ಮೈಸೂರಿನ ಹಿರಿಯ ಛಾಯಾಗ್ರಾಹಕ ನೇತ್ರರಾಜು ನಿಧನ
ಮೈಸೂರು, ಮೇ 21: ಮೈಸೂರಿನ ಪ್ರಖ್ಯಾತ ಛಾಯಾಗ್ರಾಹಕ ನೇತ್ರರಾಜು (62) ಶುಕ್ರವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಆಂದೋಲನ, ಟೈಮ್ಸ್ ಆಫ್ ಇಂಡಿಯಾ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಇವರು ಕೆಲಸ ನಿರ್ವಹಿಸಿದ್ದರು. ಇವರ ಛಾಯಾಚಿತ್ರಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮನ್ನಣೆ ಪಡೆದುಕೊಂಡಿದ್ದವು. ನಾಗೇಂದ್ರ ಕುಮಾರ್ ಜೈನ್ ಇವರ ಹೆಸರಾಗಿದ್ದು, ನೇತ್ರರಾಜು ಎಂದೇ ಕರೆಯಲಾಗುತ್ತಿತ್ತು.
ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಸಂಜೆ ನಿಧನರಾಗಿರುವುದಾಗಿ ತಿಳಿದುಬಂದಿದೆ. ಅವರಿಗೆ ಪತ್ನಿ ಹಾಗೂ ಪುತ್ರಿ ಇದ್ದಾರೆ.

2014ರಲ್ಲಿ ನೇತ್ರರಾಜು ಅವರು ಕರ್ನಾಟಕದ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದರು. 2019ರಲ್ಲಿ ದಸರಾ ಸಂದರ್ಭ, ತಾಯಿ ಹಾಗೂ ಮಗ ಬೆರಗುಗಣ್ಣಿನಿಂದ ಅರಮನೆಯ ದೀಪಾಲಂಕಾರ ನೋಡುತ್ತಾ ನಿಂತ ಚಿತ್ರವನ್ನು ತೆಗೆದಿದ್ದು, ಈ ಚಿತ್ರ ಹಲವು ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ನೇತ್ರರಾಜು ಅವರ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಮತ್ತು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಸಂತಾಪ ವ್ಯಕ್ತಪಡಿಸಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದು, "ಮೈಸೂರಿನ ಹಿರಿಯ ಪತ್ರಿಕಾ ಛಾಯಾಗ್ರಾಹಕ ನೇತ್ರರಾಜು ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನುವ ಸಂಗತಿ ತಿಳಿದು ಬಹಳ ಆಘಾತವಾಗಿದೆ. ತಮ್ಮ ಒಳಗಣ್ಣುಗಳನ್ನು ಮಾನವೀಯವಾಗಿ, ಸಹೃದಯತೆಯಿಂದ ತೆರೆದಿರುತ್ತಿದ್ದ ನೇತ್ರರಾಜು ಅವರು ಮೈಸೂರು ದಸರಾ ಸಂದರ್ಭದಲ್ಲಿ ತೆಗೆದಿದ್ದ ಒಂದು ಛಾಯಾಚಿತ್ರ ಈಗಲೂ ಮನಕಲಕುತ್ತದೆ. ಸಹಸ್ರಾರು ಪದಗಳಲ್ಲಿ ವಿವರಿಸಬೇಕಾದ್ದನ್ನು ನೇತ್ರರಾಜು ಅವರ ಒಂದೊಂದು ಛಾಯಾಚಿತ್ರ ಮಾತಾಡುತ್ತಿತ್ತು. ಈ ಕಾರಣಕ್ಕೇ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ನೇತ್ರರಾಜು ಅವರ ವೃತ್ತಿಪರತೆಗೆ ಮತ್ತು ಒಳಗಣ್ಣುಗಳಿಗೆ ಮಾನ್ಯತೆ, ಮೆಚ್ಚುಗೆ ಲಭ್ಯವಾಗಿತ್ತು" ಎಂದು ಹೇಳಿದ್ದಾರೆ.
ಇವರ ಅಗಲಿಕೆ ಪತ್ರಿಕಾ ವೃತ್ತಿಗೆ ತುಂಬಲಾರದ ನಷ್ಟ. ದೇವರು ಇವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.












Click it and Unblock the Notifications