ಕನಕಪುರ: ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಸಾವು
ರಾಮನಗರ, ಸೆಪ್ಟೆಂಬರ್, 07: ಹಸು ಮೇಯಿಸಿ ವಾಪಸ್ ಬರುತ್ತಿದ್ದ ವೇಳೆ ಕಾಡಾನೆಯೊಂದು ದಾಳಿ ಮಾಡಿ ಕೂಲಿ ಕಾರ್ಮಿಕನನ್ನು ಸಾಯಿಸಿದ ಘಟನೆ ಘಟನೆ ಕನಕಪುರ ತಾಲೂಕಿನ ಕೊಳಗೊಂಡನಹಳ್ಳಿ ಬಳಿ ನಿನ್ನೆ ಸಂಜೆ ನಡೆದಿದೆ.
ಕೊಳಗೊಂಡನಹಳ್ಳಿ ಗ್ರಾಮದ ಚಿಕ್ಕರಾಮಯ್ಯ (58) ಕಾಡಾನೆ ದಾಳಿಯಿಂದ ಮೃತಪಟ್ಟವರಾಗಿದ್ದಾರೆ. ಕಾಡಾನೆ ಸೊಂಡಿಲಿನಿಂದ ತಿವಿದ ಪರಿಣಾಮ ಕೂಲಿ ಕಾರ್ಮಿಕ ಚಿಕ್ಕರಾಮಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದು, ಘಟನಾ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಭೇಟಿ, ಪರಿಶೀಲನೆ ನಡೆಸಿದ್ದಾರೆ.

ಇನ್ನು ಕಾಡಾನೆ ಹಾವಳಿ ತಪ್ಪಿಸದ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಲ್ಲದೆ, ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸಿದರು.
ಚಿಕಿತ್ಸೆ ಫಲಕಾರಿಯಾಗದೆ ಸಾವು
ಚಿಕಿತ್ಸೆ ನೀಡಲು ಹೋಗಿ ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ಅರಣ್ಯ ಸಿಬ್ಬಂದಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ವೆಂಕಟೇಶ್ ಮೃತ ಅರಣ್ಯ ಸಿಬ್ಬಂದಿ ಎಂದು ಗುರುತಿಸಲಾಗಿದೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹಳ್ಳಿಯೂರು ಬಳಿ ಘಟನೆ ನಡೆದಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ವಾರಾಗಳ ಹಿಂದೆ ಕಾಡಾನೆಗಳ ಕಾದಾಟದಲ್ಲಿ ಭೀಮಾ ಆನೆ ಗಾಯಗೊಂಡಿದ್ದು, ಇದಕ್ಕೆ ಚಿಕಿತ್ಸೆ ನೀಡಲು ಅರಣ್ಯ ಸಿಬ್ಬಂದಿ ಮುಂದಾಗಿದ್ದಾರೆ. ಇದುವರೆಗೆ ಯಾರ ಮೇಲೂ ದಾಳಿ ಮಾಡದೆ ಸೌಮ್ಯ ಸ್ವಭಾವ ಹೊಂದಿದ್ದ ಭೀಮನಿಗೆ ಚಿಕಿತ್ಸೆ ನೀಡಲು ಮೃತ ವೆಂಕಟೇಶ್ ತೆರಳಿದ್ದರು. ಮೊದಲು ಅರಣ್ಯ ಸಿಬ್ಬಂದಿ ಭೀಮ ಇರುವ ಜಾಗ ಗುರುತಿಸಿದ್ದಾರೆ.
ಬಳಿಕ ಗಾಯಗೊಂಡ ಭೀಮನನ್ನು ಸೆರೆ ಹಿಡಿದು ಚಿಕಿತ್ಸೆ ನೀಡಲು ವೆಂಕಟೇಶ್ ಅವರು ಅರವಳಿಕೆ ಚುಚ್ಚುಮದ್ದು ನೀಡಿದ್ದರು. ನಂತರ ಹಳ್ಳಿಯೂರು ಬಳಿ ನಿಂತಿದ್ದ ಭೀಮನ ಬಳಿ ವನ್ಯಜೀವಿ ವೈದ್ಯ ವಸೀಂ ಜೊತೆ ವೆಂಕಟೇಶ್ ಕೂಡ ಚಿಕಿತ್ಸೆ ನೀಡಲು ತೆರಳಿದ್ದರು. ಅರಣ್ಯ ಸಿಬ್ಬಂದಿ ತಮ್ಮ ಯೋಜನೆಯಂತೆ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ. ಭೀಮನ ಕಂಡು ವನ್ಯಜೀವಿ ವೈದ್ಯ ವಸೀಂ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ.
ಈ ವೇಳೆ ಗಾಯಗೊಂಡಿದ್ದ ಭೀಮ ಏಕಾಏಕಿಯಾಗಿ ವೆಂಕಟೇಶ್ ಮೇಲೆ ದಾಳಿ ನಡೆಸಿದ್ದಾನೆ. ಕಾಡಾನೆಯ ದಾಳಿಗೆ ವೆಂಕಟೇಶ್ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೆ ವೆಂಕಟೇಶ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ವೆಂಕಟೇಶ್ ಹಲವು ವರ್ಷಗಳಿಂದ ಈ ಹಿಂದೆ ಹತ್ತಾರು ಕಾಡಾನೆಗಳ ಸೆರೆ ವೇಳೆ ಅರವಳಿಕೆ ಮದ್ದು ನೀಡಿದ ಅನುಭವ ಹೊಂದಿದ್ದರು. ಆದರೆ ಈ ಬಾರಿ ಚಿಕಿತ್ಸೆ ನೀಡುವ ಮುನ್ನ ಅರವಳಿಕೆ ಚುಚ್ಚುಮದ್ದು ನೀಡುವಾಗ ನಡೆದ ಎಡವಟ್ಟಿನಿಂದಾಗಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.












Click it and Unblock the Notifications