Yuva Dasara: ಯುವ ಸಮೂಹದ ಮನಗೆದ್ದ ರವಿ ಬಸ್ರೂರು ಸಂಗೀತ ಕಾರ್ಯಕ್ರಮ
ಕೆಜಿಎಫ್, ಉಗ್ರಂ ಸೇರಿದಂತೆ ಹಲವು ಪ್ರಮುಖ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿ ಭಾರಿ ಹೆಸರು ಮಾಡಿರುವ ರವಿ ಬಸ್ರೂರು, ಈ ಬಾರಿ ಯುವ ದಸರಾದಲ್ಲಿ ಯುವ ಸಮೂಹವನ್ನು ತಮ್ಮ ಸಂಗೀತದಿಂದ ಮೋಡಿ ಮಾಡಿದರು. ಮೈಸೂರು ದಸರಾ ಅಂಗವಾಗಿ ನಡೆಯುತ್ತಿರುವ ಯುವ ದಸರಾ ಕಾರ್ಯಕ್ರಮದ ಎರಡನೇ ದಿನ, ರವಿ ಬಸ್ರೂರು ಸಂಗೀತ ಕಾರ್ಯಕ್ರಮ ನೀಡಿದರು.
ಕೆಜಿಎಫ್ ಸಿನಿಮಾದ ಗೀತೆಯೊಂದಿಗೆ ಭರ್ಜರಿಯಾಗಿ ವೇದಿಕೆಗೆ ಎಂಟ್ರಿ ಕೊಟ್ಟ ರವಿ ಬಸ್ರೂರು, ಉಗ್ರಂ ವೀರಂ ಗೀತೆಯನ್ನು ಹಾಡುವ ಮೂಲಕ ನೆರೆದಿದ್ದವರನ್ನು ರೋಮಾಂಚನಗೊಳಿಸಿದರು. ನನ್ನ ಜೀವನದ ಸಂಗೀತದ ಪ್ರಯಾಣ ಆರಂಭವಾಗಿದ್ದು ಮೈಸೂರಿನಿಂದಲೇ ಭಕ್ತಿಗೀತೆ ಮೂಲಕ ಆರಂಭಿಸಿದ ಜರ್ನಿ ಇಂದು ಈ ಮಟ್ಟಕ್ಕೆ ಸ್ಥಾನಕ್ಕೆ ತಂದು ನಿಲ್ಲಿಸಿವೆ ಎಂದು ಕಾರ್ಯಕ್ರಮದಲ್ಲಿ ಹೇಳಿದರು.

ಉಗ್ರಂ ಚಿತ್ರದ ಮೂಲಕ ಗುರುತಿಸಿ ಹೆಚ್ಚಿನ ಅವಕಾಶವನ್ನು ನೀಡಿದ್ದಕ್ಕೆ ಇಂದು ಈ ಮಟ್ಟದ ಸಾಧನೆನ್ನು ಮಾಡಿದ್ದೇನೆ ಎಂದ ಅವರು, ಮೈಸೂರು ಜನತೆಗೆ ದಸರಾ ಹಬ್ಬದ ಶುಭಾಶಯವನ್ನು ಕೋರಿದರು.
ಕುಣಿದು ಕುಪ್ಪಳಿಸಿದ ಜನ
ರವಿ ಬಸ್ರೂರು ಅವರು ಸಂಯೋಜಿಸಿರುವ ವಿವಿಧ ಚಿತ್ರದ ಗೀತೆಗಳನ್ನು ಆರಂಭಿಸಿ ಮೈಸೂರಿನ ಯುವ ಜನತೆಯ ಮನ ಸೆಳೆಯುವುದರ ಜೊತೆಗೆ ಕುಣಿದು ಕುಪ್ಪಳಿಸುವಂತೆ ಮಾಡಿದರು. ರೋಜ್ ಚಿತ್ರದ ನಾಯಕಿ ಸಾಧ್ವೀಕ ಅವರು ಬಸಣ್ಣಿ ಬಾ, ಷೇಕ್ ಇಟ್ ಪುಷ್ಪವತಿ, ಬೇಬಿ ಡ್ಯಾನ್ಸ್ ಫ್ಲೋರ್ ರೆಡಿ ಗೀತೆಗಳಿಗೆ ಹೆಜ್ಜೆ ಹಾಕುವ ಮೂಲಕ, ನೋಡುಗರ ಮನಸೂರೆಗೊಂಡರು.
ಪವರ್ ಸ್ಟಾರ್, ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರ ಅಂಜನಿ ಪುತ್ರ ಚಿತ್ರದ ಗೀತೆಯನ್ನು ಹಾಡಿದ ರವಿ ಬಸ್ರೂರು, ನಟ ಪುನೀತ್ ರಾಜ್ ಕುಮಾರ್ ಅವರನ್ನು ನೆನೆಸಿಕೊಂಡರು.
ರವಿ ಬಸ್ರೂರು ತಂಡದ ಗಾಯಕ ಗಾಯಕಿಯರಿಂದ ಸ್ಯಾಂಡಲ್‌ವುಡ್ ನೈಟ್ಸ್ ಕಾರ್ಯಕ್ರಮಕ್ಕೆ ಕಿಚ್ಚು ಹಚ್ಚುವಂತೆ ಗಾಯಕಿ ವಿಜಯಲಕ್ಷ್ಮಿ ಕಬ್ಜ ಸಿನಿಮಾದ ನಮಾಮಿ ನಮಾಮಿ ಗೀತೆಯನ್ನು ಹಾಡುವ ಮೂಲಕ ರೋಮಾಂಚನಗೊಳಿಸಿದರು. ಗಾಯಕ ಸಂತೋಷ್ ವೆಂಕಿ ದ್ವಾಪರದಲ್ಲಿ ಶ್ರೀ ಕೃಷ್ಣ ಗೀತೆಯೂ ಯುವ ಮನಸನ್ನು ಮುಟ್ಟಿತು. ಕನ್ನಡ ಕೋಗಿಲೆ ಖ್ಯಾತಿಯ ದಿವ್ಯ ರಾಮಚಂದ್ರ ಅವರು ಕನ್ನಡ ನಾನು ಕೋಳಿಗೆ ರಂಗ ಎಂಬ ರ್‍ಯಾಪ್ ಗೀತೆಗೆ ಮೈದಾನದಲ್ಲಿ ನೆರೆದಿದ್ದ ಯುವ ಸಮೂಹ ಹುಚ್ಛೆದು ಕುಣಿದು ಕುಪ್ಪಳಿಸಿದರು. ತಂಡದ ಸಂತೋಷ್ ವೆಂಕಿ ಹಾಗೂ ಸಂಗಡಿಗರು ಮೈಸೂರು ದಸರಾ ಗೀತೆಯನ್ನು ವಿಭಿನ್ನ ಶೈಲಿಯಲ್ಲಿ ಹಾಡಿ ಮನ ಸೆಳೆದರು.
ಮೈಸೂರು ಜಿಲ್ಲಾ ಡ್ಯಾನ್ಸ್ ಕೊರಿಯೋಗ್ರಾಫರ್ ಅಸೋಸಿಯೇಷನ್ ತಂಡವು ಯುವ ದಸರಾ ಕಾರ್ಯಕ್ರಮಕ್ಕೆ ಮೆರಗು ತರುವಂತೆ ದರ್ಶನ, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ಯಶ್ ಹೀಗೆ ವಿವಿಧ ಕಲಾವಿದರ ಚಿತ್ರಗೀತೆಗಳಿಗೆ ನೃತ್ಯವನ್ನು ವೇದಿಕೆಯಲ್ಲಿ ಪ್ರದರ್ಶಿಸಿ ಜನರ ಕಣ್ಮನ ಸೆಳೆದರು.
ಎರಡನೇ ದಿನದ ಯುವ ದಸರಾ ಕಾರ್ಯಕ್ರಮ ಆರಂಭಕ್ಕೂ ಮುನ್ನ ಯುವ ಸಂಭ್ರಮ ವೇದಿಕೆಯಲ್ಲಿ ಅವಕಾಶ ಸಿಗದ ವಿವಿಧ ಕಲಾತಂಡಗಳಿಂದ ಕಾರ್ಯಕ್ರಮವನ್ನು ಆಯೋಜಿಸಲಾಗತ್ತು. ಕೆ ಆರ್ ನಗರ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿಯರಿಂದ ಸಮಾಜದಲ್ಲಿ ನಡೆಯುತ್ತಿರುವ ಅತ್ಯಾಚಾರದ, ನ್ಯಾಯ, ಆಡಳಿತದ ಕುರಿತು ನೃತ್ಯದ ಮೂಲಕ ಸಾಮಾಜಿಕ ಸಂದೇಶವನ್ನು ಸಾರಿದರು.
ಮಡಿಕೇರಿಯ ಪ್ರಥಮ ದರ್ಜೆ ಕಾಲೇಜಿನ ಕಲಾ ತಂಡವು ತುಳು ನಾಡಿನ ವಿಶೇಷ ಯಕ್ಷಗಾನ ನೃತ್ಯ, ಕೊಡಗಿನ ಡ್ಯಾನ್ಸ್, ಕಾಡಿನ ಹಾಡಿಯ ಜನರ ಕಲಾಪ್ರಕಾರ, ಹಾಗೂ ಕೊಡವ ವಿಶೇಷ ನೃತ್ಯದ ಮೂಲಕ ಸಾರ್ವಜನಿಕರ ಗಮನ ಸೆಳೆದರು.












Click it and Unblock the Notifications