ಜನಸಾಗರದಿಂದ ತುಂಬಿ ತುಳುಕುತ್ತಿದೆ ಮೈಸೂರಿನ ಸುತ್ತೂರು ಕ್ಷೇತ್ರ
ಮೈಸೂರು, ಫೆಬ್ರವರಿ,05: ಹಳೇ ಮೈಸೂರು ಭಾಗದಲ್ಲಿರುವ ಸುತ್ತೂರು ಶ್ರೀ ಕ್ಷೇತ್ರದ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರೆ ಶುಕ್ರವಾರದಿಂದ ಆರಂಭವಾಗಿದ್ದು, ವಿಭಿನ್ನ ಹಾಗೂ ವಿಶಿಷ್ಟವಾದ ಈ ಜಾತ್ರೆ ದೇಶ ವಿದೇಶಗಳ ಜನರನ್ನು ಸೆಳೆಯುತ್ತಿದೆ.
ಸುತ್ತೂರಿನ ಜಾತ್ರೆ ಪರಂಪರೆ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಮಹೋತ್ಸವಗಳ ಸಂಗಮವಾಗಿದೆ. ಫೆಬ್ರವರಿ 5 ಶುಕ್ರವಾರದಿಂದ ಆರಂಭವಾದ ಜಾತ್ರೆಯಲ್ಲಿ ಜನ ಸಂಭ್ರಮದಿಂದ ಪಾಲ್ಗೊಂಡಿದ್ದು, ಫೆಬ್ರವರಿ 10ರವರೆಗೆ ನಡೆಯುವ ಈ ಜಾತ್ರೆಯ ಯಶಸ್ವಿಯಾಗಿ ಶ್ರೀಮಠದ ವತಿಯಿಂದ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.
ವಸ್ತುಪ್ರದರ್ಶನ, ಕೃಷಿಮೇಳ, ಸಾಂಸ್ಕೃತಿಕ ಕಾರ್ಯಕ್ರಮ, ಅನ್ನದಾಸೋಹ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಸಮಿತಿಯನ್ನು ರಚಿಸಲಾಗಿದ್ದು, ಎಲ್ಲರೂ ಜಾತ್ರೆಯ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. 24ನೇ ಪೀಠಾಧಿಕಾರಿಯಾದ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳ ಸಾರಥ್ಯದಲ್ಲಿ ನಡೆಯುತ್ತಿರುವ ಈ ಜಾತ್ರೆಗೆ ಸುತ್ತಮುತ್ತಲ ಗ್ರಾಮಗಳ ಜನ ಸೇರಿದಂತೆ ದೂರದ ಊರುಗಳಿಂದ ಜನ ಸಾಗರವೇ ಹರಿದು ಬರುತ್ತಿದೆ.[ಚಿತ್ರಗಳು: ಭರ್ಜರಿ ಸಿದ್ಧತೆಯಲ್ಲಿ ಸುತ್ತೂರು ಮಠದ ಜಾತ್ರೆ]
ಇನ್ನು ಸುತ್ತೂರಿನ ಇತಿಹಾಸದ ಬಗ್ಗೆ ನೋಡುವುದಾದರೆ ಇಲ್ಲಿನ ಶ್ರೀ ಮಠಕ್ಕೆ ಸುಮಾರು ಹತ್ತು ಶತಮಾನಗಳ ಗತ ಇತಿಹಾಸವಿರುವುದನ್ನು ನಾವು ಕಾಣಬಹುದು. ಈ ಕ್ಷೇತ್ರ ಶಾಂತಿ, ಸಂಯಮ, ಸಹಬಾಳ್ವೆಯನ್ನು ನಾಡಿಗೆ ಸಾರಿದ ಕ್ಷೇತ್ರವೂ ಹೌದು. ಇದಕ್ಕೆ ಪೂರಕವಾದ ಕಥೆಯೊಂದು ಪ್ರಚಲಿತದಲ್ಲಿರುವುದನ್ನು ನಾವು ಕಾಣಬಹುದು.

ಹತ್ತು ಶತಮಾನದ ಗತ ಇತಿಹಾಸ, ವೈರಿಗಳಾಗಿದ್ದ ರಾಜರು ಯಾರು?
ಅದು ಸುಮಾರು ಒಂದು ಸಾವಿರ ವರ್ಷಗಳ ಹಿಂದಿನ ಕಾಲಾವಧಿ. ರಾಜರ ಆಡಳಿತವಿದ್ದ ದಿನಗಳು. ಎಲ್ಲೆಡೆಯೂ ರಾಜ್ಯ ವಿಸ್ತರಣೆಗಾಗಿ ರಾಜರುಗಳು ಹೋರಾಟ, ದಂಡಯಾತ್ರೆಗಳನ್ನು ಕೈಗೊಳ್ಳುತ್ತಿದ್ದರು. ಆಗಿನ ಕಂಚಿಯ ರಾಜೇಂದ್ರ ಚೋಳನೂ ಹಾಗೂ ತಲಕಾಡಿನ ಗಂಗರಾಜ ರಾಚಮಲ್ಲ ಇಬ್ಬರು ವೈರಿಗಳಾಗಿದ್ದರು.

ರಾಜೇಂದ್ರ ಚೋಳನ ಕುದುರೆ ಯಾರನ್ನು ನೋಡಿ ನಿಂತಿತು?
ರಾಜೇಂದ್ರ ಚೋಳ ಹಾಗೂ ತಲಕಾಡಿನ ಗಂಗರಾಜ ರಾಚಮಲ್ಲ ಇವರಿಬ್ಬರ ನಡುವೆ ಆಗಾಗ್ಗೆ ಯುದ್ಧಗಳು ನಡೆಯುತ್ತಿದ್ದವು. ಒಮ್ಮೆ ಇವರಿಬ್ಬರು ಭಾರೀ ಸೈನ್ಯದೊಂದಿಗೆ ಯುದ್ಧಕ್ಕೆ ಸಜ್ಜಾಗುತ್ತಾರೆ. ಆಗ ರಾಜೇಂದ್ರ ಚೋಳ ಏರಿ ಹೊರಟಿದ್ದ ಕುದುರೆ ಗೊತ್ತುಗುರಿಯಿಲ್ಲದೆ ಓಡತೊಡಗಿತ್ತು. ಏನೇ ಮಾಡಿದರೂ ಕುದುರೆಯನ್ನು ತಡೆದು ನಿಲ್ಲಿಸುವುದಕ್ಕೆ ರಾಜನಿಗೆ ಸಾಧ್ಯವಾಗಲಿಲ್ಲ. ಹಾಗೆ ಓಡಿದ ಕುದುರೆ ಕಪಿಲಾ ನದಿ ತೀರದಲ್ಲಿ ಕುಳಿತು ತಪಸ್ಸು ಮಾಡುತ್ತಿದ್ದ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳಿಗೆ ಪ್ರದಕ್ಷಿಣೆ ಹಾಕಿ ನಿಂತಿತು.

ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳು ರಾಜರಿಗೆ ಬೋಧಿಸಿದ್ದೇನು?
ಕುದುರೆ ಬಿಂತಿದ್ದರಿಂದ ಅಚ್ಚರಿಗೊಂಡ ರಾಜಾ ರಾಜೇಂದ್ರ ಚೋಳ ಕುದುರೆಯಿಂದಿಳಿದು ಧ್ಯಾನದಲ್ಲಿ ನಿರತರಾಗಿದ್ದ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಪಾದಕ್ಕೆರಗುತ್ತಾನೆ. ಅದೇ ವೇಳೆಗೆ ರಾಜೇಂದ್ರ ಚೋಳನ ಕುದುರೆಯನ್ನು ಹಿಂಬಾಲಿಸಿಕೊಂಡು ರಾಚಮಲ್ಲನೂ ಅಲ್ಲಿಗೆ ಬರುತ್ತಾನೆ. ತನ್ನ ಮುಂದೆ ಬಂದು ನಿಂತ ರಾಜರಿಬ್ಬರನ್ನು ಕಂಡ ಶ್ರೀ ಶಿವರಾತ್ರೀಶ್ವರ ಮಹಾಸ್ವಾಮಿಗಳು ಅವರಿಬ್ಬರಿಗೆ ವೈರತ್ವವನ್ನು ಬಿಟ್ಟು ಸಹಬಾಳ್ವೆ ನಡೆಸುವಂತೆಯೂ ಅಲ್ಲದೆ ಯುದ್ಧದಿಂದ ಆಗುವ ಸಾವು ನೋವುಗಳ ಬಗ್ಗೆ ಬೋಧಿಸುತ್ತಾರೆ. ಅವರ ಬೋಧನೆಯಿಂದ ಇಬ್ಬರಿಗೂ ಜ್ಞಾನೋದಯವಾಗುತ್ತದೆ. ಮುಂದೆ ಅವರು ಯುದ್ಧವನ್ನು ಬಿಟ್ಟು ಆ ಪುಣ್ಯ ಕ್ಷೇತ್ರದಲ್ಲಿಯೇ ನೆಲೆಸುತ್ತಾರೆ. ಅಂತಹವೊಂದು ಪುಣ್ಯಕ್ಷೇತ್ರವೇ ಸುತ್ತೂರು ಶ್ರೀ ಕ್ಷೇತ್ರವಾಗಿದೆ.

ಸುತ್ತೂರು ಮಠ ಆರಂಭವಾಗಿದ್ದು ಯಾರಿಂದ?
ಶ್ರೀ ಶಿವರಾತ್ರೀಶ್ವರ ಮಹಾಸ್ವಾಮಿಗಳಿಂದ ಆರಂಭವಾದ ಸುತ್ತೂರು ವೀರಸಿಂಹಾಸನ ಮಠವು ಹತ್ತು ಶತಮಾನಕ್ಕೂ ಹೆಚ್ಚಿನ ಇತಿಹಾಸ ಹೊಂದಿದ್ದು, ಆದಿಗುರು ಶ್ರೀ ಶಿವರಾತ್ರಿಶ್ವರ ಭಗವತ್ಪಾದರಿಂದ (ಕ್ರಿ.ಶ. 950-1030) ಇಲ್ಲಿವರೆಗೆ ಈ ಮಠವು ಹಲವು ಜಗದ್ಗುರುಗಳನ್ನು ಕಂಡಿದ್ದು ಅವರ ವಿವರ ಹೀಗಿದೆ. ಶ್ರೀ ಈಶಾನೇಶ್ವರ ಒಡೆಯರು (1030-1090), ಶ್ರೀ ನಿಜಲಿಂಗಶಿವಾಚಾರ್ಯರು (1090-1170), ಶ್ರೀ ಸಿದ್ಧನಂಜದೇಶಿಕೇಂದ್ರರು (1170-1240), ಶ್ರೀ ಕಪನಿ ನಂಜುಂಡದೇಶಿಕೇಂದ್ರರು (1240-1310), ಶ್ರೀ ಚೆನ್ನವೀರದೇಶಿಕೇಂದ್ರರು (1310-1380), ಶ್ರೀ ಸಿದ್ದಮಲ್ಲಶಿವಾಚಾರ್ಯರು (1380-1470), ಶ್ರೀ ಪರ್ವತೇಂದ್ರ ಶಿವಾಚಾರ್ಯರು (1470-1490), ಶ್ರೀ ಭಂಡಾರಿಬಸಪ್ಪ ಒಡೆಯರು (1490-1515), ಶ್ರೀ ಕೂಗಲೂರು ಶ್ರೀ ನಂಜುಂಡದೇಶೀಕೇಂದ್ರರು (1515-1530), ಶ್ರೀ ಘನಲಿಂಗದೇವರು (1530-1550),

ಸುತ್ತೂರು ಮಠದ ಪೀಠ ಅಲಂಕರಿಸಿದ ಇನ್ನಿತರ ಜಗದ್ಗುರುಗಳು
ಶ್ರೀ ಇಮ್ಮಡಿ ಶ್ರೀ ಶಿವರಾತ್ರೀಶ್ವರ ಸ್ವಾಮಿಗಳು (1550-1590), ಶ್ರೀ ಚೆನ್ನಬಸವದೇಶೀಕೇಂದ್ರರು (1590-1608), ಶ್ರೀ ಗುರುನಂಜದೇಶೀಕೇಂದ್ರರು (1608-1641), ಶ್ರೀ ಚೆನ್ನಬಸವದೇವಾಚಾರ್ಯರು (1641-1713), ಶ್ರೀ ಪಂಚಾಕ್ಷರದೇಶೀಕೇಂದ್ರರು (1713-1730), ಶ್ರೀ ಚಿದ್ಘನಶಿವಾಚಾರ್ಯರು (1730-1750), ಶ್ರೀ ಚೆನ್ನವೀರ ದೇಶಿಕೇಂದ್ರರು (1750-1801), ಶ್ರೀ ಮಹಾಂತ ದೇಶೀಕೇಂದ್ರರು (1801-1842), ಶ್ರೀ ಸಿದ್ಧಮಲ್ಲ ಶಿವಾಚಾರ್ಯರು (1842-1884), ಶ್ರೀ ಶಿವರಾತ್ರಿ ದೇಶೀಕೇಂದ್ರರು (1884-1902), ಶ್ರೀ ಮಂತ್ರಮಹರ್ಷಿ ಪಟ್ಟದ ಶ್ರೀ ಶಿವರಾತ್ರಿ ಮಹಾಸ್ವಾಮಿಗಳು (1902-1926), ರಾಜಗುರುತಿಲಕ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು (1926-1986) ಸೇರಿದಂತೆ ಇಪ್ಪತ್ಮೂರು ಜಗದ್ಗುರುಗಳ ಸೇವೆಯಿಂದ ಶ್ರೀಮಠವು ಅಭಿವೃದ್ಧಿ ಪಥದಲ್ಲಿ ಸಾಗುತ್ತಾ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರ ಮಟ್ಟದಲ್ಲಿ ತನ್ನ ಛಾಪು ಮೂಡಿಸುತ್ತಾ ಸಾಗುತ್ತಿದೆ.












Click it and Unblock the Notifications