ಮೈಸೂರಿನಲ್ಲಿ ಹೊಸವರ್ಷಕ್ಕೆ 2 ಲಕ್ಷ ಲಡ್ಡು ವಿತರಣೆ!
ಮೈಸೂರು, ಡಿ. 30 : ಹೊಸ ವರ್ಷವನ್ನು ಸ್ವಾಗತಿಸಲು ಎಲ್ಲರೂ ಸಜ್ಜಾಗಿದ್ದಾರೆ. ಮೈಸೂರಿನ ಯೋಗ ನರಸಿಂಹ ಸ್ವಾಮಿ ದೇವಾಲಯದಲ್ಲಿ ಹೊಸ ವರ್ಷದಂದು ಭಕ್ತರಿಗೆ ವಿತರಿಸಲು ಸುಮಾರು 2 ಲಕ್ಷ ಲಡ್ಡುಗಳನ್ನು ತಯಾರಿಸಲಾಗಿದೆ. ತಿರುಪತಿ ಲಡ್ಡುವಿನ ಶೈಲಿಯಲ್ಲಿರುವ ಈ ಲಾಡುಗಳನ್ನು ದೇವಾಲಯದ ಆಡಳಿತ ಮಂಡಳಿ 1994ರಿಂದ ಹೊಸ ವರ್ಷದಂದು ನಿರಂತರವಾಗಿ ವಿತರಣೆ ಮಾಡುತ್ತಿದೆ.
ಶ್ರೀ ಯೋಗ ನರಸಿಂಹ ಸ್ವಾಮಿ ದೇವಾಲಯದಲ್ಲಿ ಹೊಸ ವರ್ಷದಂದು ವಿಶ್ವಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಜ.1ರಂದು ತಿರುಪತಿ ಶೈಲಿಯ ಲಡ್ಡುಗಳನ್ನು ದೇವಾಲಯಕ್ಕೆ ಆಗಮಿಸಿದ ಎಲ್ಲಾ ಭಕ್ತರಿಗೆ ಹಂಚಲಾಗುತ್ತದೆ. ಈ ಬಾರಿ ಹಂಚಲು ಸುಮಾರು 2 ಲಕ್ಷ ಲಾಡುಗಳನ್ನು ತಯಾರಿಸಲಾಗಿದೆ.

ಡಿ.23ರಿಂದ ದೇವಾಲಯದ ಆವರಣದಲ್ಲಿ 50 ಮಂದಿ ಅಡುಗೆ ತಯಾರಕರು ಲಾಡುವನ್ನು ಮಾಡುವ ಕಾರ್ಯ ಕೈಗೊಂಡಿದ್ದರು. ಸದ್ಯ ಸುಮಾರು 2 ಲಕ್ಷ ಲಾಡು ತಯಾರಾಗಿದ್ದು ಭಕ್ತರಿಗೆ ಜನವರಿ 1ರಂದು ಹಂಚಲು ಸಿದ್ಧತೆ ನಡೆದಿದೆ. 1994ರಲ್ಲಿ ಮೊದಲ ಬಾರಿಗೆ ಲಡ್ಡು ಹಂಚುವ ಕಾರ್ಯವನ್ನು ದೇವಾಲಯದ ಆಡಳಿತ ಮಂಡಳಿ ಕೈಗೊಂಡಿತ್ತು. ನಂತರ ಪ್ರತಿವರ್ಷ ಅದನ್ನು ಮುಂದುವರೆಸಿಕೊಂಡು ಬರಲಾಗುತ್ತಿದೆ.
ಲಡ್ಡು ತಯಾರಿಕೆ ಹೇಗೆ : ದೇವಾಲಯದಲ್ಲಿ ಲಡ್ಡುಗಳನ್ನು ತಯಾರಿಸಲು ಸುಮಾರು 70 ಕ್ವಿಂಟಾಲ್ ಸಕ್ಕರೆ, 200 ಟಿನ್ ಎಣ್ಣೆ, 30 ಟನ್ ಗೋಡಂಬಿ, 100 ಕೆಜಿ ದ್ರಾಕ್ಷಿ, 150 ಕೆಜಿ ಡೈಮಂಡ್ ಷುಗರ್, 4 ಕೆಜಿ ಪಚ್ಚ ಕರ್ಪೂರ ಮುಂತಾದ ವಸ್ತುಗಳನ್ನು ಬಳಸಲಾಗಿದೆ ಎಂದು ಆಡಳಿತ ಮಂಡಳಿ ಸದಸ್ಯರಾದ ಎನ್.ಶ್ರೀನಿವಾಸನ್ ಮಾಹಿತಿ ನೀಡಿದ್ದಾರೆ.
ಜ.1ರಂದು ಬೆಳಗ್ಗೆ 6 ಗಂಟೆಯಿಂದ ದೇವಾಲಯದಲ್ಲಿ ವಿಶೇಷ ಪೂಜೆ ಆರಂಭವಾಗಲಿದೆ. ನೀವು ಹೊಸ ವರ್ಷದಂದು ದೇವಾಲಯಕ್ಕೆ ಭೇಟಿ ನೀಡಿ, ವಿಶ್ವಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಿ, ಲಾಡು ಪಡೆದು ಬನ್ನಿ.












Click it and Unblock the Notifications