ಹರ್ ಘರ್ ತಿರಂಗಾ ಸಂಕಲ್ಪ ರ‌್ಯಾಲಿಯಲ್ಲಿ ಜೋಶಿ ಭಾಗಿ
ನವದೆಹಲಿ, ಆಗಸ್ಟ್ 03: ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು75 ವರ್ಷ ತುಂಬಿದ ಈ ಶುಭ ಸಂದರ್ಭದಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಪ್ರೇರಣೆ ನೀಡುವ ಸಂಬಂಧ ಬುಧವಾರ ದೆಹಲಿಯಲ್ಲಿ ಸಂಸದರ 'ತಿರಂಗಾ ಬೈಕ್ ರ‌್ಯಾಲಿ' ನಡೆಯಿತು. ಕನ್ನಡಿಗರಾದ ಪ್ರಲ್ಹಾದ್ ಜೋಶಿ ಅವರು ಸಹ ಈ ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ಕೇಂದ್ರ ಸಂಸ್ಕೃತಿ ಸಚಿವಾಲಯ ವತಿಯಿಂದ ನಡೆದ ತಿರಂಗಾ ಬೈಕ್ ರ‌್ಯಾಲಿಗೆ ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅವರು ಚಾಲನೆ ನೀಡಿದ ನಂತರ ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆಯಿಂದ ವಿಜಯ್ ಚೌಕ್‌ವರೆಗೆ ಸಂಸದರು ತ್ರಿವರ್ಣ ಧ್ವಜ ಹಿಡಿದು ಬೈಕ್ ರ‌್ಯಾಲಿ ನಡೆಸಿದರು.
ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ದೇಶದಲ್ಲಿ ರಾಷ್ಟ್ರೀಯ ಭಾವನೆಯನ್ನು ಇಮ್ಮಡಿಗೊಳಿಸುವಂತ ಹಲವು ಕಾರ್ಯಕ್ರಮಗಳನ್ನು ಕೇಂದ್ರ ಬಿಜೆಪಿ ಸರ್ಕಾರ ಹಮ್ಮಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಪೂರ್ಣಗೊಂಡಿರುವ ಸುಸಂದರ್ಭ ಕುರಿತು ಮಾತನಾಡಿದ್ದರು. ಅಮೃತ ಮಹೋತ್ಸವ ಒಂದು ಅಭಿಯಾನವಾಗಬೇಕು. ಈ ನಿಟ್ಟಿನಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ಅಜಾದಿ ಕೀ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಬೇಕು ಎಂದು ಅವರು ಕರೆ ನೀಡಿದ್ದರು.

ಅಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ದೇಶದ ಸಂಸದರನ್ನ ಒಟ್ಟುಗೂಡಿಸಿಕೊಂಡು ತಿರಂಗಾ ರ‌್ಯಾಲಿ ಕಾರ್ಯಕ್ರಮ ನಡೆಸುವ ಬಗ್ಗೆ ಚರ್ಚಿಸಿದ್ದರು. ನಂತರ ತಿರಂಗಾ ರ‌್ಯಾಲಿ ಕಾರ್ಯಕ್ರಮ ನಡೆಸುವ ಕುರಿತು ಕೇಂದ್ರ ಸಂಸ್ಕೃತಿ ಇಲಾಖೆಗೆ ಅವರು ಸೂಚನೆ ನೀಡಿದ್ದರು.
ರಾಷ್ಟ್ರಾಭಿಮಾನದ ಅಭಿಯಾನ
ಇದೊಂದು ಬಿಜೆಪಿ ಕಾರ್ಯಕ್ರಮವಲ್ಲ ಬದಲಾಗಿ, ರಾಷ್ಟ್ರಾಭಿಮಾನ ಹೆಚ್ಚಿಸುವ ಮಹತ್ವದ ಅಭಿಯಾನ. ದೇಶದ ಜನರನ್ನು ಪ್ರತಿನಿಧಿಸುವ ಸಂಸದರು ತ್ರಿವರ್ಣ ಧ್ವಜ ಹಿಡಿದು ದೇಶದ ಜನರಿಗೆ ಸಂದೇಶ ಸಾರುವುದು ಮುಖ್ಯ. ಈ ನಿಟ್ಟಿನಲ್ಲಿ ಎಲ್ಲ ಸಂಸದರು ಪಾಲ್ಗೊಳ್ಳುವಂತೆ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಕರೆ ನೀಡಿದ್ದರು. ಅದರಂತೆ ಬುಧವಾರ ಕಾರ್ಯಕ್ರಮ ನಡೆದಿದೆ.

ತಿರಂಗಾ ರ‌್ಯಾಲಿಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮ ಕಂಡು ಬಂತು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಜತೆ ವೇದಿಕೆ ಹಂಚಿಕೊಂಡಿದ್ದ ಪ್ರಲ್ಹಾದ್ ಜೋಶಿ ಅವರು ಧ್ವಜ ಹಾರಿಸುವ ಮೂಲಕ ಸಂಭ್ರಮಿಸಿದರು.












Click it and Unblock the Notifications