ಕಡಲೆ ಬೆಳೆಗೆ ಹಸಿರು ಹುಳು ಕಾಟ: ರೈತ ಕಂಗಾಲು
ರಾಯಚೂರು, ಡಿಸೆಂಬರ್ 27: ಜಿಲ್ಲೆಯ ರೈತರು ಒಂದಲ್ಲಾ ಒಂದು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಒಂದಡೆ ಸರ್ಕಾರದಿಂದ ಸಿಗದ ಬೆಂಬಲ ಬೆಲೆ ಇನ್ನೊಂದೆಡೆ ಪ್ರಾಕೃತಿಕ ವಿಕೋಪ ಜೊತೆಗೆ ಕೀಟ ಬಾಧೆ. ಈ ಎಲ್ಲಾ ಸಮಸ್ಯೆಗಳಿಂದ ರೈತರು ಹೈರಾಣಾಗಿ ಹೋಗಿದ್ದಾರೆ. ಇದೀಗ ಜಿಲ್ಲೆಯ ಕಡಲೆ ಬೆಳೆಗಾರರು ಕೂಡ ಕೀಟ ಬಾಧೆಯಿಂದ ಪರದಾಡುತ್ತಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಹಟ್ಟಿ, ಗುರುಗುಂಟಾ, ಕೋಠಾ, ಮೇದಿನಾಪುರ, ಮಾಚನೂರು, ಗೌಡೂರು, ನಿಲೋಗಲ್, ಆನ್ವರಿ, ಯಲಗಟ್ಟಾ ಗ್ರಾಮಗಳಲ್ಲಿ ಅತಿ ಹೆಚ್ಚಾಗಿ ಕಡಲೆ ಬೆಳೆಯಲಾಗಿದೆ. ಆದರೆ ಕಾಳು ಕಟ್ಟುವ ಮೊದಲೇ ಹಸಿರು ಹುಳು ಕಾಯಿಯನ್ನು ತಿಂದು ಹಾಕುತ್ತಿದ್ದು, ರೈತರಿಗೆ ತಲೆನೋವಾಗಿ ಪರಿಣಮಿಸಿದೆ. ಈ ಬಗ್ಗೆ ರೋಡಲಬಂಡ ಗ್ರಾಮದ ರೈತರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಹಸಿರು ಹುಳು ಕಾಯಿಯನ್ನು ತಿಂದು ಹಾಕುತ್ತಿದೆ. ಆದರೆ ಕೀಟ ಕಾಟದಿಂದ ಮುಕ್ತಿ ಪಡೆಯಲು, ಕೀಟ ಸಮಸ್ಯೆ ಬಗೆಹರಿಸಲು ರೈತ ಸಂಪರ್ಕ ಕೇಂದ್ರದಿಂದ ರೈತರಿಗೆ ಯಾವುದೇ ಮಾಹಿತಿ ಒದಗಿಸುತ್ತಿಲ್ಲ. ಹಸಿರು ಹುಳುವನ್ನು ಹತೋಟಿಗೆ ತರಲು ಯಾವ ಔಷಧ ಸಿಂಪಡಣೆ ಮಾಡಬೇಕು ಎಂಬುದು ಗೊಂದಲ ಉಂಟಾಗಿದ್ದು, ಸಮಸ್ಯೆಯನ್ನು ಆಲಿಸಬೇಕಾದ ರೈತ ಸಂಕರ್ಪ ಕೇಂದ್ರದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎನ್ನುವುದು ರೈತರ ಆರೋಪವಾಗಿದೆ.

ಗುರುಗುಂಟಾ, ಪೈದೊಡ್ಡಿ, ಯರಜಂತಿ, ಪೂಲಭಾವಿ, ಟಣಮಕಲ್ಲು, ಗದಗಿ ಸೇರಿದಂತೆ ಇತರ ಗ್ರಾಮಗಳಲ್ಲಿ ನೀರಾವರಿ ಭೂಮಿ ಇರುವ ರೈತರು ಶೇಂಗಾ ಬೆಳೆಯನ್ನು ಬೆಳೆದಿದ್ದಾರೆ. ಆದರೆ, ಹೂ ಬಿಡುವ ಮೊದಲೇ ಎಲೆಗಳಿಗೆ ಕರಿ ಬಣ್ಣದ ಉದ್ದನೆಯ ಡೊಂಕು ಹುಳು ಕಾಟ ಹೆಚ್ಚಾಗಿದೆ. ಗಿಡದ ಎಲೆಯನ್ನು ತಿಂದು ಹಾಕುತ್ತಿದ್ದು, ಇದರಿಂದ ಬೆಳೆಗಳು ಕುಂಠಿತವಾಗಿವೆ ಎಂದು ರೈತರು ತಿಳಿಸಿದರು.
ಇನ್ನು ಜಿಲ್ಲೆಯ ಟೊಮೆಟೋ ಬೆಳಗಾರರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯ ದೇವದುರ್ಗ ತಾಲೂಕಿನ ವ್ಯಾಪ್ತಿಯಲ್ಲಿ ಕಳೆದ ತಿಂಗಳಿನಿಂದ ಟೊಮೆಟೋ ಬೆಲೆಯಲ್ಲಿ ಭಾರಿ ಕುಸಿತ ಆಗಿದ್ದು, ಟೊಮ್ಯಾಟೋ ಬೆಳೆದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಮಾರುಕಟ್ಟೆಯಲ್ಲಿ ಟೊಮೆಟೋ ಬೆಲೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಇದರಿಂದ ಟೊಮೆಟೋ ಬೆಳೆಯಲು ಮಾಡಿದ ಖರ್ಚು ಸಹ ಬರುತ್ತಿಲ್ಲ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಪ್ರತಿ 25 ಕೆ.ಜಿ.ಯ ಟೊಮೆಟೋ ಕ್ಯಾನ್ ಕೇವಲ 70 ರೂಪಾಯಿಗೆ ಮಾರಾಟ ಆಗುತ್ತಿದೆ. ಇದರಿಂದ ಟೊಮೆಟೋ ತೆಗೆಯಲು ಹಾಗೂ ಸಾಗಿಸಲು ತಗಲುವ ಖರ್ಚು, ವೆಚ್ಚ ಸಹ ಬರುತ್ತಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಜಿಲ್ಲೆಯ ರೈತರ ಸಮಸ್ಯೆಗೆ ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸಬೇಕಿದೆ.












Click it and Unblock the Notifications