ಸಿಎಂ ಸಿದ್ದರಾಮಯ್ಯ ಆರೋಪ ಮುಕ್ತರಾಗಲಿ: ಅಹಲ್ಯಾ ಬೀರಪ್ಪ ದೇವಾಲಯದಲ್ಲಿ ವಿಶೇಷ ಪೂಜೆ
ಮೈಸೂರು, ಸೆಪ್ಟೆಂಬರ್ 16: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾ ಹಗರಣ ಆರೋಪ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದಾರೆ. ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ವಿಚಾರ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಸದ್ಯ ಸಿದ್ದರಾಮಯ್ಯ ಕಾನೂನು ಹೋರಾಟ ನಡೆಸುತ್ತಿದ್ದು, ಸಿದ್ದರಾಮಯ್ಯ ಆರೋಪ ಮುಕ್ತವಾಗಲಿ ಎಂದು ಅವರ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಮೂಡ ಹಗರಣದ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ನ್ಯಾಯಾಲಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನ್ಯಾಯ ಸಿಕ್ಕಿ ಆರೋಪ ಮುಕ್ತವಾಗಿ ಹೊರಬರುವಂತಾಗಲಿ ಎಂದು ಅಹಲ್ಯಾ ಬೀರಪ್ಪ ದೇವಾಲಯದ ಟ್ರಸ್ಟಿನ ವತಿಯಿಂದ ವಿಶೇಷ ಪೂಜೆ ಸಲ್ಲಿಸಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ.

ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಇತಿಹಾಸ ಪ್ರಸಿದ್ಧ ಅಹಲ್ಯ ಗ್ರಾಮದ ಬೀರಪ್ಪ ಕಾಳಮ್ಮ ದೇವರಲ್ಲಿ ದೇವಾಲಯದ ಟ್ರಸ್ಟಿನ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ವಿರೋಧ ಪಕ್ಷದವರು ಸುಳ್ಳು ಆರೋಪ ಮಾಡಿ ನ್ಯಾಯಾಲಯದ ಮೆಟ್ಟಿಲು ಏರುವಂತಾಗಿದೆ. ನ್ಯಾಯಾಲಯದಲ್ಲಿ ನ್ಯಾಯ ಸಿಗುವಂತಾಗಲಿ ಎಂದು ಪೂಜೆ ಸಲ್ಲಿಸಲಾಗಿದೆ ಎಂದು ಪೂಜೆ ಬಳಿಕ ತಿಳಿಸಿದ್ದಾರೆ.
ಪೂಜೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಮುಖಂಡರಾದ ಎಂ. ದಕ್ಷಿಣ ಮೂರ್ತಿ ಮಹಾದೇವ ಮಾತನಾಡಿ, ಸಿದ್ದರಾಮಯ್ಯ ಅವರಿಗೆ ನ್ಯಾಯಾಲಯದಲ್ಲಿ ನ್ಯಾಯ ಸಿಗುವಂತಾಗಲಿ. ವಿರೋಧ ಪಕ್ಷದವರು ಮಾಡಿರುವ ಆರೋಪ ಸುಳ್ಳು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ತಪ್ಪು ಮಾಡಿಲ್ಲ. ಅವರು ನ್ಯಾಯಾಲಯದಲ್ಲಿ ಆರೋಪ ಮುಕ್ತರಾಗಿ ಅವರಿಗೆ ಜಯ ಸಿಗುವಂತಾಗಲಿ ಎಂದು ದೇವರಲ್ಲಿ ಮೊರೆ ಹೋಗಿದ್ದೇವೆ ಎಂದು ತಿಳಿಸಿದರು.

ಈ ವೇಳೆ ಬಿದರಗೋಡು ಗ್ರಾಮದ ಶ್ರೀಭಕ್ತ ಕನಕದಾಸ ಸಂಘದ ಅಧ್ಯಕ್ಷ ಮಹಾದೇವ ಮಾತನಾಡಿ, 'ವಿರೋಧ ಪಕ್ಷದ ಬಿಜೆಪಿ ನಾಯಕರುಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಮಳೆ ಬರುವುದಿಲ್ಲ. ಬರಗಾಲದಲ್ಲಿ ಜನ ತತ್ತರಿಸಿ ಹೋಗಿದ್ದಾರೆ ಎಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದರು. ಆದರೆ ಈಗ ರಾಜ್ಯದ ಎಲ್ಲಾ ಕಡೆಯಲ್ಲೂ ಉತ್ತಮವಾಗಿ ಮಳೆಯಾಗಿದೆ. ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಕೆರೆಕಟ್ಟೆಗಳು ತುಂಬಿವೆ. ಇದರಿಂದ ರಾಜ್ಯದ ರೈತರು ಬಹಳ ಸಂತೋಷದಿಂದ ಬೇಸಾಯ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದವರ ವಿರುದ್ಧ ವಾಗ್ದಾಳಿ ನಡೆಸಿದರು.












Click it and Unblock the Notifications