Raichur Rain: ರಾಯಚೂರಿನಲ್ಲಿ ಬೆಳ್ಳಂಬೆಳಗ್ಗೆ ಜೋರು ಮಳೆ: ತಂಪಾದ ರಾಜನೂರಿನ ಜನ
ರಾಯಚೂರು ಏಪ್ರಿಲ್ 3: ರಾಯಚೂರಿನಲ್ಲಿ ಬೆಳ್ಳಂಬೆಳಗ್ಗೆ ಜೋರು ಮಳೆಯಾಗಿದೆ. ಇಂದು ಬೆಳಗಿನ ಜಾವ ಚಿನ್ನದ ನಾಡು ರಾಯಚೂರಿನಲ್ಲಿ ಸುರಿದ ಮಳೆಯಿಂದಾಗಿ ಬಿಸಿಲಿನ ಶಾಕದಿಂದ ಕಂಗೆಟ್ಟಿದ್ದ ಮಂದಿ ತಂಪಾಗಿದ್ದಾರೆ. ಅಲ್ಲದೆ ಧೂಳಿನ ಪ್ರಮಾಣ ಕೂಡ ಕಡಿಮೆಯಾಗಿದೆ.
ಹೌದು ರಾಯಚೂರಿನಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಇದರಿಂದಾಗಿ ಬಿಸಿಲಿನ ಶಾಕ ಹೆಚ್ಚಾಗಿದ್ದು ಮಾತ್ರವಲ್ಲದೆ ರಸ್ತೆಯಲ್ಲಿ ಧೂಳಿನ ಪ್ರಮಾಣ ಕೂಡ ಅಧಿಕವಾಗಿತ್ತು. ಕಳೆದ ತಿಂಗಳಿನಿಂದ ರಾಯಚೂರು ಜಿಲ್ಲೆಯಾದ್ಯಂತ ಹಲವೆಡೆ ಜನರಿಗೆ ಕುಡಿಯಲು ನೀರು ಕೂಡ ಸಿಗುತ್ತಿಲ್ಲ. ಸಾಲದಕ್ಕೆ ವಿದ್ಯುತ್ ಕಡಿವೂ ಇತ್ತೀಚೆಗೆ ಹೆಚ್ಚಾಗಿದೆ. ಆದರೆ ಇಂದು ಸುರಿದ ಮಳೆ ಈ ಎಲ್ಲಾ ಸಮಸ್ಯೆಗಳಿಗೆ ಕೊಂಚ ಪರಿಹಾರ ನೀಡಿದಂತಾಗಿದೆ.

ರಾಯಚೂರಿನಾದ್ಯಂತ ಬೆಳಗಿನ ಜಾವ 4 ಗಂಟೆಯಿಂದ ಮಳೆಯಾಗಿದೆ. ಮಾನ್ವಿ, ಮಸ್ಕಿ, ಹಟ್ಟಿ ಚಿನ್ನದ ಗಣಿ, ಲಿಂಗಸಗೂರು, ಸಿಂಧನೂರು ಸೇರಿದಂತೆ ಹಲವೆಡೆ ಸಾಧಾರಣ ಮಳೆಯಾಗಿದೆ. ಇದರಿಂದಾಗಿ ವಾತಾವರಣವೇ ಬದಲಾಗಿದೆ. ಕಳೆದ ದಿನ ರಾಯಚೂರಿನಾದ್ಯಂತ ಬಿಸಿಲಿನ ಶಾಕ ಅಧಿಕವಾಗಿತ್ತು. ನಿತ್ಯ ಬೆಳಗಿನ ಜಾವ ಕೊಂಚ ತಂಪಾಗಿರುವ ಅನುಭವ ಬಿಟ್ಟರೆ 8 ಗಂಟೆ ಹೊತ್ತಿಗೆ ಬಿಸಿಲ ಬಿಸಿ ಮೈ ತಾಗಲು ಶುರುವಾಗುತ್ತದೆ. ಸಂಜೆ ಸೂರ್ಯ ಮುಳುಗಿದರೂ ಕೂಡ ಬಿಸಿಲಿನ ಶಾಕ ಕಡಿಮೆಯಾಗಿರುವುದಿಲ್ಲ.
ರಾಯಚೂರಿನಲ್ಲಿ ಸೂರ್ಯನೇ ರಾಜ
ರಾಯಚೂರಿನಲ್ಲಿ ಬೇಸಿಗೆ, ಅತೀಬೇಸಿಗೆ, ಮಧ್ಯಮ ಬೇಸಿಗೆ ಕಾಲ ಮಾತ್ರ ಹೆಚ್ಚಾಗಿರುತ್ತದೆ. ಯಾಕೆಂದರೆ ಇಲ್ಲಿ ಮಳೆಗಾಲ, ಚಳಿಗಾಲದ ಅನುಭವ ಅಷ್ಟಾಗಿ ಆಗುವುದೇ ಇಲ್ಲ. ಹೀಗಾಗಿ ಇಲ್ಲಿನ ಜನ ಕೂಡ ಈ ವಾತಾವರಣಕ್ಕೆ ಹೊಂದಿಕೊಂಡುಬಿಟ್ಟಿದ್ದಾರೆ. ಇಲ್ಲಿ ಮಳೆಯಾಗುವುದು ತೀರಾ ಕಡಿಮೆ. ಒಂದು ವೇಳೆ ಆದರೂ ಕೂಡ ಅದು ಹೆಚ್ಚಿನ ಪ್ರಮಾಣದಲ್ಲಿ ಇರುವುದಿಲ್ಲ. ತುಂತುರು ಅಥವಾ ಸಾಧಾರಣ ಮಳೆಯಾದರೆ ಈ ಭಾಗದ ಜನರಿಗೆ ಅದು ದೊಡ್ಡ ಮಳೆ.

ಇನ್ನೂ ಬೇಸಿಗೆಯ ಬಿಸಿಲಿಗೆ ಜನ ಮಧ್ಯಾಹ್ನದ ಹೊತ್ತಲ್ಲಿ ಮಲಗುವುದಿರಲಿ ರಾತ್ರಿ ಹೊತ್ತು ನೆಮ್ಮದಿಯಾಗಿ ನಿದ್ದು ಮಾಡುವುದು ಕೂಡ ಕಷ್ಟ. ಮಧ್ಯಾಹ್ನ ಪಾತ್ರೆಯಲ್ಲಿ ತುಂಬಿಸಿ ಇಟ್ಟ ನೀರಿನ ಪ್ರಮಾಣ ಕೆಲ ಗಂಟೆಗಳಲ್ಲಿ ಆವಿಯಾಗಿ ಕಡಿಮೆಯಾಗಿರುತ್ತದೆ. ಅಷ್ಟೇ ಯಾಕೆ ಇತ್ತೀಚೆಗೆ ಕೆಲವರು ಬಿಸಿಲಿಗೆ ಹೆಂಚು ಇಟ್ಟು ಮೊಟ್ಟೆ ತಯಾರಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದು ರಾಯಚೂರಿನಲ್ಲಿ ಬಿಸಿಲಿನ ಪ್ರಮಾಣ ಎಷ್ಟಿದೆ ಎನ್ನುವುದಕ್ಕೆ ಸಾಕ್ಷಿ.
ರಾಯಚೂರಿನ ನಗರ ಪ್ರದೇಶದಲ್ಲಿ ಹೆಚ್ಚಾಗಿ ವಿದ್ಯುತ್ ಸಮಸ್ಯೆ ಇಲ್ಲ. ಆದರೆ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ. ಕೆಲ ಗ್ರಾಮಗಳಲ್ಲಿ ಸಂಜೆ ವಿದ್ಯುತ್ ಕಡಿತಗೊಂಡರೆ ಬೆಳಿಗ್ಗೆಗೆ ಕರೆಂಟ್ ಬರುತ್ತೆ. ಇನ್ನೂ ಕೆಲವೆಡೆ ಬೆಳಿಗ್ಗೆ ಹೋದರೆ ಸಂಜೆಗೆ ಕರೆಂಟ್ ಬರುತ್ತದೆ.
ರಾಯಚೂರಿನ ಹಲವು ಸಮಸ್ಯೆಗಳಿಗೆ ಮಳೆ ಮಾತ್ರ ಪರಿಹಾರ
ಮುಖ್ಯವಾಗಿ ನೀರು ಕೂಡ ವಾರಕ್ಕೆ ಒಮ್ಮೆ ಅಥವಾ ಎರಡು ಭಾರಿ ಪೂರೈಸಲಾಗುತ್ತದೆ. ಅಂದರೆ 3-4 ದಿನಕ್ಕೆ ಒಮ್ಮೆ ಕುಡಿಯೋ ನೀರು ಪೂರೈಸಲಾಗುತ್ತದೆ. ಕೆಲವೆಡೆ 5 ರಿಂದ 8 ದಿನಕ್ಕೊಮ್ಮೆ ಕುಡಿಯೋ ನೀರು ಪೈರೈಕೆಯಾಗುತ್ತದೆ. ಇನ್ನೂ ರಸ್ತೆ ಸಮಸ್ಯೆ ತಲತಲಾಂತರದಿಂದಲೂ ಇದೆ. ರಸ್ತೆಯಲ್ಲಿ ಬೃಹತ್ ಗಾತ್ರದ ಗುಂಡಿ ಬಿದ್ದು ವಾಹನ ಸವಾರರಿಗೆ ಅಪಘಾತಗಳಾಗಿರುವುದಿದೆ. ಎಷ್ಟೋ ಜನ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ ಇಲ್ಲಿನ ಧೂಳಿಗೆ ಅಸ್ತಮ, ಉಸಿರಾಟ ಹೀಗೆ ನಾನಾ ಸಮಸ್ಯೆಗಳು ಹೆಚ್ಚಾಗುತ್ತಿದ್ದ ಮಕ್ಕಳು ವಯಸ್ಸಾದವರು ಮನೆಯಿಂದ ಹೊರ ಬಾರದಂತಹ ಸ್ಥಿತಿ ಇದೆ.
ಇಷ್ಟೆಲ್ಲಾ ಸಮಸ್ಯೆಗಳು ಇದ್ದರೂ ಕೂಡ ದೇಶದಲ್ಲಿ ಚಿನ್ನವನ್ನು ಪೂರೈಸುವ ಏಕೈಕ ಪ್ರದೇಶ (ಹಟ್ಟಿ ಚಿನ್ನದ ಗಣಿ) ರಾಯಚೂರಿನಲ್ಲಿದೆ. ಅಲ್ಲದೆ ರಾಯಚೂರಿನಲ್ಲಿ ವಿದ್ಯುತ್ ಕೂಡ ಉತ್ಪಾದಿಸಿ ರಾಜ್ಯದೆಲ್ಲೆಡೆ ಪೂರೈಸಲಾಗುತ್ತದೆ. ನೀರಿನ ಸಮಸ್ಯೆ ಇದ್ದರೂ ಕೂಡ ಈ ಭಾಗದಲ್ಲಿ ಅಕ್ಕಿ ಬೆಳೆ ಬೆಳೆದು ರಾಜ್ಯದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಿಗೂ ಮಾರಾಟ ಮಾಡಲಾಗುತ್ತದೆ. ರಾಯಚೂರು ಪ್ರವಾಸಿ ತಾಣವೂ ಆಗಿದ್ದರೂ ಕೂಡ ಈವರೆಗೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗುತ್ತಲೇ ಇದೆ. ಹೀಗೆ ರಾಯಚೂರಿನಲ್ಲಿ ಸಮಸ್ಯೆಗಳ ಸರಮಾಲೆಯೇ ಇದ್ದು ಇದಕ್ಕೆಲ್ಲಾ ಜನಪ್ರತಿನಿಧಿಗಳಿಂದ ಪರಿಹಾರ ಸಿಗುತ್ತೋ ಇಲ್ವೋ ಗೊತ್ತಿಲ್ಲ ಆದರೆ ಮಳೆಯಿಂದ ಕೊಂಚ ಪರಿಹಾರ ಸಿಗುತ್ತದೆ ಎನ್ನುತ್ತಾರೆ ಜನ.












Click it and Unblock the Notifications