ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳೊಂದಿಗೆ ರಾಹುಲ್ ಮಹತ್ವದ ಸಭೆ
Recommended Video

ನವದೆಹಲಿ, ಡಿಸೆಂಬರ್ 13: ಛತ್ತೀಸ್ ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳ ಜೊತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು(ಡಿ.13) ಮಹತ್ವದ ಸಭೆ ನಡೆಸಲಿದ್ದಾರೆ.
ನವದೆಹಲಿಯಲ್ಲಿ ಸಭೆ ನಡೆಯಲಿದ್ದು, ಗುರುವಾರ ಸಂಜೆಯ ಒಳಗೆ ಮೂರು ರಾಜ್ಯಗಳ ಮುಖ್ಯಮಂತ್ರಿ ಅಭ್ಯರ್ಥಿಗಳು ಯಾರೆಂಬ ಕುರಿತು ಅಂತಿಮ ನಿರ್ಣಯ ಹೊರಬೀಳಲಿದೆ.
ಮಧ್ಯಪ್ರದೇಶದಲ್ಲಿ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಕಮಲ್ ನಾಥ್ ನಡುವಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಬಿರುಸಿನ ಪೈಪೋಟಿ ನಡೆಯುತ್ತಿದೆ.

ರಾಜಸ್ಥಾನದಲ್ಲಿ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್ ನಡುವೆ ಸಿಎಂ ಹುದ್ದೆಗಾಗಿ ಸ್ಪರ್ಧೆ ನಡೆಯುತ್ತಿದೆ.
ಛತ್ತೀಸ್ ಗಢದಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಭುಪೇಶ್ ಬಾಘೇಲ್ ಮತ್ತು ಪಕ್ಷದ ಮುಖಂಡ ಟಿ ಎಸ್ ಸಿಘ್ದಿಯೋ ನಡುವೆ ಪೈಪೋಟಿ ಎದ್ದಿದೆ.
ಇರುವ ಮೂರು ರಾಜ್ಯಗಳಿಗೆ ಆರು ಜನ ಮುಖ್ಯಮಂತ್ರಿ ಹುದ್ದೆಗಾಗಿ ಪೈಪೋಟಿ ನಡೆಸುತ್ತಿದ್ದು, ಅಂತಿಮ ನಿರ್ಣಯ ರಾಹುಲ್ ಗಾಂಧಿ ಅವರಿಗೆ ಬಿಟ್ಟಿದ್ದು ಎನ್ನಲಾಗಿದೆ.
ಆದರೆ ರಾಹುಲ್ ಗಾಂಧಿ ಅವರು ಈಗಾಗಲೇ ಈ ಮೂರೂ ರಾಜ್ಯಗಳ ಸುಮಾರು 7.3 ಲಕ್ಷ ಕಾಂಗ್ರೆಸ್ ಕಾರ್ಯಕರ್ತರಿಗೆ ವಾಯ್ಸ್ ಮೆಸೇಜ್ ಕಳಿಸಿದ್ದು, ಕಾರ್ಯಕರ್ತರೇ ಮುಖ್ಯಮಂತ್ರಿ ಹುದ್ದೆಗೆ ಹೆಸರು ಸೂಚಿಸುವಂತೆ ಮನವಿ ಮಾಡಿದ್ದಾರೆ. ಈ ಆಯ್ಕೆ ಗೌಪ್ಯವಾಗಿರಲಿದ್ದು, ಕಾರ್ಯಕರ್ತರ ಹೆಸರನ್ನು ಎಲ್ಲಿಯೂ ಬಹಿರಂಗ ಪಡಿಸುವುದಿಲ್ಲ ಎಂಬ ಅಭಯವನ್ನೂ ರಾಹುಲ್ ಗಾಂಧಿ ನೀಡಿದ್ದಾರೆ.
ಮಧ್ಯಪ್ರದೇಶದ 230 ಕ್ಷೇತ್ರಗಳಲ್ಲಿ 114 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಇತರರೊಂದಿಗೆ ಸೇರಿ ಸರ್ಕಾರ ರಚಿಸುತ್ತಿದ್ದರೆ, ರಾಜಸ್ಥಾನದಲ್ಲೂ 99(200) ಕ್ಷೇತ್ರಗಳಲ್ಲಿ ಗೆದ್ದು ಸರ್ಕಾರ ರಚಿಸುತ್ತಿದೆ. ಛತ್ತೀಸ್ ಗಢದ 90 ಕ್ಷೇತ್ರಗಳಲ್ಲಿ 68 ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದಿದೆ. ಇದರೊಟ್ಟಿಗೆ ತೆಲಂಗಾಣ ಮತ್ತು ಮಿಜೋರಾಂ ನಲ್ಲೂ ವಿಧಾನಸಭಾ ಚುನಾವಣೆ ನಡೆದಿತ್ತು. ಎಲ್ಲಾ ಐದು ರಾಜ್ಯಗಳ ಚುನಾವಣೆ ಫಲಿತಾಂಶ ಡಿಸೆಂಬರ್ 11 ರಂದು ಹೊರಬಿದ್ದಿತ್ತು.












Click it and Unblock the Notifications