Mysuru Palace: ಮೈಸೂರು ಅರಮನೆ ಪ್ರವೇಶ ಶುಲ್ಕ ಏರಿಕೆಗೆ ತೀವ್ರ ವಿರೋಧ
ಮೈಸೂರು, ಅಕ್ಟೋಬರ್ 26: ಅರಮನೆ ಪ್ರವೇಶ ಟಿಕೆಟ್ ದರ ಏರಿಕೆಗೆ ತೀವ್ರ ವಿರೋಧಗಳು ಎದುರಾಗುತ್ತಿದ್ದು, ಹಲವು ಸಂಘ ಸಂಸ್ಥೆಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮೈಸೂರಿಗೆ ಪ್ರವಾಸಿಗರು ಅರಮನೆಯನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅದರಲ್ಲೂ ವಿದೇಶಿಗರು ಅರಮನೆಯನ್ನು ನೋಡಿ ಖುಷಿಪಡುತ್ತಾರೆ. ಹೀಗಿರುವಾಗಿ ಪ್ರವೇಶ ಟಿಕೆಟ್ ದರವನ್ನು ಹೆಚ್ಚಿಸಿರುವುದು ಪ್ರವಾಸಿಗರು ಮಾತ್ರವಲ್ಲದೆ, ಪ್ರವಾಸೋದ್ಯಮಕ್ಕೆ ಪೂರಕವಾಗಿರುವ ಉದ್ಯಮದವರ ಆಕ್ರೋಶಕ್ಕೆ ಕಾರಣವಾಗಿದೆ.
ಈ ನಡುವೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಮಾಜಿ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ವಿರೋಧ ವ್ಯಕ್ತಪಡಿಸಿದ್ದಾರೆ. ವಿದೇಶಿಯರಿಗೆ ಇದುವರೆಗೆ 300ರೂ ದರ ಇತ್ತು. ಅದನ್ನು ಏಕಾಏಕಿ 1000 ರೂ.ಗೆ ಏರಿಕೆ ಮಾಡಿದ್ದಾರೆ. ಬೇರೆ ದೇಶಗಳಲ್ಲಿ ಇಷ್ಟು ದರ ಇಲ್ಲ. ವಿದೇಶಿ ಪ್ರಜೆಗಳು ನಮ್ಮ ದೇಶದ ಪ್ರವಾಸಿ ಕೇಂದ್ರಗಳಿಗೆ ಭೇಟಿ ನೀಡಿದಷ್ಟು ನಮ್ಮ ಸಂಸ್ಕಾರ, ಸಂಸ್ಕೃತಿ ಮೆಚ್ಚಿಕೊಳ್ಳುತ್ತಾರೆ.

ಹೊರ ದೇಶದಲ್ಲಿ ನಮ್ಮ ದೇಶದ ಬಗ್ಗೆ ಪ್ರಚಾರ ಸಿಗುವುದು ನಮ್ಮ ಕಲೆಗೆ ಬೆಲೆ ಬರುತ್ತದೆ. ವಿದೇಶಿಗರು ಹಲವಾರು ದೇಶ ಸುತ್ತಿರುತ್ತಾರೆ. ನಮ್ಮಲ್ಲಿ ಹೆಚ್ಚು ದರ ಇದ್ದರೆ ಯಾರೂ ಬರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ವಿದೇಶಿ ಪ್ರಜೆಗಳು ಮೈಸೂರಿಗೆ ಬಂದಾಗ ಕೇವಲ ಅರಮನೆಗೆ ಮಾತ್ರ ಬರಲ್ಲ. ಮೈಸೂರಿನ ಸುತ್ತಮುತ್ತಲ ಪ್ರವಾಸಿ ಕೇಂದ್ರಗಳಿಗೂ ಆದಾಯ ಬರುತ್ತದೆ. ಹೀಗಾಗಿ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಪ್ರವೇಶ ದರ ಏರಿಕೆಯನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಮತ್ತೊಂದೆಡೆ ಮೈಸೂರು ಟ್ರಾವೆಲ್ಸ್ ಅಸೋಸಿಯೇಶನ್ ಕೂಡ ವಿರೋಧ ವ್ಯಕ್ತಪಡಿಸಿದ್ದು, ಮೈಸೂರು ಅರಮನೆ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಪ್ರವೇಶ ದರವನ್ನು ಹೆಚ್ಚಿಸಲಾಗಿದೆ. ವಿದೇಶಿಗರಿಗೆ 100 ರೂ. ಇದ್ದ ಪ್ರವೇಶ ದರ ಈಗ 1000 ರೂ. ಆಗಿದೆ. ಮೈಸೂರು ಅರಮನೆ ಮಂಡಳಿಯ ಈ ನಡೆಯನ್ನು ಮೈಸೂರು ಟ್ರಾವೆಲ್ಸ್ ಅಸೋಸಿಯೇಶನ್ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದ್ದಾರೆ.

ಟ್ರಾವೆಲ್ ಏಜೆಂಟ್ ಗಳಾದ ನಾವು ಹಲವು ತಿಂಗಳುಗಳ ಮುನ್ನವೇ ವಿದೇಶಿಗರ ಬಳಿ ಬುಕಿಂಗ್ ಪಡೆದಿರುತ್ತೇವೆ. ಟೂರ್ ಪ್ಲಾನ್ ಮಾಡಿರುತ್ತೇವೆ. ಅರಮನೆ ಪ್ರವೇಶಕ್ಕೆ ಹಳೆಯ ದರಕ್ಕೆ ಅನುಗುಣವಾಗಿ ಹಣ ಪಡೆದಿರುತ್ತೇವೆ. ಆದರೆ ಹೀಗೆ ಏಕಾಏಕಿ ಟಿಕೆಟ್ ದರ ಏರಿಕೆ ಮಾಡಿದರೆ ನಾವು ನಮ್ಮ ಗ್ರಾಹಕರಿಗೆ ಏನು ಉತ್ತರ ನೀಡಬೇಕು? ಇದರಿಂದ ಆಗುವ ನಷ್ಟವನ್ನು ನಾವು ಹೇಗೆ ಭರಿಸಬೇಕು? ಈ ರೀತಿ ನಿರ್ಧಾರ ಕೈಗೊಳ್ಳುವ ಕನಿಷ್ಠ ಆರು ತಿಂಗಳ ಮುನ್ನ ನಮಗೆ ಮಾಹಿತಿ ನೀಡಬೇಕು.
ಅದನ್ನು ಹೊರತುಪಡಿಸಿ ಈ ರೀತಿ ಇದ್ದಕ್ಕಿಂದ್ದಂತೆ ಬೆಲೆ ಏರಿಕೆ ಮಾಡಿರುವುದು ತೀವ್ರ ಖಂಡನೀಯ. ಇದಕ್ಕೆ ಮೈಸೂರಿನ ಪ್ರವಾಸೋದ್ಯಮಿಗಳ ತೀವ್ರ ವಿರೋಧ ಇದೆ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಮರುಪರಿಶೀಲನೆ ಮಾಡಿ ನಿರ್ಧಾರವನ್ನು ನವೀಕರಿಸಬೇಕು ಎಂದು ಈ ಮೂಲಕ ಮನವಿ ಮಾಡುತ್ತೇವೆ ಎಂದು ಮೈಸೂರು ಟ್ರಾವೆಲ್ಸ್ ಅಸೋಸಿಯೇಶನ್ ಅಧ್ಯಕ್ಷ ಬಿ.ಎಸ್.ಪ್ರಶಾಂತ್ ಹೇಳಿದ್ದಾರೆ. ಒಟ್ಟಾರೆಯಾಗಿ ಮೈಸೂರು ಅರಮನೆ ಪ್ರವೇಶ ಶುಲ್ಕ್ ಏರಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.












Click it and Unblock the Notifications