ಹೊಸ ವರ್ಷಾಚರಣೆಗೆ ಕೋಟೆಗೆ ದೌಡಾಯಿಸಿದ ಪ್ರವಾಸಿಗರು
ಚಿತ್ರದುರ್ಗ, ಜನವರಿ 01: ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ಚಿತ್ರದುರ್ಗದ ಕೋಟೆಗೆ ಪ್ರವಾಸಿಗರ ದಂಡೇ ಹರಿದು ಬಂದಿತ್ತು. ಹೊಸ ವರ್ಷದ ಹಿನ್ನೆಲೆಯಲ್ಲಿ ಕೋಟೆಗೆ ಕೇಕ್ ನೊಂದಿಗೆ ವಿವಿಧ ಜಿಲ್ಲೆಗಳಿಂದ ಜನ ಸಾಗರ ಹರಿದು ಬಂದಿತ್ತು.
ಕೋಟೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಜನರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಾಚರಣೆ ಮಾಡುವ ದೃಶ್ಯ ಕಂಡುಬಂದಿತು. ಕೋಟೆಯ ಅಕ್ಕ ತಂಗಿ ಹೊಂಡ, ಗೋಪಾಲಸ್ವಾಮಿ ದೇವಸ್ಥಾನ, ಓಬ್ಬವನ ಕಿಂಡಿ, ಉಯ್ಯಾಲೆ ಕಂಬ ಹಾಗೂ ಚಂದ್ರವಳ್ಳಿ, ಮುರುಘಾಮಠ ಮತ್ತಿತರ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚು ಕಂಡುಬಂದಿತು.
ಪ್ರವಾಸಿಗರ ಸಂಖ್ಯೆ ಹೆಚ್ಚಳದಿಂದ ಟಿಕೆಟ್ ಪಡೆದು ಕೋಟೆ ಪ್ರವೇಶಿಸಲು ಹರಸಹಾಸ ಪಡಬೇಕಾಯಿತು. ಮುರುಘಾ ಮಠದಲ್ಲಿನ ಸುಂದರ ಉದ್ಯಾನದಲ್ಲಿ ಜನರು ಸೆಲ್ಫೀ ತೆಗೆದುಕೊಳ್ಳುತ್ತಿದ್ದ ದೃಶ್ಯ ಕಂಡುಬಂದಿತು. ನಗರದ ಹೋಟೆಲ್ ಗಳಲ್ಲಿ ಜನಜಂಗುಳಿ ಹೆಚ್ಚಿತ್ತು.
ವಿವಿ ಸಾಗರ ನೋಡಲು ಬಂದ ಜನ: ಚಿತ್ರದುರ್ಗ ಜಿಲ್ಲೆಯ ಜೀವನಾಡಿ ಹಿರಿಯೂರಿನ ವಿವಿ ಸಾಗರವನ್ನು ನೋಡಲು 5 ಸಾವಿರಕ್ಕೂ ಹೆಚ್ಚಿನ ಪ್ರವಾಸಿಗರು ಬಂದಿದ್ದರು. ಇತ್ತಿಚೀನ ವರ್ಷಗಳಲ್ಲಿ ನೀರಿಲ್ಲದೆ ವಿವಿ ಸಾಗರ ಬತ್ತಿ ಹೋಗಿದ್ದರಿಂದ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿತ್ತು.

ಒಂಬತ್ತು ವರ್ಷಗಳ ನಂತರ ನೂರು ಅಡಿ ದಾಟಿದ ಮಾರಿಕಣಿವೆ ಜಲಾಶಯ ಈಗ ಪ್ರವಾಸಿಗರನ್ನು ಕೈಬೀಸಿ ಕರೆದಿದೆ. ಚಿತ್ರದುರ್ಗ, ತುಮಕೂರು, ದಾವಣಗೆರೆ, ಬಳ್ಳಾರಿ, ಹಾಸನ ಮತ್ತಿತರ ಕಡೆಗಳಿಂದ ಪ್ರವಾಸಿಗರು ವಿವಿ ಸಾಗರವನ್ನು ನೋಡಲು ಆಗಮಿಸಿದ್ದರು. ಜಲಾಶಯದ ಬಳಿ ಇರುವ ಕಣಿವೆ ಮಾರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದರಿಂದ ದೇವಸ್ಥಾನದಲ್ಲೂ ಭಕ್ತರ ಸಂಖ್ಯೆ ಕಂಡು ಬಂದಿತ್ತು.












Click it and Unblock the Notifications