ಇವರಿಬ್ಬರೂ ಮೋದಿ ಪ್ರಮಾಣಕ್ಕೆ ಹಾಜರಾಗ್ತಾರಾ?
ನವದೆಹಲಿ, ಮೇ 23-ಗುಜರಾತಿನ ಮಾಜಿ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಸಂಜೆ 6 ಗಂಟೆಗೆ ದೇಶದ 15ನೇ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
D-day ಸೋಮವಾರಕ್ಕೆ ತಯಾರಿಯೂ ಭರದಿಂದ ನಡೆದಿದೆ. ಈ ಮಧ್ಯೆ ತಡವಾಗಿಯಾದರೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನಿಯೋಜಿತ ಪ್ರಧಾನಿ ನರೇಂದ್ರ ಮೋದಿಗೆ ಶುಭ ಹಾರೈಸಿದ್ದಾರೆ. ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟವು ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ, ಸರಕಾರ ರಚಿಸುವಂತೆ ಮೋದಿ ನೇತೃತ್ವದ ಬಿಜೆಪಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಧಿಕೃತ ಆಹ್ವಾನ ನೀಡಿದ ಮೇಲೆ ಮೇ 20ರಂದು ಮೋದಿಗೆ ಸೋನಿಯಾ ಪತ್ರ ಬರೆದಿದ್ದಾರೆ.

ಎನ್ಡಿಎ ಮೈತ್ರಿಕೂಟವು ಸರ್ಕಾರ ರಚಿಸುತ್ತಿರುವುದಕ್ಕೆ ಅಭಿನಂದಿಸಿದ್ದಾರೆ. ಆದರೆ ಚುನಾವಣಾ ಫಲಿತಾಂಶದ ದಿನದಂದೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಅವರುಗಳು ಮೋದಿಗೆ ಶುಭ ಹಾರೈಸದೆ ಇದ್ದ ಕ್ರಮಕ್ಕೆ ಭಾರಿ ಟೀಕೆಗಳು ಕೇಳಿಬಂದಿದ್ದವು.
ಆದರೆ ಈಗ ಕಾಂಗ್ರೆಸ್ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರು ಸೋಮವಾರಕ್ಕೆ ನಿಗದಿಯಾಗಿರುವ ಮೋದಿ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾರಾ? ಎಂಬುದು ಚರ್ಚೆಯ ವಿಷಯವಾಗಿದೆ. ಖುದ್ದಾಗಿ ಅವರಿಬ್ಬರಿಗೂ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವ ಇಚ್ಛೆಯಿದ್ದರೂ ಪಕ್ಷ ಅದನ್ನು ಅನುಮೋದಿಸುತ್ತದಾ? ಅಥವಾ ಪಕ್ಷದ ಪ್ರತಿನಿಧಿಯನ್ನಾಗಿ ಬೇರೆ ಯಾರನ್ನಾದರೂ ಸಮಾರಂಭಕ್ಕೆ ಕಳುಹಿಸಿಕೊಡುತ್ತದಾ? ಎಂಬುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇನ್ನು, ನೆರೆಯ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರಿಗೂ ಪ್ರಧಾನಿ ಕಚೇರಿಯಿಂದ ಆಹ್ವಾನ ಹೋಗಿದೆ. ಅದಕ್ಕೆ ತಕ್ಷಣ ಸ್ಪಂದಿಸಿರುವ ಪ್ರಧಾನಿ ನವಾಜ್ ಷರೀಫ್ ಅವರು ತಾವು ಸಮಾರಂಭದಲ್ಲಿ ಪಾಳ್ಗೊಳ್ಲೂತ್ತಿರುವುದಾಗಿ ತಿಳಿಸಿದ್ದಾರೆ. ಆದರೆ ದೇಶದ ಪ್ರಧಾನಿಯ ಮೇಲೆ ನಿಯಂತ್ರಣ ಹೊಂದಿರುವ ಪಾಕಿಸ್ತಾನದ ಸೇನೆಯು ಪ್ರಧಾನಿ ನವಾಜ್ ಷರೀಫ್ ಅವರಿಗೆ ಹಸಿರುನಿಶಾನೆ ನೀಡುತ್ತದಾ? ಅಥವಾ ಪ್ರಧಾನಿ ನವಾಜ್ ಬದಲಿಗೆ ಪಾಕಿಸ್ತಾನದ ಪ್ರತಿನಿಧಿಯನ್ನಾಗಿ ಬೇರೆ ಯಾರನ್ನಾದರೂ ಸಮಾರಂಭಕ್ಕೆ ಕಳುಹಿಸಿಕೊಡುತ್ತದಾ? ಎಂಬುದು ಚರ್ಚೆಗೆ ಗ್ರಾಸವಾಗಿದೆ.
2004ರಲ್ಲಿ ಎನ್ಡಿಎ ಸೋತ ಬಳಿಕ ಬಿಜೆಪಿಯ ಹಿರಿಯ ನಾಯಕರಾದ ನಿರ್ಗಮಿತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್ ಕೆ ಅಡ್ವಾಣಿ ಇಬ್ಬರೂ ಮನಮೋಹನ ಸಿಂಗ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಅದಾದ ನಂತರ 2009ರ ವೇಳೆಗೆ ಮತ್ತೆ ಯುಪಿಎ ಕೂಟವೇ ಅಧಿಕಾರ ಹಿಡಿದಾಗ ಅನಾರೋಗ್ಯದಿಂದಾಗಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಎಲ್ ಕೆ ಅಡ್ವಾಣಿ ಅವರು ಮನಮೋಹನ ಸಿಂಗ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಹಾಜರಿದ್ದರು.












Click it and Unblock the Notifications