Bengaluru-Mysuru expressway: ಕಾಮಗಾರಿ ಪೂರ್ಣಗೊಳ್ಳದೆ ಟೋಲ್ ಸಂಗ್ರಹ ಮಾಡಬೇಡಿ: JDS ಆಕ್ರೋಶ
ಬೆಂಗಳೂರು - ಮೈಸೂರು ದಶಪಥ ಹೆದ್ದಾರಿ ಟೋಲ್ ಸಂಗ್ರಹ ವಿರೋಧಿಸಿ ಜೆಡಿಎಸ್ ಪ್ರತಿಭಟನೆ ನಡೆಸಲು ಸಜ್ಜಾಗಿದೆ.
ರಾಮನಗರ, ಮಾರ್ಚ್, 16: ಬೆಂಗಳೂರು - ಮೈಸೂರು ದಶಪಥ ಹೆದ್ದಾರಿ ಟೋಲ್ ಸಂಗ್ರಹ ವಿರೋಧಿಸಿ ಗುರುವಾರ (ಮಾರ್ಚ್ 16) ಜೆಡಿಎಸ್ ಪ್ರತಿಭಟನೆ ನಡೆಸಲು ಸಜ್ಜಾಗಿದೆ. ಬಿಡದಿ ಕಣಮಿಣಕಿ ಬಳಿ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಪ್ರತಿಭಟನೆ ನಡೆಸುತ್ತಿದೆ.
ಪ್ರತಿಭಟನೆಗೆ ಸಜ್ಜಾದ ಜೆಡಿಎಸ್
ಬಿಡದಿ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ ಬಳಿಕ ಇದೀಗ ಟೋಲ್ ಸಂಗ್ರಹ ವಿರೋಧಿಸಿ ಜೆಡಿಎಸ್‌ನಿಂದ ಪ್ರತಿಭಟನೆ ನಡೆಸಲು ಸಜ್ಜಾಗಿದೆ. ಇದೀಗ ಕಣಮಿಣಕಿ ಟೋಲ್ ಬಳಿ ಜೆಡಿಎಸ್ ಕಾರ್ಯಕರ್ತರು ತಂಡೋಪ ತಂಡವಾಗಿ ಜಮಾಯಿಸಿದ್ದು, ನಿಖಿಲ್ ಕುಮಾರಸ್ವಾಮಿಗಾಗಿ ಕಾಯುತ್ತಿದ್ದಾರೆ. ಈ ವೇಳೆ ಕೆಲವು ಪ್ರತಿಭಟನಾಕಾರರು ಕಾಮಗಾರಿ ಪೂರ್ಣಗೊಳ್ಳದೆ ಟೋಲ್ ಸಂಗ್ರಹ ಮಾಡಬೇಡಿ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಹಾಗೆಯೇ ಟೋಲ್ ಬಳಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ 200ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಟೋಲ್ ಸಂಗ್ರಹಕ್ಕೆ ಭಾರಿ ವಿರೋಧ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಇತ್ತೀಚೆಗಷ್ಟೇ ಉದ್ಘಾನೆಯಾಗಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಸಂಗ್ರಹ ಮಾಡಲು ಮುಂದಾಗಿದೆ. ಹಾಗೆಯೇ ಶೇಷಗಿರಿಹಳ್ಳಿ ಟೋಲ್‌ನಲ್ಲಿ ಶುಲ್ಕದ ವಿಚಾರವಾಗಿ ವಾಹನ ಸವಾರರು ಮತ್ತು ಟೋಲ್ ಸಿಬ್ಬಂದಿಗಳ ನಡುವೆ ವಾಗ್ವಾದವೇ ನಡೆಯುತ್ತಿದೆ.

ಟೋಲ್ ಸಿಬ್ಬಂದಿಗೆ ಹಿಗ್ಗಾಮುಗ್ಗ ಕ್ಲಾಸ್
ಟೋಲ್ ಶುಲ್ಕವನ್ನು ಹೆಚ್ಚಳ ಮಾಡಿದ್ದರಿಂದ ವಾಹನ ಸವಾರರು ಅಲ್ಲಿನ ಸಿಬ್ಬಂದಿ ವಿರುದ್ಧ ಇತ್ತೀಚೆಗಷ್ಟೇ ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನು ಬಿಡದಿಯಿಂದ ಬಂದಂತಹ ಟೆಂಪೋ ಚಾಲಕನೊಬ್ಬ ಟೋಲ್ ಸಿಬ್ಬಂದಿಗೆ ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡಿದ್ದಾನೆ. ಬಿಡದಿಯಿಂದ ಬಂದಿದ್ದೀನಿ 400 ರೂಪಾಯಿ ಕೊಡಬೇಕಾ? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಗಲಾಟೆಯನ್ನು ನಿಯಂತ್ರಣ ಮಾಡಲು ಹರಸಾಹಸ ಪಟ್ಟಿದ್ದರು.
ಮೊದಲಿನಿಂದಲೂ ಬೆಂಗಳೂರು-ಮೈಸೂರು ಹೆದ್ದಾರಿ ವಿಚಾರವಾಗಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ನಡುವೆ ಕ್ರೆಡಿಟ್ ವಾರ್‌ಗಳೇ ನಡೆದವು. ಇದೀಗ ಟೋಲ್ ಸಂಗ್ರಹದ ಸಮಯದಲ್ಲೂ ಟೋಲ್ ಶುಲ್ಕದ ಹೆಚ್ಚಳ ವಿಚಾರವಾಗಿ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಬಿಜೆಪಿ ಸರ್ಕಾರದ ವಿರುದ್ಧ ಕೆಂಡಕಾರುತ್ತಿದ್ದಾರೆ.












Click it and Unblock the Notifications