ಚಿರತೆ ಹಾವಳಿ ತಡೆಗೆ ಟಾಸ್ಕ್ ಪೋರ್ಸ್ ರಚಿಸಿ ಆದೇಶ ಹೊರಡಿಸಿದ ಸರ್ಕಾರ, ತಂಡಗಳ ವಿವರ ಇಲ್ಲಿದೆ
ಮೈಸೂರು ಜಿಲ್ಲೆಯಲ್ಲಿ ಚಿರತೆಗಳ ಹಾವಳಿಯಿಂದ ಇದುವರೆಗೂ ನಾಲ್ಕು ಮಂದಿ ಮೃತಪಟ್ಟಿದ್ದು, ಇದೀಗ ಸರ್ಕಾರ ಜನರ ಹಿತದೃಷ್ಟಿಯಿಂದ ಚಿರತೆ ದಾಳಿ ತಡೆಗೆ ಟಾಸ್ಕ್‌ಪೋರ್ಸ್ ರಚನೆ ಮಾಡಿದೆ.
ಮೈಸೂರು, ಫೆಬ್ರವರಿ, 01: ಇತ್ತೀಚಿನ ದಿನಗಳಲ್ಲಿ ಮಾನವ ಮತ್ತು ಚಿರತೆ ನಡುವೆ ಸಂಘರ್ಷ ಹೆಚ್ಚಾಗಿದ್ದು, ಇದನ್ನು ತಡೆಯಲು ಸರ್ಕಾರ "ಚಿರತೆ ಟಾಸ್ಕ್ ಫೋರ್ಸ್ ರಚನೆ ಮಾಡಿ ಆದೇಶ ಹೊರಡಿಸಿದೆ.
ಈ ಹಿಂದೆ ತಿ.ನರಸೀಪುರ ತಾಲೂಕಿನಲ್ಲಿ ಚಿರತೆ ಬಾಲಕನನ್ನು ಕೊಂದು ಹಾಕಿತ್ತು. ಕಳೆದ ಆರು ತಿಂಗಳ ಅವಧಿಯಲ್ಲಿ ಮೈಸೂರು ಜಿಲ್ಲೆಯೊಂದರಲ್ಲೇ ಚಿರತೆಗಳ ದಾಳಿಯಿಂದ ನಾಲ್ಕು ಮಂದಿ ಮೃತಪಟ್ಟಿದ್ದಾರೆ.
ಮೈಸೂರು, ನಂಜನಗೂಡು, ಎಚ್.ಡಿ. ಕೋಟೆ, ಸರಗೂರು, ತಿ.ನರಸೀಪುರ, ಪಾಂಡವಪುರ, ನಾಗಮಂಗಲ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಕಳೆದ ಮೂರು ವರ್ಷಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಚಿರತೆಗಳು ಗ್ರಾಮದ ಅಕ್ಕಪಕ್ಕದ ಜಮೀನಿನ ಮನೆಗಳಲ್ಲಿ ಇರುವ ಹಸು, ಕರು, ನಾಯಿ ಹಾಗೂ ಮನುಷ್ಯರನ್ನು ಕೊಂದು ಹಾಕಿದೆ. ಈ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ಸರ್ಕಾರ ಚಿರತೆ ಟಾಸ್ಕ್‌ಫೋರ್ಸ್ ರಚನೆ ಮಾಡಿ ಆದೇಶ ಹೊರಡಿಸಿದೆ.
ಟಾಸ್ಕ್ ಫೋರ್ಸ್‌ನಲ್ಲಿ ಇರಲಿರುವ ಅಧಿಕಾರಿಗಳು
ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಇದರ ಮುಖ್ಯಸ್ಥರಾಗಿರುತ್ತಾರೆ. ಮೈಸೂರು ಪ್ರಾದೇಶಿಕ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯ ಅಧಿಕಾರಿ, ಉಪ ವಲಯ ಅರಣ್ಯ ಅಧಿಕಾರಿ, ಗಸ್ತು ಅರಣ್ಯಪಾಲಕರು, ವಾಹನ ಚಾಲಕರು, ಸಹಾಯಕರು ಚಿರತೆ ಟಾಸ್ಕ್‌ಫೋರ್ಸ್‌ನಲ್ಲಿ ಇರಲಿದ್ದಾರೆ.

ಕಾರ್ಯಚಟುವಟಿಕೆ ಹೇಗೆ?
ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಈ ಟಾಸ್ಕ್‌ಫೋರ್ಸ್‌ನ ನೇತೃತ್ವ ವಹಿಸಿರುತ್ತಾರೆ. ಉಪ ವಲಯ ಅರಣ್ಯಾಧಿಕಾರಿ ನೇತೃತ್ವದಲ್ಲಿ 4 ತಂಡಗಳಾಗಿ ಒಂದೊಂದು ತಂಡದಲ್ಲಿ ಇಬ್ಬರು ಗಸ್ತು ಅರಣ್ಯಪಾಲಕರು ಇರುತ್ತಾರೆ. ಜೊತೆಗೆ ಒಬ್ಬ ವಾಹನ ಚಾಲಕ, 10 ಹೊರ ಗುತ್ತಿಗೆ ನೌಕರರು ಕಾರ್ಯ ನಿರ್ವಹಿಸಲಿದ್ದಾರೆ.

ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ
ಪ್ರತಿ ತಂಡವು ಚಿರತೆ ಹಾವಳಿ ಇರುವ ಗ್ರಾಮಗಳಲ್ಲಿ ಗಸ್ತು ತಿರುಗುವುದು, ಜನವಸತಿ ಪ್ರದೇಶಗಳಲ್ಲಿ ಅದರಲ್ಲೂ ಪ್ರಮುಖವಾಗಿ ಕಬ್ಬು ಬೆಳೆ ಇರುವ ಕೃಷಿ ಪ್ರದೇಶದಲ್ಲಿ ಚಿರತೆಗಳ ಇರುವಿಕೆಯನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಟಾಸ್ಕ್ ಫೋರ್ಸ್ ನಿಯಂತ್ರಣ ಕೊಠಡಿಯನ್ನು ಮೈಸೂರು ಅರಣ್ಯ ಭವನದಲ್ಲಿ ಸ್ಥಾಪಿಸಬೇಕು. ದಿನದ 24 ಗಂಟೆಯೂ ಸಿಬಂದಿ ಕಾರ್ಯನಿರ್ವಹಿಸಬೇಕು. ಸಹಾಯವಾಣಿ ಸಂಖ್ಯೆಯನ್ನು ಸಾರ್ವಜನಿಕರಿಗೆ ಪ್ರಚಾರಪಡಿಸಬೇಕು. ಟಾಸ್ಕ್‌ಫೋರ್ಸ್‌ಗೆ ಅಗತ್ಯ ಇರುವ ಸರ್ಚ್ ಲೈಟ್, ಧ್ವನಿವರ್ಧಕ, 5 ವಾಹನಗಳನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಪಡೆ ಮುಖ್ಯಸ್ಥರು ಒದಗಿಸಬೇಕು. ಚಿರತೆ ಟಾಸ್ಕ್‌ಫೋರ್ಸ್ ತಂಡದ ಮುಖ್ಯಸ್ಥರು ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಸಹಾಯ ಪಡೆಯಬೇಕು ಎಂದು ಸರ್ಕಾರ ಲಿಖಿತ ಆದೇಶ ಹೊರಡಿಸಿದೆ.












Click it and Unblock the Notifications