ರಾಮನಗರ: ಕಾಡಾನೆ ದಾಳಿಗೆ ತೋಟದ ಕಾವಲುಗಾರ ಬಲಿ, ರೈತರ ಆಕ್ರೋಶ
ರಾಮನಗರ, ಜೂನ್ 03: ಜಿಲ್ಲೆಯಲ್ಲಿ ಕಾಡು ಪ್ರಾಣಿ ಹಾಗೂ ಮಾನವ ಸಂಘರ್ಷ ಮಿತಿಮೀರಿದ್ದು, ಕಳೆದ ರಾತ್ರಿ ಮಾವಿನ ತೋಟದ ಮೇಲೆ ದಾಳಿ ಮಾಡಿದ ಕಾಡಾನೆನೆ ತೋಟದ ಕಾವಲುಗಾರರನ್ನು ತುಳಿದು ಸಾಯಿಸಿದೆ. ಈ ಘಟನೆ ಬಳಿಕ ಅರಣ್ಯ ಇಲಾಖೆ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದು, ಕಳೆದ ಕೆಲ ವರ್ಷಗಳಿಂದ ನಿರಂತರವಾಗಿರುವ ಕಾಡಾನೆ ದಾಳಿಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದ್ದಾರೆ.
ಚನ್ನಪಟ್ಟಣದ ವಿರುಪಸಂದ್ರ ಗ್ರಾಮದ ದೇವರಾಜು ಎಂಬುವರಿಗೆ ಸೇರಿದ ಮಾವಿನತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ಮಾವಿನ ಫಸಲು ನಾಶಮಾಡುವ ಜೊತಗೆ ತೋಟದ ಕಾವಲುಗಾರ ವೀರಭದ್ರಯ್ಯ ಎಂಬಾತನ್ನು ತುಳಿದು ಸಾಯಿಸಿವೆ. ಮೃತ ವೀರಭದ್ರಯ್ಯ, ಮೂಲತಃ ಕನಕಪುರ ತಾಲೂಕಿನ ಬಸವನಹಳ್ಳಿ ಗ್ರಾಮದವರು ಎಂದು ತಿಳಿದು ಬಂದಿದೆ.

ಮಾವಿನತೋಟದಲ್ಲಿ ಕಾಯುವ ಕೆಲಸ ಮಾಡುತ್ತಿದ್ದ ವೀರಭದ್ರಯ್ಯ ಪ್ರತಿದಿನ ರಾತ್ರಿ 10 ಗಂಟೆಯವರೆಗೆ ತೋಟದಲ್ಲಿ ಕಾವಲು ಕೆಲಸ ಮಾಡಿ ಮನೆಗೆ ವಾಪಸ್ಸಾಗಿ ನಂತರ ಮತ್ತೆ ಬೆಳಿಗಿನ ಜಾವ 5 ಗಂಟೆಗೆ ತೋಟಕ್ಕೆ ತೆರಳುತ್ತಿದ್ದ. ಇಂದು ಸಹ ಎಂದಿನಂತೆ ಬೆಳಗಿನ ಜಾವ ತೋಟಕ್ಕೆ ತೆರಳಿದ ಸಮಯದಲ್ಲಿ ಪುಂಡಾನೆ ದಾಳಿ ಮಾಡಿ ವೀರಭದ್ರಯ್ಯ ಅವರನ್ನು ತುಳಿದು ಸಾಯಿಸಿದೆ.
ಹಣದ ಪರಿಹಾರ ಬೇಡ, ಶಾಶ್ವತ ಪರಿಹಾರ ಬೇಕು
ಕಾವೇರಿ ವನ್ಯಜೀವಿ ವಲಯದ ಮುತ್ತತ್ತಿ ಅರಣ್ಯ ಪ್ರದೇಶದಿಂದ ವಲಸೆ ಬಂದಿರುವ ಸುಮಾರು 25 ಆನೆಗಳ ಹಿಂಡು, ಚಿಕ್ಕ ಚಿಕ್ಕ ಗುಂಪುಗಳಾಗಿ ಜಿಲ್ಲೆಯ ತೆಂಗಿನಕಲ್ಲು ಅರಣ್ಯ ಪ್ರದೇಶ ಹಾಗೂ ಕಬ್ಬಾಳು ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟು, ರೈತರ ಜಮೀನುಗಳ ಮೇಲೆ ದಾಳಿಯಿಟ್ಟು ನಿರಂತರವಾಗಿ ಉಪಟಳ ನೀಡುತ್ತಿವೆ. ಅರಣ್ಯ ಸಿಬ್ಬಂದಿ ಹಲವು ಬಾರಿ ಆನೆ ಓಡಿಸುವ ಕಾರ್ಯಚರಣೆ ನಡೆಸಿದರು ಪ್ರಯೋಜನವಾಗುತ್ತಿಲ್ಲ.
ರೈತರ ಜಮೀನುಗಳ ಮೇಲೆ ದಾಳಿ ಮಾಡುವ ಕಾಡಾನೆಗಳ ಹಿಂಡು ಬೆಳೆ ನಾಶ ಮಾಡುತ್ತಿವೆ. ಆದರೆ ಇದೆ ತಂಡದ ಒಂಟಿ ಸಲಗ ಜನರ ಮೇಲೆ ದಾಳಿ ಮಾಡುವ ಮೂಲಕ ರೈತರಲ್ಲಿ ಆತಂಕ ಮೂಡಿಸಿದೆ. ಕಬ್ಬಾಳು ಅರಣ್ಯ ಪ್ರದೇಶ ಹಾಗೂ ತೆಂಗಿನಕಲ್ಲು ಅರಣ್ಯ ಪ್ರದೇಶ ವ್ಯಾಪ್ತಿಗಳಲ್ಲಿ ಜನರ ಮೇಲೆ ನಡೆದ ಬಹುತೇಕ ದಾಳಿಗಳನ್ನು ಇದೇ ಪುಂಡಾನೆ ಮಾಡಿದೆ.

ಪ್ರತಿ ಬಾರಿ ಒಂಟಿ ಸಲಗದ ದಾಳಿಗೆ ಜನರು ಬಲಿಯಾದಾಗ ಸರ್ಕಾರ ಅವರ ಕುಟುಂಬಕ್ಕೆ ಪರಿಹಾರ ನೀಡಿ ಸುಮ್ಮನಾಗುತ್ತಿದೆ. ಆನೆ ದಾಳಿಗೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ನಮಗೆ ಹಣದ ಪರಿಹಾರ ಬೇಡ, ಕಾಡನೆಗೆ ದಾಳಿಗೆ ಶಾಶ್ವತ ಪರಿಹಾರ ಬೇಕು ಎಂದು ಗ್ರಾಮಸ್ಥರು ಸರ್ಕಾರ ಹಾಗೂ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಪ್ರಯೋಜನಕ್ಕೆ ಬಾರದ ಪುಂಡಾನೆ ಸೆರೆ
ಕಳೆದ ಹಲವು ವರ್ಷಗಳಿಂದ ರಾಮನಗರ ಹಾಗೂ ಚನ್ನಪಟ್ಟಣದ ವ್ಯಾಪ್ತಿಯ ಗಡಿಗ್ರಾಮಗಳಲ್ಲಿ ಆನೆಗಳ ಹಾವಳಿ ವಿಪರೀತವಾಗಿದ್ದು, ಆನೆಗಳ ದಾಳಿಯಿಂದ ರೈತರು ಹೈರಾಣಾಗಿದ್ದರು. ಅಲ್ಲದೇ ಬಿ.ವಿ.ಹಳ್ಳಿ ಬಳಿ ಓರ್ವ ಮಹಿಳೆ ಆನೆ ದಾಳಿಗೆ ಬಲಿಯಾದಗ, ಅರಣ್ಯ ಇಲಾಖೆ ಸಾಕಾನೆಗಳನ್ನು ಬಳಸಿ ಎರಡು ಪುಂಡಾನೆಯನ್ನು ಸೆರೆ ಹಿಡಿದು ಬೇರೆ ಕಾಡಿಗೆ ಸ್ಥಳಾಂತರ ಮಾಡಿತ್ತು.
ಕಾಡಾನೆ ಸೆರೆ ಕಾರ್ಯಾಚರಣೆಗೆ ದುಬಾರೆ ಆನೆ ಶಿಬಿರದಿಂದ ಪ್ರಶಾಂತ್, ಹರ್ಷ, ಲಕ್ಷ್ಮಣ ಹಾಗೂ ಮತ್ತಿಗೋಡು ಆನೆ ಶಿಬಿರದಿಂದ ಮಹಾರಾಷ್ಟ್ರ ಭೀಮ, ಗಣೇಶ ಐದು ಸಾಕಾನೆಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು , ಸಿಬ್ಬಂದಿ ಹಾಗೂ ಮಾವುತರು ಸೇರಿದಂತೆ ಐವತ್ತಕ್ಕೂ ಹೆಚ್ಚು ಮಂದಿ ಕಾರ್ಯಾಚರಣೆ ನಡೆಸಿ ಎರಡು ಪುಂಡಾನೆಯನ್ನು ಸೆರೆ ಹಿಡಿಯಲಾಗಿತ್ತು. ಆನೆ ಸೆರೆ ಕಾರ್ಯಾಚರಣೆಗೆ ಸುಮಾರು 25 ಲಕ್ಷ ರೂ. ವೆಚ್ಚವಾಗಿತ್ತು.
150 ಕಿಮೀ ನಡೆದು ಜಿಲ್ಲೆಗೆ ಮರಳಿದ ಪುಂಡಾನೆ
ಐದು ಸಾಕಾನೆ ಬಳಸಿಕೊಂಡು ಆಗಸ್ಟ್ 13 ರಂದು ಪುಂಡಾನೆ ಸೆರೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಕಾರ್ಯಾಚರಣೆ ಆರಂಭಿಸಿದ ಮರುದಿನವೇ (ಆ.14 ರಂದು) ತೆಂಗಿನಕಲ್ಲು ಅರಣ್ಯ ವ್ಯಾಪ್ತಿಯ ಕೆಂಪಿಕಟ್ಟೇ ಬಳಿ ಆನೆಯನ್ನು ಸೆರೆ ಹಿಡಿಯಲಾಗಿತ್ತು. ಸೆರೆ ಹಿಡಿದ ಪುಂಡಾನೆಯನ್ನು ಮಲೆಮಹದೇಶ್ವರ ಬೆಟ್ಟದ ಅರಣ್ಯದಲ್ಲಿ ಬಿಡಲಾಗಿತ್ತು.
ಮಲೆಮಹದೇಶ್ವರ ಬೆಟ್ಟದಿಂದ ಆಚೆ ತಮಿಳುನಾಡು ಗಡಿಪ್ರದೇಶದ ಅರಣ್ಯಕ್ಕೆ ಬಿಡಲಾಗಿದ್ದ ಪುಂಡಾನೆ ಸುಮಾರು 150 ಕಿಲೋ ಮೀಟರ್ ಪ್ರಯಾಣ ಮಾಡಿ ಜಿಲ್ಲೆಯ ಅರಣ್ಯಕ್ಕೆ ಮರಳಿದ್ದು, ಇದೀಗ ಆನೆ ಉಪಟಳ ಹೆಚ್ಚಾಗಿದೆ. ತಮಿಳುನಾಡು ಗಡಿ ಪ್ರದೇಶದ ಅರಣ್ಯಕ್ಕೆ ಆನೆಯನ್ನು ಬಿಟ್ಟ ಮರುದಿನದಲ್ಲೇ ಪುಂಡಾನೆ ತನ್ನ ಪ್ರಯಾಣ ಪ್ರಾರಂಭಿಸಿ ಕೆಲ ತಿಂಗಳ ಹಿಂದೆ ಸಾತನೂರಿನ ಮೂಲಕ ತೆಂಗಿನಕಲ್ಲು ಅರಣ್ಯ ಪ್ರವೇಶಿಸಿ ತನ್ನ ಉಪಟಳ ಮುಂದುವರೆಸಿದೆ.












Click it and Unblock the Notifications