ನನ್ನ ವಿರುದ್ಧ ದೆಹಲಿಗೆ ದೂರು ಹೋಗಿದೆ ಅಂದ್ರೆ ಅಷ್ಟು ಎತ್ತರಕ್ಕೆ ಬೆಳೆದಿದ್ದೇನೆ ಎಂದರ್ಥ-ಬಿ.ವೈ ವಿಜಯೇಂದ್ರ
ನನ್ನ ವಿರುದ್ಧ ಯಾರು ದೂರು ಕೊಟ್ಟಿದ್ದಾರೋ ಗೊತ್ತಿಲ್ಲ. ದೆಹಲಿ ನಾಯಕರಿಗೆ ದೂರು ಹೋಗಿದೆ ಅಂತಾದರೇ, ಆ ವ್ಯಕ್ತಿ ಅಷ್ಟು ಎತ್ತರಕ್ಕೆ ಬೆಳೆದಿದ್ದಾನೆ ಎಂದರ್ಥ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ರಾಯಚೂರು, ಮಾರ್ಚ್ 21: ನನ್ನ ವಿರುದ್ಧ ದೆಹಲಿ ನಾಯಕರಿಗೆ ದೂರು ಹೋಗಿದೆ ಎಂದರೆ ನಾನು ಅಷ್ಟು ಎತ್ತರಕ್ಕೆ ಬೆಳೆದಿದ್ದೇನೆ ಎಂದರ್ಥ. ನಮ್ಮದು ರಾಷ್ಟ್ರೀಯ ಪಕ್ಷ ಯಾರೋ ಅಪ್ಪನ ಮಗ, ಅಣ್ಣನ ಮಗಳ ಅಂತ ಯಾರಿಗೂ ಟಿಕೆಟ್ ತೀರ್ಮಾನ ಮಾಡಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕೆಲ ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮದು ರಾಷ್ಟ್ರೀಯ ಪಕ್ಷವಾಗಿರುವುದರಿಂದ ಯಾರಿಗೆ ಟಿಕೆಟ್ ನೀಡಬೇಕು ಎನ್ನುವುದನ್ನು ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ. ಯಾರೋ ಅಪ್ಪನ ಮಗ, ಅಣ್ಣನ ಮಗ ಎಂದು ಯಾರಿಗೂ ವಿಧಾನಸಭಾ ಟಿಕೆಟ್ ತೀರ್ಮಾನ ಮಾಡಲ್ಲ ಎಂದರು.

ಅರ್ಹತೆಯ ಆಧಾರದಲ್ಲಿ ಯಾರೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೋ ಅಂಥವರಿಗೆ ಟಿಕೆಟ್ ನೀಡಿದರೇ ಪಕ್ಷಕ್ಕೆ ಒಳ್ಳೆಯದು ಆಗುತ್ತದೆ ಎನ್ನುವುದು ಹಿರಿಯರಿಗೆ ಗೊತ್ತಿದೆ. ಕ್ಷೇತ್ರದಲ್ಲಿ ಕಾರ್ಯಕರ್ತರು ಒಪ್ಪಿಕೊಳ್ತಾರಾ, ಗೆಲುವಿನ ಸಂಭಾವ್ಯತೆ ಸೇರಿ ವಿವಿಧ ಮಾನದಂಡಗಳ ಆಧಾರದಲ್ಲಿ ಹಿರಿಯ ನಾಯಕರು ಟಿಕೆಟ್ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ತಾರೆ ಎಂದು ಹೇಳಿದರು.
ಪಾಪ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಹುಡುಕಿ ಅಲೆಯುವಂತಹ ಸ್ಥಿತಿ ಬರಬಾರದಿತ್ತು. ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದಿಕೊಂಡಿರುವ ಮಹಾನ್ ನಾಯಕರಿಗೆ ಇಂತಹ ಸ್ಥಿತಿ ನಿರ್ಮಾಣ ಆಗಿರುವುದು ಹಾಸ್ಯಾಸ್ಪದ ಎಂದು ಸಿದ್ದರಾಮಯ್ಯ ಕ್ಷೇತ್ರ ಶೋಧದ ಬಗ್ಗೆ ಬಿ.ವೈ ವಿಜಯೇಂದ್ರ ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಮತ್ತೆ ವರುಣಾದಲ್ಲಿ ಸ್ಪರ್ಧಿಸಿದರೇ ಅಲ್ಲಿಂದಲೇ ವಿಜಯೇಂದ್ರ ಕಣಕ್ಕಿಳಿಯುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ನಮ್ಮ ಶಿಕಾರಿಪುರ ಕಾರ್ಯಕರ್ತರ ಅಭಿಪ್ರಾಯದ ಮೇರೆಗೆ ಯಡಿಯೂರಪ್ಪನವರು ನನ್ನ ಹೆಸರು ಘೋಷಣೆ ಮಾಡಿ ಆಗಿದೆ. ನಾನು ಈಗಾಗಲೇ ಶಿಕಾರಿಪುರದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಂತಿಮವಾಗಿ ನಮ್ಮ ಕೇಂದ್ರದ ನಾಯಕರು ನಾನು ಎಲ್ಲಿಂದ ಸ್ಪರ್ಧಿಸಬೇಕು ಎನ್ನುವುದನ್ನು ತೀರ್ಮಾನ ಮಾಡಲಿದ್ದಾರೆ ಎಂದು ಹೇಳಿದರು.

ವಸತಿ ಸಚಿವ ವಿ.ಸೋಮಣ್ಣ ಹೈಕಮಾಂಡ್‌ಗೆ ದೂರು ನೀಡಿರುವ ಸುದ್ದಿ ಹರಿದಾಡುತ್ತಿದ್ದ ಬಗ್ಗೆ ವಿಜಯೇಂದ್ರ ಪ್ರತಿಕ್ರಿಯಿಸಿದ್ದು, ನನ್ನ ವಿರುದ್ಧ ಯಾರು ದೂರು ಕೊಟ್ಟಿದ್ದಾರೋ ಗೊತ್ತಿಲ್ಲ. ದೆಹಲಿ ನಾಯಕರಿಗೆ ದೂರು ಹೋಗಿದೆ ಅಂತಾದರೇ, ಆ ವ್ಯಕ್ತಿ ಅಷ್ಟು ಎತ್ತರಕ್ಕೆ ಬೆಳೆದಿದ್ದಾನೆ ಎಂದರ್ತ. ಸೋಮಣ್ಣ ಹಿರಿಯ ನಾಯಕರಿದ್ದಾರೆ. ಅವರೇನೇ ಮಾತನಾಡಿದರೂ ಆಶೀರ್ವಾದ ಎಂದು ಸ್ವೀಕರಿಸುತ್ತೇನೆ. ಅದಕ್ಕೇನೂ ಬೇಸರವಿಲ್ಲ ಎಂದು ಹೇಳಿದರು.
ಕಾಂಗ್ರೆಸ್-ಜೆಡಿಎಸ್ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿವೆ
ಇನ್ನು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಸಮಾವೇಶದಲ್ಲಿ ಮಾತನಾಡಿದ ವಿಜಯೇಂದ್ರ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಅಧಿಕಾರಕ್ಕೆ ಬರುವ ಕನಸು ಕಾಣುತ್ತಿವೆ. ಜೆಡಿಎಸ್ ಸದ್ಯಕ್ಕೆ ಅತಂತ್ರ ಸ್ಥಿತಿಯಲ್ಲಿದೆ. ರಾಜ್ಯ ಬಜೆಟ್ ಮಂಡನೆ ನಂತರ ಕಾಂಗ್ರೆಸ್ ನಾಯಕರು ಕಿವಿಗೆ ಹೂವು ಇಟ್ಟುಕೊಂಡು ಸರ್ಕಾರವನ್ನು ಅಣಕು ಮಾಡಿದ್ದಾರೆ. ಆದರೆ, ರಾಜ್ಯದ ಜನರೇ ಕಾಂಗ್ರೆಸ್‌ನವರಿಗೆ ಕಿವಿಗೆ ಹೂವು ಇಟ್ಟು ಕಳಿಸುತ್ತಾರೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಮಾಡಿರುವ ಅಭಿವೃದ್ಧಿಯನ್ನು ಜನರು ಬೆಂಬಲಿಸುತ್ತಿದ್ದಾರೆ. ದೇಶದಲ್ಲಿ 2014ರಿಂದ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಅಭಿವೃದ್ಧಿಗಳಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ವಿರೋಧ ಪಕ್ಷಗಳು ಅನಾವಶ್ಯಕವಾಗಿ ಮೋದಿಯವರ ಬಗ್ಗೆ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

ದೇಶದಲ್ಲಿ 65 ವರ್ಷ ಅಧಿಕಾರ ನಡೆಸಿ ಕಾಂಗ್ರೆಸ್ ಪಕ್ಷದವರು ಯಾವುದೇ ಅಭಿವೃದ್ಧಿ ಮಾಡಿಲ್ಲ. ಅವರು ಕೇವಲ ಭಾಷಣಕ್ಕೆ ಸೀಮಿತವಾಗಿದ್ದಾರೆ. ಭ್ರಷ್ಟಾಚಾರ ರಹಿತ ಸರ್ಕಾರ ನೀಡಿದ ಕೀರ್ತಿ ಬಿಜೆಪಿ ಸರ್ಕಾರದ್ದಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಪ್ರಜ್ಞಾವಂತ ಜನರು ತಕ್ಕಪಾಠ ಕಲಿಸಲಿದ್ದಾರೆ ಎಂದು ಹೇಳಿದರು.












Click it and Unblock the Notifications