಿಂದ ಕೂಡ ಸರ್ಕಾರ ಬೀಳಿಸಲು ಸಾಧ್ಯವಿಲ್ಲ. 40 ಜನ ಶಾಸಕರನ್ನು ಕರೆದುಕೊಂಡು ಹೋಗೊಕೆ ಆಗುತ್ತಾ..? ಸಿದ್ದರಾಮಯ್ಯ ಅವರು ಏನು ನಿದ್ದೆ ಮಾಡ್ತಾ ಇದ್ದಾರ...? ಸಿದ್ದರಾಮಣ್ಣ ಏನು ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ ಇಲ್ಲವಲ್ಲ. ಎಲ್ಲಾ ಶಾಸಕರನ್ನು ಭೇಟಿ ಮಾಡಿ ಅವರ ಸಮಸ್ಯೆ ಕೇಳುತ್ತಾರೆ ಎಂದು ಹೇಳಿದರು.
ಜೊತೆಗೆ ಸಣ್ಣಪುಟ್ಟ ಏನೇ ಆದ್ರೂ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಇದ್ದಾರೆ. ಅವರು ಯಾವುದೇ ಹೋಟೆಲ್‌ನಲ್ಲಿ ಇಲ್ಲ. ಡಿ.ಕೆ ಶಿವಕುಮಾರ್ ಎಲ್ಲರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಕುಮಾರಸ್ವಾಮಿ ಬಿಜೆಪಿ ಅವರ ಜೊತೆ ಸೇರಿ ಸರ್ಕಾರ ಬೀಳಿಸುವ ಕೆಲಸ ಮಾಡುತ್ತಿದ್ದಾರೆ ಎನ್ನುವ ಊಹಾಪೋಹ ಇದೆ .ಬಿಜೆಪಿ ಅವರ ಜೊತೆ ಸೇರಿ ಏನೋ ಮಾಡುತ್ತಿದ್ದಾರೆ ಅನ್ನಿಸುತ್ತೆ ಎಂದು ಹೇಳಿದ್ದಾರೆ.












Click it and Unblock the Notifications