ಲೋಕಸಭೆ ಚುನಾವಣೆ: ರಾಯಚೂರಿನಲ್ಲಿ ಕಾಂಗ್ರೆಸ್‌ ಪಕ್ಷ ಸಂಘಟನೆ, ಕಮಲ ನಾಯಕರಿಗೆ ಕೈ ಗಾಳ?

ರಾಯಚೂರು, ಆಗಸ್ಟ್‌ 23: ಲೋಕಸಭಾ ಚುನಾವಣೆ ಒಂದು ವರ್ಷದ ಮುಂಚೆಯೇ ಜಿಲ್ಲೆಯಲ್ಲಿ ಆಪರೇಷನ್ ಹಸ್ತ ವಿಚಾರದ ಚರ್ಚೆಗಳು ಜೋರಾಗಿ ನಡೆದಿದ್ದು, ರಾಜಕೀಯ ಮುಖಂಡರು ಯಾವಾಗ, ಯಾವ ಪಕ್ಷಗಳಿಗೆ ಪಕ್ಷಾಂತರ ಮಾಡುತ್ತಾರೆ ಎನ್ನುವ ಕುತೂಹಲ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಕಳೆದರೆರಡು ವರ್ಷಗಳಿಂದ ಜಿಲ್ಲಾ ಕಾಂಗ್ರೆಸ್‌ನಲ್ಲಿ ನಿರಂತರ ಗುಂಪುಗಾರಿಕೆ , ಆಂತರಿಕ ಸಂಘರ್ಷ , ಪರಸ್ಪರ ಕಾಲೆಳೆಯುವ ವಾತಾವರಣವಿದೆ. ಅಲ್ಲದೇ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಅಧ್ಯಕ್ಷರಿಲ್ಲದೇ ಬಲವರ್ಧನೆಗೊಳಿಸುವ ಕೆಲಸದ ಮೇಲೂ ಪರಿಣಾಮ ಬೀರಿದೆ. ಇದೀಗ ಕಾಂಗ್ರೆಸ್‌ನಲ್ಲಿ ಒಬ್ಬರು ಸಚಿವರು, ನಾಲ್ವರು ಶಾಸಕರು, ಮತ್ತೊಬ್ಬರು ವಿಧಾನ ಪರಿಷತ್ ಸದಸ್ಯರಿದ್ದಾರೆ. ಇವರೆಲ್ಲರ ನಡುವೆ ಭಿನ್ನಾಭಿಪ್ರಾಯವಿದ್ದರೂ ಕೂಡ ಸಂಘಟಿತರಾಗಿ ಬಿಜೆಪಿ ಶಾಸಕರು, ಮುಖಂಡರನ್ನು ಲೋಕಸಭೆ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್‌ಗೆ ಕರೆತರಲು ಒಳಗೊಳಗೆ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

upcoming-lok-sabha-election

ಮಾಜಿ ಸಂಸದ ಬಿ.ವಿ.ನಾಯಕ ಅವರು ಸಂಸದ ಡಿ.ಕೆ.ಸುರೇಶ್ ಅವರನ್ನು ಇತ್ತೀಚೆಗೆ ಭೇಟಿ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಡಿ.ಕೆ.ಸುರೇಶ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರುವ ಬಗ್ಗೆ ಚರ್ಚೆಗಳು ನಡೆದಿರುವುದರಿಂದ ಜಿಲ್ಲೆಯಲ್ಲಿ ಆಪರೇಷನ್ ಹಸ್ತಕ್ಕೆ ಪುಷ್ಠಿ ನೀಡಿದೆ. ಆದರೆ ಮಾಜಿ ಸಂಸದ ಬಿ.ವಿ.ನಾಯಕ ಅವರು ನನಗೆ ಕಾಂಗ್ರೆಸ್ ನಾಯಕರಿಂದ ಯಾವುದೇ ಆಹ್ವಾನ ಬಂದಿಲ್ಲ. ಊಹಾಪೋಹಗಳು ಎಂದು ಹೇಳಿದ್ದಾರೆ. ಲೋಕಸಭೆ ಚುನಾವಣೆ ಹೊತ್ತಿಗೆ ಕರೆ ತರುವ ಸಾಧ್ಯತೆ ಇದೆ. ಅದೇ ರೀತಿ ಜಿಲ್ಲೆಯ ಬಿಜೆಪಿಯ ಶಾಸಕರು, ಮುಖಂಡರನ್ನು ಸೆಳೆಯುವ ಪ್ರಯತ್ನಗಳು ನಡೆದಿವೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.

ಕಳೆದ ವಿಧಾನಸಭೆ ಚುನಾವಣೆಯಲ್ಲೂ ಹಾಲಿ ಶಾಸಕರುಗಳಿಗೆ ಟಿಕೆಟ್ ತಪ್ಪಿಸುವ ಷಡ್ಯಂತ್ರ , ಕಾಂಗ್ರೆಸ್ ಪಕ್ಷದವರೇ ತನ್ನ ಪಕ್ಷದ ಅಭ್ಯರ್ಥಿ ವಿರುದ್ಧ ಮತ ಹಾಕಿಸುವ ಪ್ರಯತ್ನ ನಡೆಸಿರುವುದು, ಸ್ವಪಕ್ಷದವರನ್ನು ಸೋಲಿಸಲು ಹುನ್ನಾರ ಮಾಡಿದ್ದು, ಪಕ್ಷದ ಅಭ್ಯರ್ಥಿಗಳ ಪ್ರಚಾರದಲ್ಲಿ ಪಾಲ್ಗೊಳ್ಳದೆ ದೂರ ಸರಿದಿದ್ದು, ಸಚಿವ ಸ್ಥಾನ ನೀಡುವಂತೆ ಶಾಸಕರ ಪರವಾಗಿ ಲಾಬಿ ನಡೆಸಿದ್ದು, ಸಚಿವರಾದವರಿಗೆ ಪಕ್ಷದ ಅನುಮತಿಯಿಲ್ಲದೆಯೇ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಿದ್ದು, ರಾಯಚೂರು ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯ ಇದೆ. ಒಗ್ಗಟ್ಟಿಲ್ಲ ಎನ್ನುವುದನ್ನು ಬಹಿರಂಗವಾಗಿತ್ತು.

upcoming-lok-sabha-election

ಇದನ್ನು ಸರಿಪಡಿಸಲು ಲೋಕಸಭೆ ಚುನಾವಣೆಗೆ ಸಮರ್ಥ ಅಭ್ಯರ್ಥಿ ನಿಲ್ಲಿಸಿ ಗೆಲ್ಲಿಸುವ ಸಲುವಾಗಿ ಜಿಲ್ಲೆಯ ಬಿಜೆಪಿ ಹಾಲಿ ಮತ್ತು ಮಾಜಿ ಶಾಸಕರನ್ನು ಕಾಂಗ್ರೆಸ್‌ಗೆ ಕರೆ ತರುವ ಬಗ್ಗೆ ಗಂಭೀರ ಚರ್ಚೆಗಳು ಜೋರಾಗಿ ಸಾಗಿವೆ.

ವಿಧಾನಸಭೆ ಚುನಾವಣೆಗೂ ಮುನ್ನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಮಾಜಿ ಸಂಸದ ಬಿ.ವಿ.ನಾಯಕ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಮಾನ್ವಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದಾಗ ಪಕ್ಷದಿಂದ ಅನ್ಯಾಯವಾಗಿಲ್ಲ. ಉತ್ತಮ ಸ್ಥಾನ ನೀಡಿದೆ. ಆದರೆ ಕೆಲ ಜಿಲ್ಲಾ ಕಾಂಗ್ರೆಸ್ ಮುಖಂಡರು ಪಾಳೆಗಾರರಂತೆ ವರ್ತಿಸಿದ್ದರಿಂದ ಬೇಸರಗೊಂಡು ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಚುನಾವಣೆಗೆ ಸ್ಪರ್ಧಿಸಿದ್ದೆ ಅಷ್ಟೇ ಎಂದು ಮಾಜಿ ಸಂಸದ ಬಿ.ವಿ.ನಾಯಕ ಹೇಳಿಕೊಳ್ಳುತ್ತಿದ್ದಾರೆ.

ಕಾಂಗ್ರೆಸ್ ಪಕ್ಷ ನನಗೆ ಅನ್ಯಾಯ ಮಾಡಿಲ್ಲ. ಹಿಂದೆ ಉನ್ನತ ಸ್ಥಾನಮಾನ ನೀಡಿತ್ತು. ಅಲ್ಲಿನ ರಾಜ್ಯ ನಾಯಕರ ಬೆಂಬಲವಿತ್ತು ಎಂದು ಬಿ.ವಿ.ನಾಯಕ ಸಾರ್ವಜನಿಕ ವಲಯದಲ್ಲಿ ಹೇಳಿಕೊಳ್ಳುತ್ತಿರುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಇವರಿಂದಲೇ ಆಪರೇಷನ್ ಹಸ್ತ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಸಿದ್ಧಾಂತ ಒಪ್ಪಿಕೊಂಡು ಯಾರೇ ಆಗಮಿಸಿದರೂ ಪಕ್ಷ ಸ್ವಾಗತಿಸಲಿದೆ. ಜಿಲ್ಲೆಯ ವಿವಿಧ ರಾಜಕೀಯ ಪಕ್ಷದ ಮುಖಂಡರು ಈಗಾಗಲೇ ಪಕ್ಷದ ರಾಜ್ಯ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ. ಯಾರಿದ್ದಾರೆಂದು ಬಹಿರಂಗವಾಗಿ ಹೇಳಲಾಗುವುದಿಲ್ಲ. ಪಕ್ಷ ಸೇರ್ಪಡೆಯಾಗುವವರ ಹೆಸರು ಬಹಿರಂಗಪಡಿಸಿದರೆ ಅವರಿಗೆ ತೀರ್ಮಾನ ತೆಗೆದುಕೊಳ್ಳಲು ಗೊಂದಲವಾಗಲಿದೆ ಎಂದು ಸಣ್ಣ ನೀರಾವರಿ , ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ಎನ್.ಎಸ್.ಬೋಸರಾಜು ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕರಿಂದ ಯಾವುದೇ ಆಹ್ವಾನ ಬಂದಿಲ್ಲ. ವದಂತಿಗಳು ಎದ್ದಿದ್ದು ಎಲ್ಲದಕ್ಕೂ ಉತ್ತರ ಕೊಡಲು ಸಾಧ್ಯವಿಲ್ಲ. ರಾಜಕೀಯದಲ್ಲಿ ಚುನಾವಣೆ ಬಂದಾಗ ಧೃವೀಕರಣ ಸಾಮಾನ್ಯ. ಸದ್ಯ ಯಾವುದೇ ಪ್ರಸ್ತಾಪಗಳಿಲ್ಲ ಎಂದು ಮಾಜಿ ಸಂಸದ ಬಿ.ವಿ.ನಾಯಕ ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+