ಮಚ್ಚಿನಿಂದ ಕೊಚ್ಚಿ ಮೈಸೂರಿನಲ್ಲಿ ಮಹಿಳೆಯ ಬರ್ಬರ ಹತ್ಯೆ
ಮೈಸೂರು, ಸೆಪ್ಟೆಂಬರ್ 5: ಗಿರಿಜನ ಮಹಿಳೆಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಲಿಂಗಾಪುರ ಹಾಡಿಯಲ್ಲಿ ನಡೆದಿದೆ.
ಪಿರಿಯಾಪಟ್ಟಣ ತಾಲೂಕಿನ ಕೊಡಗಿನ ಗಡಿಭಾಗದಲ್ಲಿರುವ ಲಿಂಗಾಪುರ ಹಾಡಿಯ ಪದ್ಮಿನಿ (45) ಎಂಬಾಕೆಯ ಮೃತಪಟ್ಟ ಮಹಿಳೆ. ಈಕೆ ಚಂದ್ರ ಎಂಬಾತನನ್ನು ಮದುವೆಯಾಗಿ ಮೂರು ಹೆಣ್ಣುಮಕ್ಕಳು ಮತ್ತು ಒಂದು ಗಂಡು ಮಗುವಿತ್ತು. ಕೆಲ ವರ್ಷಗಳಿಂದ ಗಂಡ ಹೆಂಡಿರ ನಡುವೆ ವಿರಸ ಏರ್ಪಟ್ಟಿದ್ದು ಇಬ್ಬರು ಬೇರೆ ಬೇರೆಯಾಗಿ ಮಕ್ಕಳೊಂದಿಗೆ ಪದ್ಮಿನಿ ವಾಸಿಸುತ್ತಿದ್ದಳು.

ಸೆ.2ರ ಶನಿವಾರ ರಾತ್ರಿ ಲಿಂಗಾಪುರ ಹಾಡಿಯ ಮನೆಯಿಂದ ಅಂಗಡಿಗೆ ಸಾಮಾನು ತರುವುದಾಗಿ ಹೇಳಿ ಹೋದ ಪದ್ಮಿನಿ ಮನೆಗೆ ವಾಪಸ್ಸಾಗಿರಲಿಲ್ಲ. ಇದರಿಂದ ಗಾಬರಿಗೊಂಡ ಮನೆಯವರು ಈಕೆಯನ್ನು ಹುಡುಕಲು ಆರಂಭಿಸಿದ್ದು ಬೆಳಿಗ್ಗೆಯವರೆಗೂ ಪತ್ತೆಯಾಗಿರಲಿಲ್ಲ.
ಈ ನಡುವೆ ಸೆ.3ರ ಭಾನುವಾರ ಪದ್ಮಿನಿ ಪುತ್ರ ನಾಗೇಂದ್ರ ಹುಡುಕಾಟ ನಡೆಸಿದಾಗ ಈಕೆಯ ಶವ ಲಿಂಗಾಪುರ ಹಾಡಿಯ ಪಕ್ಕದಲ್ಲಿರುವ ಮಂಚಿದೇವಿ ಕೆರೆಯ ಪಕ್ಕ ಅಣ್ಣಾಜು ಎಂಬುವವರಿಗೆ ಸೇರಿದ ಮುಸುಕಿನ ಜೋಳದ ಹೊಲದಲ್ಲಿ ಸಿಕ್ಕಿದೆ. ಶವದ ಮೇಲೆ ಗಾಯದ ಗುರುತುಗಳಿದ್ದು ಯಾರೋ ಕೊಲೆಗೈದಿರಬಹುದೆಂದು ಶಂಕಿಸಲಾಗಿದೆ.
ಘಟನೆ ಬಳಿಕ ಮೃತಳ ಪತಿಯು ನಾಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಆಕೆಯ ಪುತ್ರ ನಾಗೇಂದ್ರ ದೂರು ನೀಡಿದ್ದು, ಸರ್ಕಲ್ ಇನ್ಸ್ ಪೆಕ್ಟರ್ ಎಚ್.ಎನ್.ಸಿದ್ದಯ್ಯ, ಪಿಎಸ್ ಐ ರವಿಕಿರಣ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.












Click it and Unblock the Notifications