ಮೈಸೂರು: ಮನೆಗಳಿಗೆ ಕನ್ನ ಹಾಕುತ್ತಿದ್ದ ಖತರ್ನಾಕ್ ಕಳ್ಳರ ಬಂಧನ
ಮೈಸೂರು, ಸೆಪ್ಟೆಂಬರ್ 19 : ಪ್ರತ್ಯೇಕ ಪ್ರಕರಣದಲ್ಲಿ ಮನೆಕಳ್ಳತನದಲ್ಲಿ ತೊಡಗಿದ್ದ ಒಂದೇ ಊರಿನ ಇಬ್ಬರು ಖದೀಮರನ್ನು ಪಿರಿಯಾಪಟ್ಟಣ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ಹಿಟ್ನೆಹೆಬ್ಬಾಗಿಲು ಗ್ರಾಮದ ನಿವಾಸಿಗಳಾದ ರಘು ಹಾಗೂ ಮಣಿಕಂಠ ಬಂಧಿತ ಖದೀಮರು. ಇವರು ಗ್ರಾಮಗಳ ಮನೆಗಳಲ್ಲಿ ಯಾರೂ ಇಲ್ಲದನ್ನು ಗಮನಿಸಿ ಬಳಿಕ ಕಳ್ಳತನಕ್ಕೆ ಸಂಚು ರೂಪಿಸುತ್ತಿದ್ದರು ಎನ್ನಲಾಗಿದೆ.

ಹಿಟ್ನೆಹೆಬ್ಬಾಗಿಲು ಗ್ರಾಮದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕಾಮರಾಜು ಎಂಬುವವರ ಮನೆಯಲ್ಲಿ ಸೆ.14 ರಂದು ಒಂದು ಲಕ್ಷ ರು. ಕಳ್ಳತನವಾಗಿತ್ತು. ಈ ಬಗ್ಗೆ ಅವರು ಸೆ.17ರಂದು ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾದ ಸಿಐ ಎಚ್.ಎನ್.ಸಿದ್ದಯ್ಯ, ಕ್ರೈಂ ಸಬ್ ಇನ್ಸ್ ಪೆಕ್ಟರ್ ಸಿದ್ದಯ್ಯ ಮತ್ತು ಸಿಬ್ಬಂದಿ ತನಿಖೆ ಆರಂಭಿಸಿದ್ದರು. ಈ ವೇಳೆ ಸಿಕ್ಕ ಸುಳಿವಿನ ಮೇರೆಗೆ ಅದೇ ಗ್ರಾಮದ ರಘು ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ತಾನೆ ಕಳ್ಳತನ ನಡೆಸಿರುವುದಾಗಿ ಒಪ್ಪಿಕೊಂಡಿದ್ದನು.
ಇದು ಮಾತ್ರವಲ್ಲದೆ, ಕೆಲವು ದಿನಗಳ ಹಿಂದೆ ಹರೀಶ್ ಎಂಬುವವರ ಮನೆಯಲ್ಲಿ 1 ಲಕ್ಷ ರು.ಗಳನ್ನು ಕೂಡ ತಾನೇ ಮಾಡಿದ್ದಾಗಿ ಒಪ್ಪಿಕೊಂಡಿದ್ದಲ್ಲದೆ, ಕಳ್ಳತನ ಮಾಡಿದ ಹಣದಲ್ಲಿ ಗೋವಾ ಪ್ರವಾಸಕ್ಕೆ ತೆರಳಿದ್ದನು. ಹಾಗೂ ಪ್ಯಾಷನ್ ಪ್ಲಸ್ ಬೈಕ್ ಖರೀದಿಸಿದ್ದನು.
ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಇದೇ ಹಿಟ್ನೆಹೆಬ್ಬಾಗಿಲು ಗ್ರಾಮದಲ್ಲಿ ಆರು ತಿಂಗಳ ಹಿಂದೆ ಮಂಜು ಎಂಬುವರ ಮನೆಯಲ್ಲಿ 1.20 ಲಕ್ಷ ರು.ಗಳು ಕಳ್ಳತನವಾಗಿದ್ದ ಬಗ್ಗೆಯೂ ದೂರು ದಾಖಲಾಗಿದ್ದ ಬಗ್ಗೆಯೂ ವಿಚಾರಣೆ ನಡೆಸಿದ್ದರು.
ಈ ವೇಳೆ ಗ್ರಾಮದ ಮಣಿ ಅಲಿಯಾಸ್ ಮಣಿಕಂಠ ಎಂಬಾತನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿತ್ತು. ಆತನನ್ನು ವಿಚಾರಣೆಗೊಳಪಡಿಸಿದಾಗ ವಿಚಾರಣೆ ವೇಳೆ ಈತ ತಪ್ಪೊಪ್ಪಿಕೊಂಡಿದ್ದಾನೆ.
ತನ್ನ ಚಿಕ್ಕಪ್ಪನ ಮನೆಯಲ್ಲಿಯೆ ಕಳ್ಳತನ ನಡೆಸಿರುವುದಾಗಿ ತಿಳಿಸಿದ್ದು, ಸದ್ಯ ಈತನಿಂದ 12 ಸಾವಿರ ರು. ನಗದು ಮತ್ತು ಒಂದು ಬೈಕ್ ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.












Click it and Unblock the Notifications