ಅಪ್ರಾಪ್ತ ಬಾಲಕಿ ಮೇಲೆ ಶಾಲೆಯಲ್ಲೇ ಸಾಮೂಹಿಕ ಅತ್ಯಾಚಾರ:ಎಫ್‌ಐಆರ್
ನವದೆಹಲಿ, ಅಕ್ಟೋಬರ್ 07: ರಾಷ್ಟ್ರ ರಾಜಧಾನಿಯ ಶಾಲೆ ಒಂದರಲ್ಲಿ ಅಪ್ರಾಪ್ತ ಬಾಲಕಿ ಮೇಲೆ ವಾಶ್‌ರೂಂ ನಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರು ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಪ್ರಕರಣ ಕುರಿತು ತನಿಖೆ ನಡೆಸಲಾಗುತ್ತಿದೆ. ಆದರೆ ಈವರೆಗೆ ಯಾರನ್ನು ಬಂಧಿಸಲಾಗಿಲ್ಲ ಎಂದು ದೆಹಲಿಯ ಪೊಲೀಸರು ತಿಳಿಸಿದ್ದಾರೆ. ಕೆಲವು ತಿಂಗಳ ಹಿಂದೆ ದೆಹಲಿಯಲ್ಲಿ ಶಾಲೆಯ ವಾಶ್ ರೂಂನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ಹಿರಿಯ ತರಗತಿಯ ಇಬ್ಬರು ಹುಡುಗರು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಆ ಇಬ್ಬರ ಮೇಲೆ ಕಳೆದ ಮಂಗಳವಾರ ಪೊಲೀಸರು ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆ ಬಲೆ ಬೀಸಿದ್ದಾರೆ.

ಇತ್ತೀಚೆಗಷ್ಟೇ ಸಂತ್ರಸ್ತ ಬಾಲಕಿ ಪೊಲೀಸರನ್ನು ಸಂಪರ್ಕಿಸಿದ ಬಳಿಕವೇ ಸಾಮೂಹಿಕ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಕೃತ್ಯ ನಡೆದಿರುವ ಬಗ್ಗೆ ದೃಢಪಡಿಸಿದ ದೆಹಲಿ ಡಿಸಿಪಿ ಅಮೃತಾ ಗುಗುಲೋತ್ ಅವರು, ಸಂತ್ರಸ್ತೆ ಮಾಹಿತಿ ಮೇರೆಗೆ ಕೂಡಲೇ ಲೈಂಗಿಕ ದೌರ್ಜನ್ಯ ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್‌ಗಳನ್ವಯ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ತನಿಖೆ ಪ್ರಗತಿಯಲ್ಲಿದ್ದು, ಇನ್ನೂ ಯಾರನ್ನೂ ಬಂಧಿಸಿಲ್ಲ ಎಂದು ತಿಳಿಸಿದರು.
ಈ ಅತ್ಯಾಚಾರ ಘಟನೆಯ ಕುರಿತು ದೆಹಲಿ ಮಹಿಳಾ ಆಯೋಗವು ದೆಹಲಿ ಪೊಲೀಸರು ಮತ್ತು ಶಾಲಾ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ. ಆಯೋಗದ ಪ್ರಕಾರ, ಕಳೆದ ಜುಲೈನಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಬಾಲಕಿ ಹಾಗೂ ಆಕೆಯ ಕುಟುಂಬ ಆರೋಪಿಸಿತ್ತು. ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.
ಶಾಲಾ ಅಧಿಕಾರಿಗಳು ಪ್ರಕರಣ ಮುಚ್ಚಿ ಹಾಕಿದ್ದರು
ಬಾಲಕಿ ತನ್ನ ತರಗತಿಗೆ ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ಹುಡುಗರನ್ನು ತಳ್ಳಿದ್ದಾಳೆ. ನಂತರ ಆಕೆಯೇ ಅವರ ಬಳಿ ಕ್ಷಮೆಯಾಚಿಸಿದ್ದಾಳೆ. ಆದರೆ ಆ ಹುಡುಗರು ಆಕೆಯನ್ನು ನಿಂದಿಸುತ್ತಾ ವಾಶ್‌ರೂಮ್‌ಗೆ ಎಳೆದೊಯ್ದಿದ್ದಾರೆ. ನಂತರ ಒಳಗಿನಿಂದ ಬಾಗಿಲು ಹಾಕಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ. ಆಕೆ ಈ ಬಗ್ಗೆ ಶಾಲೆಯ ಶಿಕ್ಷಕರಿಗೆ ತಿಳಿಸಿದರೂ ಅವರು ಹುಡುಗರಿಗೆ ಬೈದಿದ್ದಾರೆ. ಆದರೆ ಪ್ರಕರಣವನ್ನು ಮುಚ್ಚಿಟ್ಟಾರೆ ಎಂದು ಆಯೋಗ ತಿಳಿಸಿದೆ.

ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಮಾತನಾಡಿ, ದೆಹಲಿಯ ಶಾಲೆ ಒಂದರಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರದಂತಹ ಗಂಭೀರ ಪ್ರಕರಣ ನಡೆದಿದೆ. ಶಾಲೆಯ ಶಿಕ್ಷಕರು ವಿಷಯ ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ. ರಾಜಧಾನಿಯಲ್ಲಿ ಶಾಲೆಗಳಲ್ಲಿ ಸಹ ಮಕ್ಕಳಿಗೆ ಸರುಕ್ಷಿತತೆ ಇಲ್ಲದಾಗಿರುವುದು ದುರದೃಷ್ಟಕರ. ಈ ಬಗ್ಗೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕಿದೆ. ಅಲ್ಲದೆ ಈ ಘಟನೆಯಲ್ಲಿ ಶಾಲಾಧಿಕಾರಿಗಳ ಪಾತ್ರದ ಬಗ್ಗೆ ಸೂಕ್ತ ತನಿಖೆ ಆಗಬೇಕು. ಶಾಲೆಯ ಅಧಿಕಾರಿಗಳು ಘಟನೆ ಬಗ್ಗೆ ಗೊತ್ತಿದ್ದರೂ ಮುಚ್ಚಿಡಲು ಕಾರಣ ಏನು ಎಂಬ ಸತ್ಯ ಬಯಲಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.












Click it and Unblock the Notifications