Get Updates
Get notified of breaking news, exclusive insights, and must-see stories!

ಕೆ.ಆರ್.ಕ್ಷೇತ್ರದಲ್ಲಿ ಸ್ಪರ್ಧಿಸಲು ಹಾತೊರೆಯುತ್ತಿರುವ ಆಕಾಂಕ್ಷಿಗಳು ಯಾರ್ಯಾರು..?

ಮೈಸೂರು, ಡಿಸೆಂಬರ್‌ 15: ಮೈಸೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದಾಗಿರುವ ಕೃಷ್ಣರಾಜ(ಕೆ.ಆರ್.) ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಿಂದ ಮುಂದಿನ 2023ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆಕಾಂಕ್ಷಿಗಳಿರುವುದು ಕಂಡು ಬಂದಿದೆ. ಕೊನೆಗಳಿಗೆಯಲ್ಲಿ ಒಂದಷ್ಟು ಮಂದಿ ಪಕ್ಷೇತರರು ಕಣಕ್ಕಿಳಿದರೂ ಅಚ್ಚರಿ ಪಡಬೇಕಾಗಿಲ್ಲ.

ಕೆ.ಆರ್.ಕ್ಷೇತ್ರದಲ್ಲಿ ಮೊದಲಿನಿಂದಲೂ ಪಕ್ಷೇತರರು ಸೇರಿದಂತೆ ಎಲ್ಲ ಪಕ್ಷಗಳು ಗೆಲುವು ಕಂಡಿವೆ. ಆದರೆ ಜೆಡಿಎಸ್ ಪೈಪೋಟಿ ನಡೆಸುತ್ತಾ ಬಂದರೂ ಇನ್ನೂ ಕೂಡ ಖಾತೆ ತೆರೆದಿಲ್ಲ. ಇತ್ತೀಚೆಗೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ನಡೆಯುತ್ತಿದ್ದು. ಸದ್ಯ ಕ್ಷೇತ್ರದಲ್ಲಿ ಶಾಸಕರಾಗಿರುವ ಬಿಜೆಪಿಯ ಎಸ್.ಎ.ರಾಮದಾಸ್ ಮತ್ತು ಕಾಂಗ್ರೆಸ್‌ನ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನಡುವೆ ರಾಜಕೀಯವಾಗಿ ಬಹಳ ವರ್ಷಗಳಿಂದ ಎದುರಾಳಿಗಳಾಗಿ ಮುಂದುವರೆಯುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಕಾಂಕ್ಷಿಗಳು ಇರುವುದು ಎದ್ದು ಕಾಣಿಸುತ್ತಿದೆ.

ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ ಒಂದಷ್ಟು ವಿಭಿನ್ನತೆ ಇಲ್ಲಿ ಕಂಡು ಬರುತ್ತದೆ. ಇಲ್ಲಿ ಸುಶಿಕ್ಷಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈಗಾಗಲೇ ಶಾಸಕರಾಗಿರುವ ಎಸ್.ಎ.ರಾಮದಾಸ್ ಅವರು ನಾಲ್ಕು ಬಾರಿ ಗೆಲುವು ಸಾಧಿಸಿ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದಾರೆ. ಜೊತೆಗೆ ತಮ್ಮದೇ ಆದ ಸಾಮಾಜಿಕ ಚಟುವಟಿಕೆಯಿಂದ ಕ್ಷೇತ್ರದ ಮತದಾರರ ಮನೆ ಬಾಗಿಲು ತಟ್ಟಿದ್ದಾರೆ. ಇವರ ಪ್ರತಿಸ್ಪರ್ಧಿ ಎಂದೇ ಗುರುತಿಸಿಕೊಂಡಿರುವ ಕಾಂಗ್ರೆಸ್‌ನ ಎಂ.ಕೆ.ಸೋಮಶೇಖರ್ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಅವರಿಗೂ ಕ್ಷೇತ್ರದ ಮೇಲೆ ಹಿಡಿತವಿದೆ.

ಎಂ.ಕೆ.ಸೋಮಶೇಖರ್‌ಗೆ ಬಹುತೇಕ ಟಿಕೆಟ್ ಖಚಿತ

ಎಂ.ಕೆ.ಸೋಮಶೇಖರ್‌ಗೆ ಬಹುತೇಕ ಟಿಕೆಟ್ ಖಚಿತ

ಕಾಂಗ್ರೆಸ್‌ನ ಎಂ.ಕೆ.ಸೋಮಶೇಖರ್ ಈಗಾಗಲೇ ಕ್ಷೇತ್ರದಲ್ಲಿ ಸಂಚಾರ ಆರಂಭಿಸಿದ್ದು ತನಗೆ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ. ಕಳೆದ ಬಾರಿ ಬಿಜೆಪಿ ಶಾಸಕ ಎಸ್.ರಾಮದಾಸ್ ಎದುರು ಸೋಲು ಕಂಡ ಎಂ.ಕೆ.ಸೋಮಶೇಖರ್ ಆ ನಂತರವೂ ಮೌನಕ್ಕೆ ಶರಣಾಗದೆ ಸದಾ ಒಂದಲ್ಲ ಒಂದು ರೀತಿಯಿಂದ ಸುದ್ದಿ ಮಾಡುತ್ತಲೇ ಇದ್ದಾರೆ. ಕಳೆದೊಂದು ತಿಂಗಳ ಹಿಂದಿನಿಂದಲೇ ಕ್ಷೇತ್ರದಲ್ಲಿ ಮತದಾರರ ಮನೆ ಬಾಗಿಲಿಗೆ ತೆರಳಿ ಮನವೊಲಿಸುವ ಕಾರ್ಯದಲ್ಲಿದ್ದಾರೆ. ಕಾಂಗ್ರೆಸ್‌ನಿಂದಲೇ ಇವರಿಗೆ ಇನ್ನೊಂದಷ್ಟು ಮಂದಿ ಪೈಪೋಟಿ ನೀಡುವ ಸಾಧ್ಯತೆಯಿದೆ.

ಈಗಾಗಲೇ ಟಿಕೆಟ್ ಕೋರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಕಾಂಗ್ರೆಸ್ ಮುಖಂಡ ಗುರುಪಾದಸ್ವಾಮಿ, ಪ್ರದೀಪ್‌ಕುಮಾರ್, ನವೀನ್‌ಕುಮಾರ್, ಎನ್.ಭಾಸ್ಕರ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದರೂ ಗೆಲ್ಲುವ ಕುದುರೆಗೆ ಟಿಕೆಟ್ ನೀಡುವುದು ಅನಿವಾರ್ಯವಾಗಿರುವುದರಿಂದ ಬಹುಶಃ ಸಿದ್ದರಾಮಯ್ಯ ಅವರ ಶಿಷ್ಯ, ಮಾಜಿ ಶಾಸಕರಾಗಿರುವ ಎಂ.ಕೆ.ಸೋಮಶೇಖರ್ ಅವರಿಗೆ ಟಿಕೆಟ್ ಖಚಿತವಾದರೂ ಅಚ್ಚರಿಯಿಲ್ಲ. ಆ ವಿಶ್ವಾಸದಲ್ಲಿ ಅವರು ಕ್ಷೇತ್ರದಲ್ಲಿ ಕಾರ್ಯ ಆರಂಭಿಸಿದ್ದಾರೆ.

ಕೆ.ಆರ್‌ ಕೇತ್ರದಲ್ಲಿ ಟಿಕೆಟ್‌ ಆಕಾಂಕ್ಷಿಗಳು ಯಾರ್ಯಾರು..?

ಕೆ.ಆರ್‌ ಕೇತ್ರದಲ್ಲಿ ಟಿಕೆಟ್‌ ಆಕಾಂಕ್ಷಿಗಳು ಯಾರ್ಯಾರು..?

ಬಿಜೆಪಿಯಲ್ಲಿ ಹಾಲಿ ಶಾಸಕರಾಗಿರುವ ಎಸ್.ಎ.ರಾಮದಾಸ್ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರೂ ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ನಗರಪಾಲಿಕೆ ಮಾಜಿ ಸದಸ್ಯ ಪಾರ್ಥಸಾರಥಿ, ಮೈಲ್ಯಾಕ್ ಮಾಜಿ ಅಧ್ಯಕ್ಷ ಫಣೀಶ್, ಪಾಲಿಕೆ ಸದಸ್ಯ ಮಾವಿ ರಾಂಪ್ರಸಾದ್ ಟಿಕೆಟ್‌ಗಾಗಿ ಹಾತೊರೆಯುತ್ತಿದ್ದಾರೆ. ಜೆಡಿಎಸ್‌ನಿಂದ ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ಮಾಜಿ ಉಪ ಮೇಯರ್, ದಲಿತ ಸಮುದಾಯದ ಮುಖಂಡ ವಿ.ಶೈಲೇಂದ್ರ ಹಾಗೂ ವೀರಶೈವ ಲಿಂಗಾಯತ ಸಮುದಾಯದ ಮುಖಂಡ ಸಂತೋಷ್ ಅಮ್ಮ ಟಿಕೆಟ್ ಆಕಾಂಕ್ಷಿಗಳಿದ್ದು, ಇವರ ಪೈಕಿ ಕೆ.ವಿ.ಮಲ್ಲೇಶ್ ಅವರಿಗೆ ಟಿಕೆಟ್ ಸಿಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಕೆ.ಆರ್.ಕ್ಷೇತ್ರದಲ್ಲಿ ಹನ್ನೊಂದು ಚುನಾವಣೆ

ಕೆ.ಆರ್.ಕ್ಷೇತ್ರದಲ್ಲಿ ಹನ್ನೊಂದು ಚುನಾವಣೆ

ಕೆ.ಆರ್.ಕ್ಷೇತ್ರದಲ್ಲಿ ಇದುವರೆಗೆ ಹನ್ನೊಂದು ಚುನಾವಣೆಗಳು ನಡೆದಿದ್ದು, 1967 ಎಚ್.ಚೆನ್ನಯ್ಯ (ಪಕ್ಷೇತರ), 1972 ಸೂರ್ಯ ನಾರಾಯಣರಾವ್ (ಕಾಂಗ್ರೆಸ್), 1978 ಎಚ್.ಗಂಗಾಧರನ್ (ಜನತಾಪಕ್ಷ), 1983ಎಚ್.ಗಂಗಾಧರನ್ (ಬಿಜೆಪಿ), 1985 ವೇದಾಂತ ಹೆಮ್ಮಿಗೆ (ಜನತಾಪಕ್ಷ), 1989 ಸೋಮಸುಂದರಂ (ಕಾಂಗ್ರೆಸ್), 1994 ಎಸ್.ಎ.ರಾಮದಾಸ್ (ಬಿಜೆಪಿ), 1999 ಎಸ್.ಎ.ರಾಮದಾಸ್ (ಬಿಜೆಪಿ), 2004 ಎ.ಕೆ.ಸೋಮಶೇಖರ್ (ಕಾಂಗ್ರೆಸ್), 2008 ಎಸ್.ಎ.ರಾಮದಾಸ್ (ಬಿಜೆಪಿ) 2013 ಎಂ.ಕೆ.ಸೋಮಶೇಖರ್ (ಕಾಂಗ್ರೆಸ್), 2018 ಎಸ್.ಎ.ರಾಮದಾಸ್ (ಬಿಜೆಪಿ) ಗೆಲುವು ಸಾಧಿಸಿದ್ದಾರೆ.

ಹೆಚ್ಚಿದ ಮೂರು ಪಕ್ಷಗಳ ಆಕಾಂಕ್ಷಿಗಳ ಸಂಖ್ಯೆ

ಹೆಚ್ಚಿದ ಮೂರು ಪಕ್ಷಗಳ ಆಕಾಂಕ್ಷಿಗಳ ಸಂಖ್ಯೆ

ಕ್ಷೇತ್ರದಲ್ಲಿ ಕಾಂಗ್ರೆಸ್ ನಾಲ್ಕು ಬಾರಿ, ಬಿಜೆಪಿ ಐದು ಬಾರಿ, ಜನತಾಪಕ್ಷ ಎರಡು ಬಾರಿ, ಪಕ್ಷೇತರರು ಒಮ್ಮೆ ಗೆಲುವು ಸಾಧಿಸಿದ್ದಾರೆ. ಇನ್ನು ಕ್ಷೇತ್ರದಲ್ಲಿ ಬ್ರಾಹ್ಮಣ, ವೀರಶೈವ ಲಿಂಗಾಯತರು, ಕುರುಬರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು, ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದುವರೆಗಿನ ಚುನಾವಣೆಗಳಲ್ಲಿ ಬ್ರಾಹ್ಮಣರು, ಲಿಂಗಾಯತರೇ ಹೆಚ್ಚು ಬಾರಿ ಗೆದ್ದಿರುವುದು ಕಂಡು ಬಂದಿದೆ. ಒಟ್ಟಾರೆ ಈ ಬಾರಿ ಕ್ಷೇತ್ರದಲ್ಲಿ ಮೂರು ಪಕ್ಷಗಳಿಂದಲೂ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಅಂತಿಮವಾಗಿ ಮೂರು ಪಕ್ಷಗಳಿಂದ ಯಾರು ಅಭ್ಯರ್ಥಿಗಳು ಎನ್ನುವುದರ ಮೇಲೆ ಪೈಪೋಟಿ ಏರ್ಪಡುವ ಸಾಧ್ಯತೆ ಹೆಚ್ಚಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+