ಮೋದಿಗೆ ಕರೆ ಮಾಡಿ ಥ್ಯಾಂಕ್ಸ್ ಎಂದ ಜಯಾ
ಚೆನ್ನೈ/ನವದೆಹಲಿ, ಆ.13: ಲೋಕಸಭೆಯ ಉಪ ಸಭಾಧ್ಯಕ್ಷರಾಗಿ ಎಐಎಡಿಎಂಕೆಯ ಸಂಸದ ಎಂ.ತಂಬಿದೊರೈ ಅವರನ್ನು ಸರ್ವಾನುಮತದಿಂದ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಆಯ್ಕೆ ಮಾಡಿದೆ. ತಂಬಿದೊರೈ ಆಯ್ಕೆಯ ನಂತರ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಥ್ಯಾಂಕ್ಸ್ ಹೇಳಿದ್ದಾರೆ.
ಬುಧವಾರ ಸಂಸತ್ತಿನಲ್ಲಿ ಉಪ ಸಭಾಧ್ಯಕ್ಷ ಸ್ಥಾನಕ್ಕೆ ಎರಡನೇ ಬಾರಿ ಏರುವ ಮೂಲಕ ತಂಬಿದೊರೈ ಹೊಸ ಇತಿಹಾಸ ನಿರ್ಮಿಸಿದರು. 1985 ರಿಂದ 1989ರ ತನಕ ಉಪಸಭಾಪತಿ ಆಗಿ ಕಾರ್ಯನಿರ್ವಹಿಸಿದ್ದರು. ಈ ಬಾರಿ ಎಐಎಡಿಎಂಕೆ ಜೊತೆ ಚುನಾವಣೋತ್ತರ ಮೈತ್ರಿಯಂತೆ ಎನ್ ಡಿಎ ಮುಖ್ಯಸ್ಥ ನರೇಂದ್ರ ಮೋದಿ ಅವರು ತಂಬಿದೊರೈಗೆ ಸ್ಥಾನ ಕಲ್ಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಎಐಡಿಎಂಕೆಯ ಸದಸ್ಯರ ಬೆಂಬಲದೊಂದಿಗೆ ರಾಜ್ಯಸಭೆಯಲ್ಲೂ ಹಿಡಿತ ಸಾಧಿಸಲು ಎನ್‌ಡಿಎ ತಂತ್ರಗಾರಿಕೆ ಇದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸಂಸತ್ತಿನಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ತಂಬಿ ದೊರೈ ಅವರ ಹೆಸರನ್ನು ಪ್ರಸ್ತಾಪಿಸಿದ್ದು ವಿಶೇಷವಾಗಿತ್ತು. ಜ್ಯೋತಿರಾದಿತ್ಯ ಸಿಂಧ್ಯಾ ಇದಕ್ಕೆ ಮೊದಲಿಗೆ ಅನುಮೋದಿಸಿದರು. ಪ್ರತಿಪಕ್ಷ ಹಾಗೂ ಆಡಳಿತ ಪಕ್ಷ ಜತೆಯಾಗಿ ಉಪ ಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲು ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯ ನಾಯ್ಡು ಮಧ್ಯಸ್ಥಿಕರಾಗಿ ಕಾರ್ಯ ನಿರ್ವಹಿಸಿದರು.
ರಾಜ್ಯಸಭಾ ಬಲಾಬಲ : ಮೇಲ್ಮನೆಯಲ್ಲಿ ಒಟ್ಟು 250 ಸದಸ್ಯರ ಬಲವಿದ್ದು, ಆಡಳಿತರೂಢ ಎನ್‌ಡಿಎಗೆ ಕೇವಲ 46 ಸ್ಥಾನಗಳಿರುವುದರಿಂದ ಅನ್ಯ ಪಕ್ಷಗಳ ಜತೆ ಸ್ನೇಹ ಬೆಳೆಸುವುದು ಅನಿವಾರ್ಯವಾಗಿದೆ. ಸರಳ ಬಹುಮತ ಪಡೆಯಬೇಕಾದರೂ ಕನಿಷ್ಠ ಪಕ್ಷ 126 ಸದಸ್ಯರ ಬೆಂಬಲ ಆಡಳಿತರೂಢ ಎನ್‌ಡಿಎಗೆ ಅವಶ್ಯಕತೆ ಇದೆ. ಎಐಡಿಎಂಕೆಯ 10 ಸದಸ್ಯರು ಈಗ ಸರ್ಕಾರವನ್ನು ಬೆಂಬಲಿಸುವ ಸಾಧ್ಯತೆ ಇದ್ದರೂ ಸಹ ತೊಡಕುಗಳು ನಿವಾರಣೆಗೊಂಡಿಲ್ಲ.
ಈಗಾಗಲೇ ಲೋಕಸಭೆಯಲ್ಲಿ ಮಂಡನೆಯಾಗಿರುವ ನ್ಯಾಯಮೂರ್ತಿಗಳ ನೇಮಕಾತಿ ಮಸೂದೆ ರಾಜ್ಯಸಭೆಯಲ್ಲೂ ಅಂಗೀಕಾರ ಪಡೆದಿದ್ದರ ಹಿಂದೆ ಇಂಥ ಹೊಂದಾಣಿಕೆ ಅನಿವಾರ್ಯ ಎಂದು ಸರ್ಕಾರಕ್ಕೂ ಗೊತ್ತಿದೆ. ತಂಬಿದೊರೈ ಅವರು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದಲ್ಲೂ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಪ್ರಸ್ತುತ ಲೋಕಸಭೆಯಲ್ಲಿ ಅವರು ಎಐಡಿಎಂಕೆ ಸಂಸದೀಯ ಮಂಡಳಿಯ ನಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.












Click it and Unblock the Notifications