ನರೇಗಾ ಅನುಷ್ಠಾನದಲ್ಲಿ ಅವ್ಯವಹಾರ: 300ಕ್ಕೂ ಹೆಚ್ಚು ಪ್ರಕರಣ ದಾಖಲು!
ರಾಮನಗರ ಮಾರ್ಚ್ 5: ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ)ಯ ಅನುಷ್ಠಾನದಲ್ಲಿ ಕಳೆದ ವರ್ಷ ರಾಮನಗರದಲ್ಲಿ 386 ಅವ್ಯವಹಾರ ಪ್ರಕರಣಗಳು ದಾಖಲಾಗಿದ್ದು, 386 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ.
ನರೇಗಾ ಯೋಜನೆಯಡಿ ನಾನಾ ಅಕ್ರಮ, ಕಳಪೆ ಗುಣಮಟ್ಟ, ನಿರುದ್ಯೋಗ ಭತ್ಯೆ, ವೇತನ ಪಾವತಿ ವಿಳಂಬ ಸೇರಿ ದಾಖಲಾದ 386ರ ಪೈಕಿ 59 ಪ್ರಕರಣಗಳು ಸಾಬೀತಾಗಿವೆ. ಒಂಬುಡ್ಸ್ ಮನ್‌ರವರು ಆರೋಪ ಸಾಬೀತಾದ ಪ್ರಕರಣದಲ್ಲಿ ಅಕ್ರಮಕ್ಕೆ ಸಂಬಂಧಪಟ್ಟವರಿಂದ 74,55,119ರೂ.ಗಳನ್ನು ವಸೂಲಿ ಮಾಡುವಂತೆ ಆದೇಶ ನೀಡಿದ್ದಾರೆ.

ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ 42 ಪ್ರಕರಣಗಳು ದಾಖಲಾಗಿ 38 ಪ್ರಕರಣಗಳು ಇತ್ಯಾರ್ಥವಾಗಿದ್ದವು, ಆರು ಪ್ರಕರಣದಲ್ಲಿ 35,47.035 ರೂ. ವಸೂಲಾತಿಗೆ ಆದೇಶಿಸಲಾಗಿತ್ತು. ಅದೇ ರೀತಿ 2020-21ನೇ ಸಾಲಿನಲ್ಲಿ ದಾಖಲಾದ 142 ಪ್ರಕರಣಗಳಲ್ಲಿ 12 ರಿಂದ 4,57,673 ರೂ ಹಾಗೂ 2021-2022ನೇ 65 ಪ್ರಕರಣಗಳ ಪೈಕಿ 64 ಇತ್ಯಾರ್ಥಗೊಂಡು 14 ಪ್ರಕರಣಗಳಿಂದ 18,28,082 ರೂ ವಸೂಲಿಗೆ ಆದೇಶವಾಗಿತ್ತು.
2022-23ನೇ ಸಾಲಿನಲ್ಲಿ ದಾಖಲಾದ 84 ಪ್ರಕರಣಗಳಲ್ಲಿ 83 ವಿಲೇವಾರಿ ಮಾಡಲಾಗಿದ್ದು, ಆರೋಪ ಸಾಬೀತಾದ 21 ಪ್ರಕರಣಗಳಲ್ಲಿ 13,59,634 ರೂ. ಹಾಗೂ 2023-24 ನೇ ಸಾಲಿನ 53 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 6 ಪ್ರಕರಣಗಳು 2,62,695 ರೂ. ವಸೂಲಾತಿಗೆ ಒಂಬುಡ್ಸ್ ಮನ್ ಆದೇಶ ಪ್ರಶ್ನಿಸಿ ಅಧಿಕಾರಿಗಳು ಮೇಲ್ಮನವಿ ಪ್ರಧಿಕಾರದ ಮೊರೆ ಹೋದ ಉದಾಹರಣೆಗಳು ಇವೆ.
ಯಾವ ರೀತಿ ಪ್ರಕರಣಗಳು?
ಯೋಜನೆ ಅನುಷ್ಠಾನದಲ್ಲಿ ಅಧಿಕಾರಿಗಳ ಕರ್ತವ್ಯಲೋಪ, ಬೇಜವಬ್ದಾರಿ ವರ್ತನೆ, ಕ್ರಮವಲ್ಲದ ಕ್ರಮ, ಅಸಮರ್ಪಕ ಕಾರ್ಯನಿರ್ವಹಣೆ, ಸ್ವಜನಪಕ್ಷಪಾತ, ಸೇವಾ ವಿಫಲತೆ, ಪಕ್ಷಪಾತ ಇತರೆ ದೂರು ಕುರಿತು ವಿಚಾರಣೆ ನಡೆಸಿ ತೀರ್ಮಾಣ ಘೋಷಿಸುವ ಸರ್ಕಾರದಕ್ಕೆ ವರದಿ ಸಲ್ಲಿಸುವ ಅಧಿಕಾರ ಒಂಬುಡ್ಸ್‌ಮನ್ ವ್ಯಾಪ್ತಿಯಲ್ಲಿದೆ.
ಕಳಪೆ ಕಾಮಗಾರ, ಜೆಸಿಬಿ ಯಂತ್ರ ಬಳಸಿ ಕಾಮಗಾರಿ ಅನುಷ್ಠಾನ, ಸ್ವಂತ ಜಮೀನಿನಲ್ಲಿ ಸಮುದಾಯ ಕಾಮಗಾರಿ ಮಾಡಿರುವುದು, ಕಾಮಗಾರಿ ಅನುಷ್ಠಾನ ಮಾಡದೇ ಹಣ ಬಿಡುಗಡೆ ಮಾಡಿರುವ, ಕಡಿಮೆ ಅಳತೆಯ ಕಾಮಗಾರಿಗೆ ಹೆಚ್ಚು ಹಣ ಪಾವತಿ, ಅನುಮೋದಿಸಲ್ಪಡದ ಕಾಮಗಾರಿಗಳ ಅನುಷ್ಠಾನ ಹಾಗೂ ಒಂದೇ ಕಾಮಗಾರಿಗೆ ಎರಡು ಬಾರಿ ಬಿಲ್ ಮಾಡಿರುವ ಬಗ್ಗೆ ದೂರುಗಳು ಬರುತ್ತವೆ.
ಅರ್ಜಿ, ಮನವಿಗಳು, ಅರ್ಜಿವಿಲೇವಾರಿ, ಪಂಚಾಯತಿ ಸಂದಾಯಗಳು, ಮಾನಸಿಕ ಸಭೆ, ಫಲಾನುಭವಿಗಳ ಆಯ್ಕೆ ಕುರಿತು ದೂರುಗಳನ್ನು ಸ್ವೀಕರಿಸಬಹುದಾಗಿದೆ. ದೂರನ್ನು ಘೋಷಿತ ಪ್ರಮಾಣ ಪತ್ರ, ನಿಗದಿತ ಸಮೂನೆಯಲ್ಲಿ ಪಡೆದು ತನಿಖೆ ನಡೆಸುವ ಅಧಿಕಾರ ಒಂಬುಡ್ಸ್ ಮನ್ ಅವರಿಗೆ ನೀಡಲಾಗಿದೆ.
ವಿವೇಚನಾಧಿಕಾರ ಬಳಸಿ ಸರ್ಕಾರಕ್ಕೆ ವರದಿ ಸಲ್ಲಿಸಲು, ಅಂತಿಮ ಆದೇಶ ನೀಡುವ ಸಂಬಂಧ ವಿಶೇಷ ನ್ಯಾಯಾಧಿಕರವನ್ನು ಒಂಬುಡ್ಸ್ ಮನ್‌ಗೆ ನೀಡಲಾಗಿದೆ. ಗ್ರಾಮೀಣ ಅಭಿವೃದ್ಧಿ ಹಾಗೂ ಗ್ರಾಮೀಣದ ನಗರ ಪ್ರದೇಶ ವಲಸೆಯನ್ನು ತಪ್ಪಿಸಲು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣಾಭಿವೃದ್ಧಿಗೆ ರಚನಾತ್ಮಕ ಕಾರ್ಯಕ್ರಮವಾಗಿದೆ.
ಈ ಯೋಜನೆಯ ಅನುಷ್ಠಾನದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ಹೆಚ್ಚಿನ ಜವಬ್ದಾರಿ ಮತ್ತು ಪ್ರಾಮಾಣಿಕತೆಯಿಂದ ಅಧಿಕಾರಿಗಳು ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕಿದೆ ಎನ್ನುತ್ತಾರೆ ಒಂಬುಡ್ಸ್ ಮನ್ ಚಲುವರಾಜು.












Click it and Unblock the Notifications